ಮೊಘಲರು, ಖಿಲ್ಜಿಗಳು, ಬ್ರಿಟಿಷರ ಕಾಲದಲ್ಲಿ, 65 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ನಡೆಯದ ಕಾರ್ಯ ಏಳೇ ವರ್ಷದಲ್ಲಿ ಬಿ.ಜೆ.ಪಿಯಿಂದ ನಡೆದಿದೆ”: “ಹಿಂದುತ್ವ, ಶ್ರೀ ರಾಮಮಂದಿರ, ಗೋರಕ್ಷಣೆ ಹೆಸರಿನಿಂದ ಅಧಿಕಾರಕ್ಕೆ ಬಂದು ಬಿಜೆಪಿಯಿಂದ ದೇಗುಲ ಒಡೆಯುವ ಕಾರ್ಯ”: “ಮತ್ತೆ ದೇಗುಲ‌ ಕಟ್ಟಿದರೆ 700 ವರ್ಷಗಳ ಹಿಂದಿನ ವೈಭವ ಹಿಂದಿರುಗಲು ಸಾಧ್ಯವೇ?”: “ಹನುಮಂತ, ಚಾಮುಂಡೇಶ್ವರಿ ದೇವರ ಶಾಪದಿಂದ ಬಿಜೆಪಿ ಇನ್ನಷ್ಟು ತಪ್ಪುಗಳನ್ನು ಮಾಡಲಿದೆ”: ಜನಪ್ರತಿನಿಧಿಗಳು, ಬಿಜೆಪಿ ವಿರುದ್ಧ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಕಿಡಿನುಡಿ

 

ಬೆಳ್ತಂಗಡಿ: ಹಿಂದುತ್ವದ ಹೆಸರಿನಲ್ಲಿ ಮತ ಪಡೆದು ಅಧಿಕಾರ ಪಡೆದ ರಾಷ್ಟ್ರೀಯ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು, ಶಾಸಕರು, ಸಂಸದರು ಎಲ್ಲರೂ ಸೇರಿಕೊಂಡಿದ್ದಾರೆ. ದೇಶ ಕಟ್ಟುತ್ತೇವೆ, ರಾಮ ಮಂದಿರ ನಿರ್ಮಿಸುತ್ತೇವೆ, ಭಾರತವನ್ನು ವಿಶ್ವಗುರುವಾಗಿಸುತ್ತೇವೆ ಎಂದು ಗೆದ್ದು ಅಧಿಕಾರ ಪಡೆದು ಹೆಂಡತಿ ಮಕ್ಕಳ ಜೋಳಿಗೆ ತುಂಬಿಸುವುದರಲ್ಲಿ ನಿರತರಾಗಿದ್ದಾರೆ. ದೇಶದಲ್ಲಿ ಮೊಘಲರು, ಖಿಲ್ಜಿಗಳು, ಬ್ರಿಟಿಷರ ಕಾಲದಲ್ಲಿ ನಡೆಯದ ಘಟನೆಗಳು ಇಂದು ರಾಜ್ಯದಲ್ಲಿ ಹಿಂದುತ್ವದ ಹೆಸರಿನಿಂದ ಅಧಿಕಾರಕ್ಕೆ ಬಂದ ಪಕ್ಷದಿಂದ ನಡೆಯುತ್ತಿದೆ. ಕಾಂಗ್ರೆಸ್ 65 ವರ್ಷದಲ್ಲಿ ಮಾಡದ ಕಾರ್ಯ ಇದೀಗ ಬಿಜೆಪಿ ಏಳೇ ವರ್ಷದಲ್ಲಿ ಮಾಡಿದೆ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.

 

 

ಅವರು ಬೆಳ್ತಂಗಡಿ ಮಿನಿ ವಿಧಾನಸೌಧ ಬಳಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕವತಿಯಿಂದ ಧಾರ್ಮಿಕ ಕೇಂದ್ರಗಳ ಮೇಲಿನ ದಾಳಿ ವಿರೋಧಿಸಿ ಹಮ್ಮಿಕೊಂಡಿದ್ದ ಬೃಹತ್ ಹಿಂದೂ ಜನಜಾಗೃತಿ ಸಭೆ ಉದ್ದೇಶಿಸಿ ಮಾತನಾಡಿದರು.
ಹಿಂದೂ ಸಮಾಜದ ಹೆಸರು ಬಳಸಿಕೊಂಡು ಅಧಿಕಾರಕ್ಕೆ ಬಂದು ಇದೀಗ ದೇವಸ್ಥಾನ ಒಡೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇವರು ಹಿಂದೂ ಸಮಾಜದ ಹೆಸರು ಬಳಸಿಕೊಂಡು ಅಧಿಕಾರಕ್ಕೆ ಬಂದು, ಇಂದು ಹಿಂದೂ ಪರ ಕೆಲಸ ನಿರ್ವಹಿಸಿದ ಹಿರಿಯ ಕಾರ್ಯಕರ್ತರು, ಪಕ್ಷಕಟ್ಟಿದವರನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಆರ್.ಎಸ್.ಎಸ್.ಗೆ ಬೇರೆ ಯಾರೂ ಮುಖ್ಯಮಂತ್ರಿ ಸಿಗಲಿಲ್ವಾ. ಧರ್ಮದ ಶಿಕ್ಷಣ ಇಲ್ಲದವರನ್ನು ಅಧಿಕಾರದಲ್ಲಿ‌ ಕೂರಿಸಿದರೆ ಇದೇ ರೀತಿ ಆಗುತ್ತದೆ. ಯಾವುದೇ ರಾಜಕೀಯ ಪಕ್ಷಗಳಿಂದ ಹಿಂದೂ ಧರ್ಮದ ಉಳಿವು ಅಸಾಧ್ಯ. ಇಂದು ನಡೆದಿರುವ ಜಾಗೃತಿ ಸಭೆ ಕೇವಲ ಝಲಕ್ ಮಾತ್ರ ಮುಂದೆ ಇನ್ನೂ ದೊಡ್ಡ ದೊಡ್ಡ ಹೋರಾಟಗಳು ಬಾಕಿ ಇವೆ ಎಂದರು.

 

 

ಗಾಯಗೊಳಿಸಿ ಕ್ಷಮೆ ಕೇಳಿದರೆ ಸರಿಯಾ.‌‌?:
ಮೈಸೂರಿನ ಸುಮಾರು 700 ವರ್ಷಗಳ ಹಿಂದಿನ ದೇಗುಲವನ್ನು ಒಡೆದು ಹಾಕಿದ್ದಾರೆ. ಇದೀಗ ಮತ್ತೆ ಕಟ್ಟಿ ಕೊಡುತ್ತೇವೆ ಎನ್ನುತ್ತಾರೆ. ಈಗ ಕಟ್ಟಿದರೆ ಅದು ಹಿಂದಿನ ವೈಭವವನ್ನು ಪಡೆಯಲು ಸಾಧ್ಯವೇ…? ಅಂದಿನ ಕಾಲದ ತಂತ್ರಿಗಳಿಗಿದ್ದ ಶಕ್ತಿ ಈಗಿನವರಿಗೆ ಇದೆಯೇ…? ಈಗ ಕಟ್ಟಿದರೂ 700 ವರ್ಷಗಳ ಹಿಂದಿನ ಬ್ರಹ್ಮ ಕಲಶ, ಪ್ರತಿಷ್ಟಾಪನೆ ಮಾಡಿದಂತೆ ಆಗುತ್ತದೆಯೇ. ಮುಖ್ಯಮಂತ್ರಿಗಳ ‌ಮೇಲೆ ಹಲ್ಲೆ ನಡೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಸರಿಮಾಡಿದ್ದೇವೆ ಎಂದು ತಿಳಿಸಿ, ಬಳಿಕ ತಪ್ಪಾಯ್ತು ಎಂದು ಕ್ಷಮೆ ಕೇಳಿದರೆ ಅವರು ನಮ್ಮನ್ನು ಸುಮ್ಮನೆ ಬಿಡುತ್ತಾರೆಯೇ…? ಮಾಡಿದ ಗಾಯ ಮಾಸಿ ಹೋಗುತ್ತದೆಯೇ…? ಇದನ್ನು ಬಿ.ಜೆ.ಪಿ.ಯವರು ‌ಅರ್ಥ ಮಾಡಿಕೊಳ್ಳಬೇಕು ಎಂದರು.

 

 

 

ಬಯಲಾಗಲಿದೆ ಭ್ರಷ್ಟಾಚಾರ:

ನಾವು ಹಿಂದುತ್ವದ ರಕ್ಷಣೆ ಮಾಡಿದರೆ ಮುಂದೆ ನಮ್ಮ ರಕ್ಷಣೆ ಆಗಲಿದೆ ಎಂಬುದನ್ನು ಹಿಂದೂ ಸಮಾಜ ಅರ್ಥಮಾಡಿಕೊಳ್ಳಬೇಕು. ದುಡ್ಡು ಯಾವತ್ತಿಗೂ ನಮ್ಮ ಬಳಿ‌ ಇರಲು ಸಾಧ್ಯವಿಲ್ಲ, ಆದರೆ ಮಾಡಿದ ಉತ್ತಮ ಕಾರ್ಯಗಳು ಶಾಶ್ವತ. ಹಿಂದೆ ಬೆಳ್ತಂಗಡಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷನಾಗಲು ಹಿಂದೇಟು ಹಾಕುತ್ತಿದ್ದ ದಿನವಿತ್ತು. ಆದರೆ ಇಂದು ದುಡ್ಡು‌ ಮಾಡುವ ಸಲುವಾಗಿ ಪಕ್ಷಗಳಿಕೆ ಸೇರಿಕೊಳ್ಳುತ್ತಿದ್ದಾರೆ. ಇದೀಗ ಬಿಜೆಪಿ ಪಕ್ಷದಲ್ಲಿ ಅತ್ಯಾಚಾರಿಗಳ ಗುಂಪು ಸೇರಿಕೊಂಡಿದೆ. ಆ ಪಕ್ಷದಲ್ಲಿ ಕಡಿಮೆಯಾಗಿದೆಯೆಂದು ಬೇರೆ ಪಕ್ಷದಿಂದಲೂ ಕರೆಸಿಕೊಳ್ಳುತ್ತಿದ್ದಾರೆ. ಅತ್ಯಾಚಾರಕ್ಕೊಳಗಾದ ಯುವತಿಯೇ ಜಾರಕಿಹೋಳಿ ಹೆಸರು ಹೇಳಿದರೂ ಅವರನ್ನು ಬಂಧಿಸುವ ಕಾರ್ಯ ನಡೆದಿಲ್ಲ. ಹಿಂದೆ ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸೌಜನ್ಯ ಅತ್ಯಾಚಾರ ಪ್ರಕರಣ ನಡೆದಿತ್ತು. ಇದೀಗ ಅವರನ್ನೇ ಇಂತಹ ಪ್ರಕರಣ ಸುತ್ತಿಕೊಂಡಿದೆ. ಮುಂದೆಯೂ ಬಿ.ಜೆ.ಪಿ. ಪಕ್ಷಕ್ಕೆ ಅಂಟಿರುವ ಕಳಂಕಗಳು ಹೆಚ್ಚಾಗಲಿವೆ. ಯಾವ ಶಾಸಕರು, ಸಂಸದರು ಭ್ರಷ್ಟಾಚಾರ ಮಾಡುತ್ತಿದ್ದಾರೆ ಈ ಕುರಿತು ಸಿ.ಡಿ. ಬಿಡುಗಡೆಯನ್ನೂ ಮಾಡಲಿದ್ದೇನೆ. ಇದು ಕೇವಲ ಝಲಕ್ ಗುಡುಗು, ಸಿಡಿಲು ಮುಂದೆ ಬಾಕಿ ಇದೆ ಎಂದು ಹೇಳಿದರು.

 

 

ಪ್ರಭಾವಿಗಳಿಗೆ ಪ್ರತ್ಯೇಕ ನ್ಯಾಯ…?:

ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಬಡ ಜನರು ಒಂದು ಹಿಡಿ ಅಕ್ಕಿಗೂ ಕಷ್ಟ ಪಡುತ್ತಿದ್ದಾರೆ. ಆದರೆ ಕೆಲವರು ಕೊರೋನಾ ಸಂದರ್ಭದಲ್ಲೂ ದುಡ್ಡು ಮಾಡುತ್ತಾರೆ. ಪ್ರಭಾವಿಗಳು ಎಲ್ಲಾ ಸ್ವಂತಕ್ಕೋಸ್ಕರ ಮಾಡುವುದು ಹೆಚ್ಚಾಗಿದೆ‌. ಎಲ್ಲಾ ಇಲಾಖೆಗಳನ್ನು ಖಾಸಗೀಕರಣ ಮಾಡುತ್ತಿದ್ದಾರೆ. ಇದೀಗ ಮೆಸ್ಕಾಂ ಹೆಸರು ಕೇಳಿ ಬರುತ್ತಿದೆ, ಮುಂದೆ ರೇಲ್ವೇ, ತಾಲೂಕು ಆಫೀಸ್, ಡಿ.ಸಿ. ಆಫೀಸ್ ಖಾಸಗೀಕರಣ ಮಾಡಿಸಿ ಕೊನೆಗೆ ಅವರ ಹೆಂಡತಿ‌ ಮಕ್ಕಳನ್ನೂ ಮಾರಿ ಅಮೇರಿಕಾದಲ್ಲಿ ಹೋಗ್ತಾರಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ‌. ದೇಶವನ್ನೇ ಸರ್ವನಾಶ ಮಾಡಲು ಹೊರಟಿದ್ದಾರೆ. ಒಟ್ಟಿನಲ್ಲಿ ಬಡವನಿಗೊಂದು ನ್ಯಾಯ, ಪ್ರಭಾವಿಗಳಿಗೆ ಒಂದು ನ್ಯಾಯ ಎಂಬಂತಾಗಿದೆ‌. ಬಡವನೊಬ್ಬ ಕೇಸ್ ದಾಖಲಿಸಿದರೆ ಲೆಕ್ಕಕ್ಕೇ ಇಲ್ಲ ಎಂಬಂತಾಗಿದೆ‌.‌ ನಮಗೆ‌ ಪ್ರತಿಭಟನೆ, ಜಾಗೃತಿ ಜಾಥಾ ಸಂದರ್ಭದಲ್ಲಿ ಮೈಕ್ ನಲ್ಲಿ ಮಾತಾಡಲು ಅನುಮತಿ‌‌ ಪಡೆಯಬೇಕು ಆದರೆ ಅನುಮತಿ ನೀಡುತ್ತಿಲ್ಲ. ಆದರೆ ಡ್ರಗ್ ಕೇಸಿನಲ್ಲಿ ಪ್ರಭಾವಿ ನಟ, ನಟಿಯರ ಹೆಸರು ಕೇಳಿ‌ ಬಂದಿದ್ದರೂ ಜೈಲಿಗೆ ಹೋಗಿದ್ದರೂ ಇಂದು ಜನಸಾಮಾನ್ಯರಂತೆ ತಿರುಗಾಡುತ್ತಿದ್ದಾರೆ ಎಂದರು.

 

 

 

 

 

 

error: Content is protected !!