ಪೈಪ್ ದುರಸ್ತಿಗಾಗಿ ಅಗೆದ ರಸ್ತೆ ಬದಿಯ ಗುಂಡಿಗಳಿಗೆ ಮುಕ್ತಿ ಯಾವಾಗ…! ಶಾಲಾ ಮಕ್ಕಳು ಮಾಡಿದ ತಪ್ಪೇನು.!, ಇದು ಚರ್ಚ್ ರೋಡಿನ ದುರಾವಸ್ಥೆ: ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳ ವಿರುದ್ದ ಪೋಷಕರ ಹಿಡಿ ಶಾಪ..!

 

 

 

ವರದಿ:ಪ್ರಸಾದ್ ಶೆಟ್ಟಿ ಎಣಿಂಜೆ

ಬೆಳ್ತಂಗಡಿ: ಒಂದೆಡೇ ಭಾರೀ ಮಳೆ, ಇನ್ನೊಂದೆಡೆ ತೋಡಿನಂತೆ ನೀರು ಹರಿಯುವ ರಸ್ತೆಯಲ್ಲಿ ಒದ್ದೆಯಾಗಿಕೊಂಡು ಶಾಲಾ ಬ್ಯಾಗ್  ಹೆಗಲಿಗೇರಿಸಿಕೊಂಡು ಹೋಗಬೇಕಾದ ಸಂಧಿಗ್ದ ಸ್ಥಿತಿ, ಅದರ ನಡುವೆ ರಸ್ತೆ ಬದಿಯಲ್ಲಿರುವ ದೊಡ್ಡ ಗುಂಡಿಗಳಿಂದಾಗಿ ,ವಾಹನಗಳ ಸಂಚಾರದ ವೇಳೆ ಪುಟಾಣಿ ಮಕ್ಕಳ ಮೇಲೆ ಎರಚುವ ಕೆಸರು ನೀರು.ಅಬ್ಬ ಇದು ಎಲ್ಲಿಯ ಕಥೆ ಅಂತೀರಾ, ಬೆಳ್ತಂಗಡಿ ತಾಲೂಕಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಅತೀ ಹೆಚ್ಚು ಜನ ನಿಬಿಢ ಚರ್ಚ್ ರೋಡ್ ನ ದುರಾವಸ್ಥೆ, ಹೌದು, ಈ ರಸ್ತೆಯ ಸ್ಥಿತಿ ಶೋಚಾನೀಯವಾಗಿದೆ. ದಿನಂಪ್ರತಿ ಸಹಸ್ರಾರು ಮಕ್ಕಳು ಸೇರಿದಂತೆ ಸಾರ್ವಜನಿಕರು ಇದೇ ರಸ್ತೆಯಲ್ಲಿ ಒದ್ದಾಡ್ತ ಸಾಗಬೇಕಾದ ಸಂಕಷ್ಟ ಸ್ಥಿತಿಯಲ್ಲಿದ್ದಾರೆ.

 

 

 

 

ಬೆಳ್ತಂಗಡಿ ಸವಣಾಲು, ಶಿರ್ಲಾಲು ಸೇರಿದಂತೆ ಹಲವಾರು ಕಡೆಗಳಿಗೆ ಹೋಗುವ ಹೆದ್ದಾರಿ ಇದಾಗಿದ್ದು, ರಾಷ್ಟ್ರೀಯ ಹೆದ್ದಾರಿ ಕ್ರಾಸ್ ನಿಂದ ಹೋಲಿ ರಿಡಿಮರ್ ಚರ್ಚ್ ವರೆಗೆ ಈ ರಸ್ರೆಯಲ್ಲಿ ಸಾಗಬೇಕಾದರೆ ಹರ ಸಾಹಸವೇ ಪಡಬೇಕು. ಸಂತ ತೆರೆಸಾ ಫ್ರೌಡ ಶಾಲೆ, ಕಾಲೇಜು, ಹೋಲಿ ರಿಡಿಮರ್ ಇಂಗ್ಲೀಷ್ ಮೀಡಿಯಂ ಸ್ಕೂಲ್ , ಚರ್ಚ್ ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಇನ್ನಿತರ ಶಾಲಾ ಕಾಲೇಜು ಮಕ್ಕಳು, ಸೇರಿದಂತೆ ದಿನಂಪ್ರತಿ ನೂರಾರೂ ವಿದ್ಯಾರ್ಥಿಗಳು, ಹಾಗೂ ಸಾರ್ವಜನಿಕರು ಸಾಗುವ ಈ ರಸ್ತೆ ಬದಿಯಲ್ಲಿರುವ ದೊಡ್ಡ ಹೊಂಡಗಳಿಂದಾಗಿ ಎಲ್ಲಿ ಹೊಂಡದ ಕೆಸರು ನೀರು ಮೈಮೇಲೆ ಬೀಳುತ್ತೊ ಎಂಬ ಆತಂಕದಲ್ಲಿ ಸಾಗುವಂತಾಗಿದೆ.

 

 

 

ಇದೇನು ಮಳೆ ಹಾನಿಯಿಂದ ನಿರ್ಮಾಣವಾದ ಗುಂಡಿ ಏನಲ್ಲ, ಪೈಪ್ ದುರಸ್ತಿಗಾಗಿ ತೆಗೆದ ಕೆಲವೊಂದು ಗುಂಡಿಯನ್ನು ಅಸಮರ್ಪಕವಾಗಿ ಮುಚ್ಚಿರುವುದರಿಂದ ಈ ರೀತಿ ಆಗಿದೆ. ಅದಲ್ಲದೇ ಮಳೆಗಾಲ ಪ್ರಾರಂಭದ ಸಮಯದಲ್ಲಿ ಅಭಿವೃದ್ಧಿ ಹೆಸರಲ್ಲಿ ಹಾಗೂ ಪೈಪ್ ಲೈನ್ ಹಾಕುವ ಉದ್ದೇಶದಿಂದ ರಸ್ತೆ ಬದಿ ಹಾಕಿದ್ದ ಇಂಟರ್ ಲಾಕ್ ತೆಗೆದು ಹಾಕಲಾಗಿದೆ.‌ ಚರಂಡಿ ವ್ಯವಸ್ಥೆ ಸರಿ ಇಲ್ಲದೇ ಮಳೆ ನೀರು ಕೂಡ ರಸ್ತೆಯಲ್ಲೇ ಹರಿದು ಹೋಗುತ್ತಿದೆ. ಶಾಲಾ ಸಮಯದಲ್ಲಂತೂ ಜೋರು ಮಳೆ ಬಂದರೆ ಮಕ್ಕಳ ಸ್ಥಿತಿಯಂತೂ ಕೇಳತೀರದಾಗಿದೆ.‌ವಾಹನ ದಟ್ಟನೆಯ ನಡುವೆ ರಸ್ತೆ ಬದಿಯಲ್ಲಿ ನಡೆದಾಡಲು ಈ ಗುಂಡಿಗಳಿಂದಾಗಿ ಸಾಧ್ಯವಾಗದೇ ರಸ್ತೆಯಲ್ಲೇ ಒಡಾಟ ಮಾಡಬೇಕಾದ ಸ್ಥಿತಿ ಮಕ್ಕಳದ್ದಾಗಿದೆ.‌ ಇದರಿಂದ ವಾಹನ ಸಂಚಾರಕ್ಕೂ ಸಮಸ್ಯೆ ಉಂಟಾಗಿದೆ.ಅದಲ್ಲದೇ ಮೊನ್ನೆಯಷ್ಟೇ ದ್ವಿಚಕ್ರ ವಾಹನದಲ್ಲಿ ಮಹಿಳೆಯೊಬ್ಬರು ತನ್ನಿಬ್ಬರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವ ವೇಳೆ ಈ ಗುಂಡಿಗೆ ಬಿದ್ದ ಘಟನೆಯೂ ನಡೆದಿದೆ.
ಪೋಷಕರಂತೂ ಈ ಅವ್ಯವಸ್ಥೆಯಿಂದಾಗಿ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತಿದ್ದಾರೆ. ಮಳೆಯಿಂದಾಗಿ ಏನೂ ಮಾಡಲು ಸಾಧ್ಯ ಇಲ್ಲ ಎಂಬ ಹಾರಿಕೆಯ ಉತ್ತರವೂ ಅಧಿಕಾರಿಗಳಿಂದ ಬರುತ್ತಿರುವ ಬಗ್ಗೆಯೂ ಅಸಾಮಾಧಾನ ಹೊರ ಹಾಕುತಿದ್ದಾರೆ. ಏನಾದರೂ ಅನಾಹುತ ಸಂಭವಿಸಿದ ನಂತರ ಎಚ್ಚೆತ್ತುಕೊಳ್ಳುವ ಬದಲು ತಕ್ಷಣ ಈ ಗುಂಡಿಗಳನ್ನು ಮುಚ್ಚುವತ್ತ ಗಮನ ಹರಿಸಬೇಕಾಗಿದೆ ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.

error: Content is protected !!