ಬೆಳ್ತಂಗಡಿ: ದೇಶಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದು ಅದನ್ನು ತಡೆಯುವಲ್ಲಿ ಹಾಗೂ ಅತ್ಯಾಚಾರಿಗಳ ನಿಯಂತ್ರಿಸುವಲ್ಲಿ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಆರೋಪಿಸಿದರು.
ಅವರು ಬೆಳ್ತಂಗಡಿಯ ಮಿನಿ ವಿಧಾನಸೌಧ ಮುಂಭಾಗ ದೇಶದಾದ್ಯಂತ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಹಿಂದೂಗಳ ರಕ್ಷಣೆ ಮಾಡುತ್ತೇವೆ, ಮಹಿಳೆಯರ ರಕ್ಷಣೆ ಮಾಡುತ್ತೇವೆ, ದೇವಸ್ಥಾನಗಳ ರಕ್ಷಣೆ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿಗರು ಈಗ ರಕ್ಷಕರ ಬದಲಿಗೆ ಭಕ್ಷಕರಾಗಿ ಮಾರ್ಪಟ್ಟಿದ್ದಾರೆ ಎಂದು ಅವರು ಆರೋಪಿಸಿದರು.
ದೇಶದ ಎಲ್ಲ ಧರ್ಮದವರ ಧಾರ್ಮಿಕ ಕೇಂದ್ರಗಳ, ಮಹಿಳೆಯರ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಸದಾ ಬದ್ದವಾಗಿದೆ ಎಂದರು.
ಮಾಜಿ ಶಾಸಕ ಕೆ. ಗಂಗಾಧರ ಗೌಡ, ಅಲ್ಪಸಂಖ್ಯಾತ ಘಟಕದ ಜಿಲ್ಲಾ ಅಧ್ಯಕ್ಷ ಶಾಹುಲ್ ಹಮೀದ್, ಕಾಂಗ್ರೆಸ್ ಮಹಿಳಾ ಮುಖಂಡರಾದ ಜೆಸ್ಸಿತಾ ಮೋನಿಸ್ ಅವರು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನುಸರಿಸುತ್ತಿರುವ ಮಹಿಳಾವಿರೋಧಿ ಜನವಿರೋಧಿ ನೀತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಂಜನ್ ಜಿ.ಗೌಡ, ಶೈಲೇಶ್ ಕುಮಾರ್, ಹಿರಿಯ ಮುಖಂಡ ರಾಜಶೇಖರ ಅಜ್ರಿ, ಎಪಿಎಂಸಿ ಅಧ್ಯಕ್ಷ ಚಿದಾನಂದ ಎಲ್ದಕ್ಕ, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಗ್ರಾಮೀಣ ಅಧ್ಯಕ್ಷ ಅಶ್ರಫ್ ಬಿ. ನೆರಿಯ, ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು, ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಮೋಹನ್ ಕಲ್ಮಂಜ, ಕಾಂಗ್ರೆಸ್ ಮುಖಂಡರಾದ ಈಶ್ವರ ಭಟ್, ಉಷಾ ಶರತ್, ಎ.ಸಿ. ಮ್ಯಾಥ್ಯು, ದಯಾನಂದ ಬೆಳಾಲು, ಜಗದೀಶ್ ಡಿ, ಮನೋಹರ ಕುಮಾರ್, ದಯಾನಂದ ದೇವಾಡಿಗ ಮತ್ತು ಶುಬಿತ್, ವಂದನಾ ಅಂಡಿಂಜೆ, ರವಿ ನೇತ್ರಾವತಿನಗರ ಹಾಗೂ ಇತರರು ಹೋರಾಟದ ನೇತೃತ್ವ ವಹಿಸಿದ್ದರು. ಪ್ರತಿಭಟನಾಕಾರರು ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಅಲ್ಪಸಂಖ್ಯಾತ ಘಟಕದ ನಗರ ಅಧ್ಯಕ್ಷ ಸಲೀಂ ಗುರುವಾಯನಕೆರೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.