ಕಾಳಿಂಗ ಕಚ್ಚಿದರೆ ಹದಿನೈದೇ ನಿಮಿಷ ಆಯಸ್ಸು!, ವಿಷಕಾರಿ ಹಾವು ಕಚ್ಚಿದರೆ ತುರ್ತು ಚಿಕಿತ್ಸೆ ಅಗತ್ಯ: ಉರಗ ರಕ್ಷಕ ಲಾಯಿಲಾ ಸ್ನೇಕ್ ‌ಅಶೋಕ್ ಸಂದರ್ಶನದ ವಿಶೇಷ ವರದಿ: ಪರಿಸರ ಸಮತೋಲನಕ್ಕೆ ಕೊಡುಗೆ ನೀಡುವ ರೈತ‌ ಸ್ನೇಹಿ ಹಾವುಗಳು: ಸ್ಥಳೀಯ ಉರಗ ರಕ್ಷಕರಿಗೆ‌ ಬೇಕಿದೆ ಅಧಿಕೃತ ಮಾನ್ಯತೆ, ಇಲ್ಲವಾದಲ್ಲಿ ವಲಯವಾರು ಉರಗ ರಕ್ಷಕರ ನೇಮಿಸಲಿ ಸರಕಾರ: 11 ವರ್ಷದಲ್ಲಿ 6 ಸಾವಿರಕ್ಕೂ ಹೆಚ್ಚು ಉರಗ ರಕ್ಷಿಸಿದ ಉರಗ ಪ್ರೇಮಿ, 170ಕ್ಕೂ ಹೆಚ್ಚು ಕಾಳಿಂಗ ಸರ್ಪಗಳ ರಕ್ಷಣೆ:

 

ವರದಿ: ಪ್ರಸಾದ್ ಶೆಟ್ಟಿ ಎಣಿಂಜೆ

ಬೆಳ್ತಂಗಡಿ: ಹಾವು ಹಿಡಿದಿರುವ ಅನುಭವ, ಹಾವುಗಳ ಪ್ರತ್ಯೌಷಧಿ‌ ತಯಾರಿಸುವ ವಿಧಾನ, ಹಾವು ಹಿಡಿಯಲು‌ ಕಲಿಸಿದ ಗುರುಗಳು, ತಾಲೂಕಿನ ಬೇರೆ ಬೇರೆ ವಲಯಗಳಲ್ಲಿ ಉರಗ ರಕ್ಷಕರ‌ ಅಗತ್ಯತೆ, ಉರಗಗಳಿಗೂ ಆರೋಗ್ಯ ಕೇಂದ್ರ ತೆರೆಯಬೇಕಾದ ಅನಿವಾರ್ಯತೆ, ಹಾವು ಕಡಿತಕ್ಕೆ ಒಳಪಟ್ಟಾಗ ನಡೆದ ಘಟನೆ, ಹಾವು ಕಚ್ಚಿದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಹೀಗೆ ಹಲವು ವಿಚಾರಗಳ ಕುರಿತು ವೈರಲ್ ಆಗಿರುವ ತಮ್ಮ ವಿಡಿಯೋ ಮೂಲಕ ರಾಷ್ಟ್ರ ಮಟ್ಟದಲ್ಲಿ ಗಮನಸೆಳೆದಿರುವ ಉರಗ ಪ್ರೇಮಿ ಸ್ನೇಕ್ ಅಶೋಕ್ ‘ಪ್ರಜಾಪ್ರಕಾಶ ನ್ಯೂಸ್’ ತಂಡದೊಂದಿಗೆ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ.
ಮುಖ್ಯವಾಗಿ ಇತ್ತೀಚೆಗೆ ಅಳದಂಗಡಿ‌ ಸಮೀಪ ಕಾಳಿಂಗ ಸರ್ಪ ಹಿಡಿಯುತ್ತಿದ್ದ ಸಂದರ್ಭದಲ್ಲಿ ‌ಹಾವು   ನಿಂತಿದ್ದು ರಾಷ್ಟ್ರೀಯ ವಾಹಿನಿಗಳು, ರಾಷ್ಟ್ರ ಮಟ್ಟದ ಸಾಮಾಜಿಕ ಜಾಲತಾಣ, ಟ್ರೋಲ್ ಪೇಜ್ ಗಳಲ್ಲೂ ವಿಡಿಯೋ ಹರಿದಾಡಿದ್ದು ಅಂದು ನಡೆದ ಘಟನೆಯ ಕುರಿತೂ ಮಾತನಾಡಿದ್ದಾರೆ.
ಸ್ನೇಕ್ ಅಶೋಕ್ ಸುಮಾರು 11 ವರ್ಷಗಳಿಂದ ಹಾವುಗಳ ರಕ್ಷಣೆಯಲ್ಲಿ ತೊಡಗಿದ್ದಾರೆ. ಆರಂಭದಲ್ಲಿ ಸುಮಾರು 2 ವರ್ಷಗಳ ಕಾಲ ಉಜಿರೆಯ ಪ್ರಸಿದ್ಧ ಉರಗ ರಕ್ಷಕ ಸ್ನೇಕ್ ಜೋಯ್ ಜೊತೆ ಅವರ ಮಾರ್ಗದರ್ಶನದಲ್ಲಿ ಹಾವು ಹಿಡಿಯುವುದನ್ನು ಕಲಿತು ನಂತರದ ದಿನಗಳಲ್ಲಿ ತನ್ನದೇ ರೀತಿಯಲ್ಲಿ ಉರಗ ರಕ್ಷಣೆ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

 

 

ಬೆಳ್ತಂಗಡಿ ತಾಲೂಕಿನ ಲಾಯಿಲಾ‌  ಗ್ರಾಮದ ನಿನ್ನಿಕಲ್ಲು ಎಂಬಲ್ಲಿ  ವಾಸವಾಗಿರುವ ಸ್ನೇಕ್ ಅಶೋಕ್ ಸುಮಾರು ಹನ್ನೊಂದು ವರ್ಷಗಳಿಂದ 6 ಸಾವಿರಕ್ಕೂ‌ ಹೆಚ್ಚು ಹಾವುಗಳನ್ನು ಹಿಡಿದು ಅದನ್ನು ಕಾಡಿಗೆ ಬಿಟ್ಟಿದ್ದಾರೆ. ಇದರಲ್ಲಿ‌ 170ಕ್ಕೂ ಹೆಚ್ಚು ವಿಷಕಾರಿ‌ ಕಾಳಿಂಗ ಸರ್ಪಗಳು‌ ಸೇರಿರುವುದು ವಿಶೇಷ. ‌ಸುಮಾರು ಶೇಕಡಾ 90ರಷ್ಟು ಕೃಷಿ ಬೆಳೆಗಳು ನಾಶವಾಗಲು ಇಲಿಗಳು ಕಾರಣ, ಇಂತಹ ಇಲಿಗಳನ್ನು ತಿನ್ನಲು ಹಾವುಗಳು‌ ಬರುತ್ತದೆ.‌ ಹಾವುಗಳು‌ ಪ್ರಕೃತಿ ಸಮತೋಲನ ಕಾಪಾಡಲು ತುಂಬಾ ಅಗತ್ಯ ಎನ್ನುತ್ತಾರೆ.
ವಿಷಕಾರಿ ಹಾವುಗಳನ್ನು ಕೊಲ್ಲಬಾರದು, ಎಲ್ಲಿಯಾದರೂ ವೈಪರ್, ನಾಗರ ಹಾವಿನಂತಹಾ ವಿಷಕಾರಿ ಹಾವುಗಳು ಕಚ್ಚಿದರೆ ಅದಕ್ಕೆ ಪ್ರತಿ ಔಷಧಿಯನ್ನು ಇಂತಹ ಹಾವಿನ ವಿಷದಿಂದಲೇ ತಯಾರಿಸಲಾಗುತ್ತದೆ‌‌. ಆದ್ದರಿಂದ ಅವುಗಳ ರಕ್ಷಣೆಯೂ ಅತ್ಯಗತ್ಯ ಎಂಬುದು ಅಶೋಕ್ ಅವರ ಕಿವಿಮಾತು.

ವಿದ್ಯಾರ್ಥಿಗಳಲ್ಲಿ ಜಾಗೃತಿ:
ಎನ್.ಎಸ್.ಎಸ್. ಶಿಬಿರ, ಪರಿಸರ ದಿನಾಚರಣೆ ಸಂದರ್ಭಗಳಲ್ಲಿ ಶಾಲಾ ಕಾಲೇಜುಗಳಿಗೆ ತೆರಳಿ ಹಾವುಗಳನ್ನು ರಕ್ಷಿಸಬೇಕು, ಕೊಲ್ಲಬಾರದು ಎನ್ನುವ ಕುರಿತು ಆರಿವು ಹಾಗೂ ಜಾಗೃತಿ ‌ಮೂಡಿಸುವ ಕಾರ್ಯವನ್ನೂ ಮಾಡುತ್ತಾರೆ.

ಹಾವುಗಳ ಅರಿವು ಅಗತ್ಯ:
ಈಗಿನ‌ ದಿನಗಳಲ್ಲಿ ಜನರು ಹಾವು ಹಿಡಿಯಲು ತುಂಬಾ ಆಸಕ್ತಿಯಿಂದ ಬರುತ್ತಾರೆ. ಆದರೆ ಹಾವು‌ ಹಿಡಿಯುವ ಮೊದಲು ಯಾವುದು ವಿಷಕಾರಿ ಮತ್ತು ಯಾವುದು ವಿಷರಹಿತ ಹಾವು ಎನ್ನುವ ಮಾಹಿತಿ ತಿಳಿದುಕೊಳ್ಳುವುದು ಅಗತ್ಯ. ವಿಷಯುಕ್ತ ಹಾವುಗಳು ಕಚ್ಚಿದರೆ ಮನುಷ್ಯನು ಸುಮಾರು 2 ರಿಂದ 3 ಗಂಟೆಗಳ ಕಾಲ‌ ಬದುಕಬಹುದು. ಆದರೆ ಕಾಳಿಂಗ ಸರ್ಪ ಕಚ್ಚಿದರೆ ಕೇವಲ‌ 10 ರಿಂದ 15 ನಿಮಿಷ ಮಾತ್ರ ಬದುಕಲು ಸಾಧ್ಯ, ಆದರೆ ಅವುಗಳು ನಾಚಿಕೆ ಸ್ವಭಾವದವುಗಳು ಆದ್ದರಿಂದ ಯಾವುದೇ ಹಾನಿ ಉಂಟು ‌ಮಾಡುವುದಿಲ್ಲ ಎಂದು ಮಾಹಿತಿ ನೀಡಿದರು.

 

 

ಹಾವು ಕಚ್ಚಿದಾಗ ಮುನ್ನೆಚ್ಚರಿಕೆ ಅಗತ್ಯ:
ಯಾವುದೇ ಹಾವು ಕಚ್ಚಿದರೂ ಭಯ ಪಡುವ ಅಗತ್ಯವಿಲ್ಲ. ನಾವು ಭಯ ಪಟ್ಟರೆ ನಮ್ಮ ದೇಹದಲ್ಲಿ ರಕ್ತದೊತ್ತಡ ಹೆಚ್ಚಾಗುತ್ತದೆ. ಹೀಗೆ ಆದಾಗ ಹಾವಿನ ವಿಷ ಪೂರ್ತಿ ದೇಹದಲ್ಲಿ ಬಹಳ‌ ಬೇಗ ಸೇರಿಕೊಳ್ಳುತ್ತದೆ. ಹಾವು ಕಚ್ಚಿದ ಭಾಗವನ್ನು ನೀರಲ್ಲಿ‌ ಸ್ವಚ್ಚ ಮಾಡಿ ಬಟ್ಟೆ ಕಟ್ಟಿ ಹಾವಿನ‌ ಕಡಿತಕ್ಕೆ ‌‌ಒಳಗಾದ ವ್ಯಕ್ತಿಯನ್ನು ಯಾವುದೇ ಹಳ್ಳಿ ಔಷಧಿ ಕೊಡದೆ, ಮೊದಲು ಆಸ್ಪತ್ರೆಗೆ ಕರೆದೊಯ್ಯಬೇಕು‌ ಎಂದು ಅಶೋಕ್ ಅವರು ಉಪಯುಕ್ತ ಮಾಹಿತಿ ‌ನೀಡಿದರು.

ನನಗೂ ಕಚ್ಚಿದೆ!:
ಹಾವು‌ ಹಿಡಿಯುವ ಸಂದರ್ಭದಲ್ಲಿ ನಾನೂ ಹಾವಿನಿಂದ ಕಡಿತಕ್ಕೊಳಗಾಗಿದ್ದೆ. ಆದರೆ ಸರಿಯಾದ‌ ಸಮಯದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದೆ ಎಂದು ತಮಗೆ ಆದ ಅನುಭವ ಹಂಚಿಕೊಂಡರು.

 

ಕೆಲವರು‌ ಬೈದಿದ್ದರು!:

ಇತ್ತೀಚೆಗೆ ಅಳದಂಗಡಿ ಸಮೀಪದ ಕೆದ್ದುವಿನ ಬಳಿ ಸ್ನಾನ ಗೃಹದಲ್ಲಿದ್ದ ಕಾಳಿಂಗ ಸರ್ಪ ರಕ್ಷಣೆ ವೇಳೆ ಹಾವು ಒಮ್ಮೆಲೆ‌ ಬಂದು ಎದ್ದು ನಿಂತಿದ್ದ ವಿಡಿಯೋ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. ರಾಷ್ಟ್ರೀಯ ವಾಹಿನಿಯಾದ ಈಟಿವಿ ನ್ಯೂಸ್ ನ ವಿವಿಧ ಭಾಷೆಯ ವಾಹಿನಿಗಳಲ್ಲಿ, ಖ್ಯಾತ ಸುದ್ದಿ ವಾಹಿನಿ ಸಿ.ಎನ್.ಎನ್. ನಲ್ಲೂ ಅಶೋಕ್ ಅವರು ಹಾವು ಹಿಡಿಯುತ್ತಿದ್ದ ವಿಡಿಯೋ ‌ವೈರಲ್ ಆಗಿತ್ತು. ಈ ಬಗ್ಗೆ ಸ್ನೇಕ್ ‌ಅಶೋಕ್ ಪ್ರತಿಕ್ರಿಯೆ ನೀಡಿದ್ದು, “ಸ್ನಾನ ಗೃಹದಲ್ಲಿ ಅಡಗಿ ಕುಳಿತಿದ್ದ ಕಾಳಿಂಗ‌ ಸರ್ಪ ಹಿಡಿದಿದ್ದೆ. ವಿಡಿಯೋ ‌ನೋಡಿ ಈ ಕೆಲಸಕ್ಕೆ ತುಂಬಾ ಜನರು ನನ್ನನ್ನು ಪ್ರಶಂಸಿದ್ದರು. ಕೆಲವರು ಬೈದಿದ್ದರು. ಅದರೆ ಇದರ ಬಗ್ಗೆ ಹೆಚ್ಚು ಗಮನ ‌ಕೊಡಲು‌ ಹೋಗಿರಲಿಲ್ಲ. ಹಾವುಗಳ ರಕ್ಷಣೆಗೆ ಮಾತ್ರ ಆದ್ಯತೆ ನೀಡುತ್ತೇನೆ” ಎಂದು ತಿಳಿಸಿದ್ದಾರೆ.

ಸೂಕ್ತ ನೆಲೆ‌ ಸಿಗುತ್ತಿಲ್ಲ:

ಇತ್ತೀಚಿನ ದಿನಗಳಲ್ಲಿ ಹಾವಿನ‌ ಸಂಖ್ಯೆ ತುಂಬಾ ಹೆಚ್ಚಾಗುತ್ತಿದೆ ಇದಕ್ಕೆ ಪ್ರಮುಖ ಕಾರಣ ಹಿಂದೆ ಕಾಡು ಇದ್ದ ಜಾಗದಲ್ಲಿ ಮನೆಗಳು ಆಗಿದೆ. ಇದರಿಂದ ಹಾವುಗಳಿಗೆ ವಾಸ ಮಾಡಲು ಸೂಕ್ತ ನೆಲೆ, ತಿನ್ನಲು‌‌ ಆಹಾರ, ಕುಡಿಯಲು ನೀರು ಇಲ್ಲದ ಕಾರಣ ನಮ್ಮ‌ ಮನೆ ಬಾಗಿಲಿಗೆ ಹುಡುಕಿಕೊಂಡು ಬರುತ್ತಿವೆ ಎನ್ನುತ್ತಾರೆ ಅಶೋಕ್.

ಸುಮಾರು 30 ಮೊಟ್ಟೆ ಇಡುತ್ತವೆ!:

ಹಾವುಗಳು ಒಮ್ಮೆ ಮೊಟ್ಟೆ ಇಡುವಾಗ 20ರಿಂದ 30 ಮೊಟ್ಟೆ ಇಡುತ್ತವೆ. ಹೀಗೆ ವರ್ಷಂಪ್ರತಿ ಮೊಟ್ಟೆ ಇಡುತ್ತಾ ಹೋದರೆ ಅದರಲ್ಲಿ 10ರಿಂದ 15 ಮೊಟ್ಟೆ ಜೀವಂತ ಇದ್ದರೂ ಸಾಕಾಗುತ್ತದೆ. ನಾಡಿನ‌ ಜನರು ಕಾಡು ಹಂದಿಗಳು, ಆನೆಗಳಂತಹ ಪ್ರಾಣಿಗಳಿಂದ ಮಾತ್ರವಲ್ಲದೆ ಹಾವುಗಳಿಂದಲೂ ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ‌ ಎನ್ನುತ್ತಾರೆ ಈ ಉರಗಪ್ರೇಮಿ.
ಉರಗ ರಕ್ಷಕರ‌ ಅಗತ್ಯವಿದೆ:
‌‌‌‌‌‌‌‌ಹಾವುಗಳ‌ ಸಂತತಿ ಹೆಚ್ಚಾಗುತ್ತಿರುವ ಈ‌ ಸಂಧರ್ಭದಲ್ಲಿ ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಪ್ರತೀ ವಲಯದಲ್ಲಿ ಒಬ್ಬ ನುರಿತ ಉರಗ ರಕ್ಷಕನನ್ನು ನೇಮಿಸಬೇಕಿದೆ. ಇಲ್ಲವಾದಲ್ಲಿ ಪರಿಣತ ಉರಗ ರಕ್ಷಕರಿಗೆ ಹಾವು ಹಿಡಿಯಲು ಅನುಮತಿಯನ್ನು ಸರ್ಕಾರ ಮತ್ತು ಅರಣ್ಯ ಇಲಾಖೆ‌ ವತಿಯಿಂದ ಅಧಿಕೃತವಾಗಿ ನೀಡಬೇಕು ಎಂದು ಅಶೋಕ್ ವಿನಂತಿ ಮಾಡಿಕೊಂಡರು.

ಪ್ರತ್ಯೇಕ ಆರೋಗ್ಯ ಕೇಂದ್ರ ಅಗತ್ಯ:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗರ ಹಾವು,‌ ಕಾಳಿಂಗ ಸರ್ಪ ದಂತಹ‌ ಹಾವುಗಳನ್ನು ಪೂಜಿಸುತ್ತಾರೆ. ಅದೇ ರೀತಿ ಅವುಗಳು ವಾಸಿಸುವ ಸಂಖ್ಯೆಯೂ ಹೆಚ್ಚಿದೆ‌. ಈ‌ ಕಾರಣದಿಂದ‌ ಗಾಯಕ್ಕೊಳಗಾದ ಹಾವುಗಳಿಗೆ ಸಮರ್ಪಕವಾಗಿ ತಜ್ಞವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸುವುದು ಅಗತ್ಯ. ಇತ್ತೀಚಿನ ದಿನಗಳಲ್ಲಿ ನಾಯಿಗಳ ಕಡಿತಕ್ಕೆ, ಜೆ.ಸಿ.ಬಿ‌‌. ಅಡಿಗೆ ಬಿದ್ದು ಗಾಯಕ್ಕೆ ಒಳಾಗಾಗುವ ಹಾವುಗಳೂ ಸಿಗುತ್ತಿವೆ. ಆದ್ದರಿಂದ ಅವುಗಳಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ಉರಗ ಆರೋಗ್ಯ ಕೇಂದ್ರ ತೆರೆಯಬೇಕು ಎಂದು ಸರಕಾರಕ್ಕೆ‌ ಮನವಿ ಮಾಡಿದರು.

 

ನಮ್ಮನ್ನು ಕೇಳುವವರಿಲ್ಲ:

ಬೆಳ್ತಂಗಡಿ ತಾಲೂಕಿನಲ್ಲಿ ಹಾವು ಹಿಡಿಯಲು ವಾರಕ್ಕೆ ಸುಮಾರು 7 ರಿಂದ 8 ದೂರವಾಣಿ ಕರೆಗಳು ಬರುತ್ತವೆ. ರಾತ್ರಿಯಾದರೂ ಸರಿ, ಹಗಲಾದರೂ ಸರಿ ಕರೆ ಬಂದ ತಕ್ಷಣ ನಮ್ಮ ಕೆಲಸ ಕಾರ್ಯ ಬದಿಗಿರಿಸಿ ಹಾವಿನ ರಕ್ಷಣೆಗೆ ತೆರಳುತ್ತೇವೆ. ಮುಖ್ಯವಾಗಿ ಜನರ ಭಯವನ್ನು ದೂರ ಮಾಡುವ ದೃಷ್ಟಿಯಿಂದ ಹಾವುಗಳನ್ನು ಹಿಡಿಯಲು ಹೋಗುತ್ತೇವೆ. ಆದರೆ‌ ನಾವು ಹಾವು ಹಿಡಿಯುವ ಮುಂಚೆ ಇದೇ ಜನರು‌ ಹಲವು ಬಾರಿ ಕರೆ ಮಾಡಿ ವಿಚಾರಿಸುತ್ತಾರೆ. ಆದರೆ ಹಾವು ಹಿಡಿದು, ಅದನ್ನು ಸೇರಬೇಕಾದ ಸ್ಥಳಕ್ಕೆ ಬಿಟ್ಟ ಬಳಿಕ ಕನಿಷ್ಠ ನೀವು ಹೇಗಿದ್ದೀರಿ…? ಹಾವನ್ನು ಎಲ್ಲಿಗೆ ಬಿಟ್ಟಿರಿ…? ಎಂದು ವಿಚಾರಿಸುವುದಿಲ್ಲ ಎಂದು ತಮ್ಮ ಅನುಭವ ವ್ಯಕ್ತಪಡಿಸಿದರು ಅಶೋಕ್.
ಕೊರೋನಾ ವಾರಿಯರ್ಸ್ ಎಂದು ಏಕೆ ಗುರುತಿಸಿಲ್ಲ?:
ಕೋವಿಡ್ ಸಂಧರ್ಭದಲ್ಲಿ ಸೀಲ್ ಡೌನ್‌‌ ಆಗಿರುವ ಪ್ರದೇಶಗಳಿಗೆ ತೆರಳಿ ಪೋಲಿಸರ ಸಹಾಯದೊಂದಿಗೆ ಕೊರೋನಾ ರೋಗಿಗಳ ಮನೆಗಳು‌ ಎನ್ನುವುದನ್ನೂ ಲೆಕ್ಕಿಸದೆ ರಕ್ಷಣಾ ಕಾರ್ಯ ನಡೆಸಿದ್ದೇವೆ. ಆದರೆ ಸರ್ಕಾರ ನಮ್ಮನ್ನು ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಿಲ್ಲ ಎಂದು ಅಶೋಕ್ ಉರಗ ರಕ್ಷಕರನ್ನು ಗುರುತಿಸದ ಕುರಿತು ಬೇಸರ ವ್ಯಕ್ತ ಪಡಿಸಿದರು.
ಸ್ನೇಕ್ ಅಶೋಕ್ ಅವರ ಈ‌ ಸಮಾಜ‌ಮುಖಿ‌ ಕಾರ್ಯ ಹಾಗೂ ಸಮಾಜದ ಕೊಂಡಿಯಾಗಿರುವ ಉರಗಗಳ‌ ಕುರಿತ ಜಾಗೃತಿ ‌ಮೂಡಿಸುವ ರಕ್ಷಿಸುವ ಕಾರ್ಯ ಸುರಕ್ಷಿತವಾಗಿ ನಡೆಯಲಿ. ಸರಕಾರ ಅಶೋಕ್ ಹಾಗೂ ಇತರ ಉರಗ ರಕ್ಷಕರಿಗೂ ಅಧಿಕೃತ ಮಾನ್ಯತೆ ನೀಡಿ‌ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಇವರ ‌ರಕ್ಷಣೆಗೂ ಆದ್ಯತೆ ನೀಡಲಿ‌. ಅಥವಾ ಉರಗ ರಕ್ಷಣೆಗೆ ಸರಕಾರದಿಂದಲೇ ವ್ಯಕ್ತಿಗಳ ನೇಮಿಸಲಿ ಎಂಬುದು ‘ಪ್ರಜಾಪ್ರಕಾಶ ನ್ಯೂಸ್’ ತಂಡದ ಆಶಯವಾಗಿದೆ.

error: Content is protected !!