ರುದ್ರಭೂಮಿಯಲ್ಲೂ ಬಿಯರ್ ಬಾಟಲ್ ಸದ್ದು!: ಮೂಲ ಸೌಕರ್ಯವಿಲ್ಲದೆ ಸೊರಗಿದೆ ಕಲ್ಲೇರಿ ಬಳಿಯ ಹಿಂದೂ ರುದ್ರಭೂಮಿ: ಮೃತದೇಹದೊಂದಿಗೆ ಸಾರ್ವಜನಿಕರು ದೂರದೂರಿಗೆ ಅಲೆದಾಡಬೇಕಾದ ಪರಿಸ್ಥಿತಿ

 

 

 

ಬೆಳ್ತಂಗಡಿ: ಸಮರ್ಪಕ ಬೇಲಿ, ತಡೆಗೋಡೆ ಇಲ್ಲದ ಬಯಲು ಜಾಗ, ಅಲ್ಲಲ್ಲಿ ಒಡೆದು ಬಿದ್ದ ಬಿಯರ್ ಬಾಟಲ್ ಚೂರುಗಳು, ಸಿಮೆಂಟಿನ ಅರ್ಧಂಬರ್ಧ ಗೋಡೆ, ಸುತ್ತಲೂ ಗಿಡಗಂಟಿ… ಇದು ಯಾವುದೇ ಮೂಲಸೌಕರ್ಯ ಲಭಿಸದೆ, ಸಮರ್ಪಕ ನಿರ್ವಹಣೆಯೂ ಇಲ್ಲದೆ ಸೊರಗುತ್ತಿರುವ ಕರಾಯ ಗ್ರಾಮದ ಹಿಂದೂ ರುದ್ರ ಭೂಮಿಯ ದುಸ್ಥಿತಿಯ ವ್ಯಥೆಯ ಕಥೆ.

 

 

 

ಹೌದು… ಕರಾಯ, ಕಲ್ಲೇರಿ ಹಾಗೂ ಸುತ್ತಮುತ್ತಲಿನ ಜನತೆ ತಣ್ಣೀರುಪಂಥ ಗ್ರಾಮದ ಕಲ್ಲೇರಿ ಕ್ವಾಟ್ರಸ್ ಬಳಿ ಇರುವ ಹಿಂದೂ ರುದ್ರ ಭೂಮಿಯನ್ನು ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಅವಲಂಬಿಸಿದ್ದಾರೆ.

 

 

ಆದರೆ ಸಮರ್ಪಕ ನಿರ್ವಹಣೆ ಯಾವುದೇ ಸೂಕ್ತ ಸೌಲಭ್ಯಗಳು ಇಲ್ಲಿ ಲಭಿಸದೆ ಅಂತ್ಯಕ್ರಿಯೆ ನಡೆಸಲು ಉಪ್ಪಿನಂಗಡಿ, ಬೆಳ್ತಂಗಡಿ ಮೊದಲಾದ ದೂರ ಪ್ರದೇಶಗಳಿಗೆ ಮೃತದೇಹ‌ ಒಯ್ಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದೂ ರುದ್ರಭೂಮಿಗೆ ಸರಕಾರದಿಂದ 1.20 ಎಕರೆ ಭೂಮಿ ಮೀಸಲಾಗಿ ಇರಿಸಿದ್ದರೂ ಸಂಭಂದಿಸಿದ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರು ಕಷ್ಟಪಡುವಂತಾಗಿದೆ.

 

 

 

ಮೀಸಲಿರಿಸಿದ ಜಾಗದಲ್ಲಿ ಈಗಾಗಲೇ ತುರ್ತು ಸಂದರ್ಭಗಳಲ್ಲಿ ಮಾತ್ರ ಕೆಲವು ಮೃತದೇಹಗಳ ಅಂತ್ಯಕ್ರಿಯೆ ನಡೆಸಲಾಗಿದೆ. ಆದರೆ ವ್ಯವಸ್ಥಿತ ಚಿತಾಗಾರ ನಿರ್ಮಾಣಗೊಂಡಲ್ಲಿ ಸಾರ್ವಜನಿಕರು ದುಃಖದ ಸಂದರ್ಭದಲ್ಲಿ ಅನಗತ್ಯ ಅಲೆದಾಟ ಮಾಡುವುದು ತಪ್ಪಿದಂತಾಗುತ್ತದೆ‌.

 

 

ಬೇರೆಡೆ ಅಂತ್ಯಕ್ರಿಯೆಗೆ ಮೃತದೇಹ ಸಾಗಿಸಲು ಆಂಬ್ಯುಲೆನ್ಸ್ ಅವಲಂಬಿಸಬೇಕಾಗಿದೆ‌, ಸ್ಥಳೀಯ ರುದ್ರಭೂಮಿಯ ಅಭಿವೃದ್ಧಿ ಮಾಡಿದರೆ ಸಮರ್ಪಕ ರೀತಿಯಲ್ಲಿ ಸದ್ಬಳಕೆ ಮಾಡಬಹುದು. ನೊಂದವರ ಕಣ್ಣೀರು ಒರೆಸಿದಂತೆಯೂ ಆಗುತ್ತದೆ ಎನ್ನುತ್ತಾರೆ ಸ್ಥಳೀಯ ವ್ಯಕ್ತಿಯೊಬ್ಬರು.

 

 

ಹಿಂದೂ ರುದ್ರಭೂಮಿ ಸ್ಥಳ ತೆರೆದ ಪ್ರದೇಶದಲ್ಲಿದ್ದು ತಡೆಗೋಡೆಯಾಗಲಿ ಅಥವಾ ಸಮರ್ಪಕ ಬೇಲಿಯಾಗಲಿ ಇಲ್ಲದಿರುವುದರಿಂದ ಕಿಡಿಗೇಡಿಗಳು ಬಿಯರ್ ಬಾಟಲ್ ಎಸೆದಿದ್ದಾರೆ.

 

 

ಆದ್ದರಿಂದ ಸಮರ್ಪಕ ಬೇಲಿ ಅಥವಾ ತಡೆಗೋಡೆ ‌ನಿರ್ಮಾಣ, ಹಾಗೂ ರುದ್ರಭೂಮಿಗೆ ಒದಗಿಸಬೇಕಾದ ಮೂಲ ಸೌಕರ್ಯಗಳನ್ನು ಸರಕಾರ ಒದಗಿಸಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

 

error: Content is protected !!