ಬೆಳ್ತಂಗಡಿ: ಇತ್ತೀಚೆಗೆ 75ನೇ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಸ್ಥಳೀಯ ಪತ್ರಿಕೆಯೊಂದು ಶಾಸಕರಿಂದ ಆಗಬೇಕಾದ ಕೆಲಸಗಳ ಪಟ್ಟಿಯನ್ನು ಜನರಿಂದ ಸಿದ್ಧಗೊಳಿಸಿತ್ತು. ಇದರಲ್ಲಿ “ಸರ್ಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ ಮುಕ್ತಗೊಳಿಸುವುದು” ಎಂಬ ವಿಚಾರ ಮೊದಲ ಸ್ಥಾನದಲ್ಲಿದೆ. ಈ ವಿಚಾರದ ಕುರಿತು ಶಾಸಕರು ಪ್ರತಿಕ್ರಿಯಿಸಿ, ಭ್ರಷ್ಟಾಚಾರವನ್ನು ಮೂಲದಿಂದಲೇ ನಿರ್ಮೂಲನೆ ಮಾಡುವ ಬಗ್ಗೆ ಮಾತನಾಡಿದ್ದಾರೆ. ನನ್ನ ಪ್ರಕಾರ ಮೂಲ ಎಂದರೆ ಶಾಸಕ ಹರೀಶ್ ಪೂಂಜಾ ಅವರೇ ಆಗಿದ್ದಾರೆ. ಅವರು ಶಾಸಕರಾದ ಮೂಲದಲ್ಲಿ 15% ಪರ್ಸೆಂಟೇಜ್ ಕಮಿಷನ್ ಪಡೆಯುತ್ತಿದ್ದರು. ಅದು ಈಗ 20% ತಲುಪಿದೆ. ಈ ಪರ್ಸೆಂಟೇಜ್ ಮಾತ್ರ ಅಲ್ಲದೆ ತಾಲೂಕಿನಲ್ಲಿ ಐದು ಕೋಟಿಗೂ ಮಿಕ್ಕಿದ ಅನುದಾನದ ಕೆಲಸಗಳನ್ನು ಅವರದೇ ಮಾಲಕತ್ವದ ಕಂಪನಿ ಮೂಲಕ ಕೆಲಸ ಮಾಡಿಸುತ್ತಿದ್ದಾರೆ. ಅಧಿಕಾರಿಗಳಲ್ಲಿ ಎಸ್ಟಿಮೇಟ್ ಮಾಡುವ ಸಂದರ್ಭದಲ್ಲಿ 100% ಎಸ್ಟಿಮೇಟ್‍ಗಿಂತ 150% ಹೆಚ್ಚು ಎಸ್ಟಿಮೇಟ್ ಮಾಡಿಸುತ್ತಿದ್ದಾರೆ. ಅಧಿಕಾರಿಗಳ ಮೂಲಕ ಅದಕ್ಕೆ ಇತರೆ ಗುತ್ತಿಗೆದಾರರು ಟೆಂಡರ್ ಹಾಕದಂತೆ ಬೆದರಿಕೆ ಹಾಕಿಸುತ್ತಿದ್ದಾರೆ. ಅಲ್ಲದೆ 15%, 20% ಮತ್ತು 25% ಅಧಿಕ ಪರ್ಸಂಟೇಜ್‍ಗೂ ಹೆಚ್ಚು ಟೆಂಡರ್ ಹಾಕಿಸುತ್ತಿದ್ದಾರೆ. ಈ ಮೂಲಕ ತಾಲೂಕಿನಲ್ಲಿ ಭ್ರಷ್ಟಾಚಾರದಲ್ಲಿ ನಂ. 1 ಸ್ಥಾನದಲ್ಲಿ ಶಾಸಕರೇ ಇದ್ದಾರೆ. ಇವರು ಯಾವ ರೀತಿ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತಾರೋ ಆ ದೇವರೇ ಬಲ್ಲ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಶಾಸಕ ಹರೀಶ್ ಪೂಂಜ ವಿರುದ್ಧ ಗಂಭೀರ ಆರೋಪಗಳನ್ನು ಮಾಡುವ ಜೊತೆಗೆ ಟೀಕಾ ಪ್ರಹಾರ ನಡೆಸಿದರು.
ಅವರು ಬೆಳ್ತಂಗಡಿ ಗುರುನಾರಾಯಣ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪುತ್ತೂರು ಸಹಾಯಕ ಆಯುಕ್ತರ ವಿರುದ್ಧ ಲಂಚ ಪಡೆದ ಆರೋಪ ಕೇಳಿ ಬಂದಿದೆ. ಲಂಚ ನೀಡಿದವರ ಪೈಲುಗಳು ಒಂದೇ ದಿನದಲ್ಲಿ ಮುಂದುವರಿಯುತ್ತದೆ, ಬಡವರ ಕಡತಗಳು ಪುತ್ತೂರು ಎ.ಸಿ.ಕಛೇರಿಯಲ್ಲಿ ಕೊಳೆತು ನಾರುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ, ಈ ಬಗ್ಗೆ ಕ್ರಮ ಕೈಗೊಳ್ಳಲು ಹರೀಶ್ ಪೂಂಜಾರಿಗಾಗಲಿ, ಪ್ರತಾಪ ಸಿಂಹ ನಾಯಕ್ ಅವರಿಗಾಗಲಿ ಧೈರ್ಯ ಇದೆಯೇ? ಈ ಬಗ್ಗೆ ಸ್ವರ ಎತ್ತಿದರೆ ನಿಮ್ಮ ಬಂಡವಾಳ ಹೊರಗೆ ಬೀಳುತ್ತದೆ ಎಂಬ ಭಯವೇ? ಬೆಳ್ತಂಗಡಿ ತಾಲೂಕು ಕಛೇರಿಯಲ್ಲಿ, ಪುತ್ತೂರು ಎ.ಸಿ.ಕಚೇರಿಯಲ್ಲಿ ಲಂಚ ಪಡೆಯುತ್ತಿರುವ ಬಗ್ಗೆ ಸಾರ್ವಜನಿಕರು ನನ್ನ ಬಳಿ ದೂರು ನೀಡಿದ್ದಾರೆ, ಇದನ್ನು ನಿಮ್ಮಿಂದ ನಿಲ್ಲಿಸಲು ಸಾಧ್ಯವಾಗದಿದ್ದಲ್ಲಿ, ಈ ಕಛೇರಿಗಳಿಗೆ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಾನು ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ. ತಹಶೀಲ್ದಾರ್ ಮತ್ತು ತಾಲೂಕು ಕಛೇರಿಯ ಕೆಲ ಅಧಿಕಾರಿಗಳು ಬ್ರಹ್ಮಾಂಡ ಭ್ರಷ್ಠಾಚಾರದಲ್ಲಿ ಮುಳುಗಿದ್ದು, ಇದು ಇದೇ ರೀತಿ ಮುಂದುವರಿದರೆ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ತಾಲೂಕು ಕಛೇರಿಯ ಮುಂದೆ ಜನತೆಯ ಪರವಾಗಿ ಪ್ರತಿಭಟನೆ ಮಾಡುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಸವಾಲು ಸ್ವೀಕರಿಸದ ಶಾಸಕರು:
ಇತ್ತೀಚೆಗೆ ಪತ್ರಿಕಾಗೋಷ್ಠಿ ಮೂಲಕ ಶಾಸಕ ಹರೀಶ್ ಪೂಂಜಾ ಅವರು ಅಭಿವೃದ್ಧಿ ಕಾಮಗಾರಿಗಳಿಗೆ ತಾನು ಮಂಜೂರು ಮಾಡಿಸಿ ತಂದಿರುವುದಾಗಿ ಪತ್ರಿಕಾ ಪ್ರಕಟಣೆ ನೀಡಿದ 833.69 ಕೋಟಿ ರೂಪಾಯಿ ಅನುದಾನದ ಬಗ್ಗೆ ನೀಡಿದ ತಪ್ಪು ಲೆಕ್ಕವನ್ನು ಎತ್ತಿ ತೋರಿಸಿ ತಮ್ಮ ಸಮಕ್ಷಮ ದಾಖಲೆಗಳನ್ನು ಹಾಜರುಪಡಿಸಿ ಸರಿಯಾದ ಲೆಕ್ಕದ ವಿವರ ನೀಡಿ ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದೆ. ಅಲ್ಲದೆ ಅವರು ತಪ್ಪು ಲೆಕ್ಕ ನೀಡಿದ ಬಗ್ಗೆ ಕ್ಷಮೆ ಕೋರುವಂತೆ ಆಗ್ರಹಿಸಿದ್ದೆ. ಆದರೆ ಇದರ ಬಗ್ಗೆ ಜಾಣ ಮೌನ ವಹಿಸಿರುವ ಶಾಸಕರು ಇದುವರೆಗೆ ಬಹಿರಂಗ ಚರ್ಚೆಗೂ ನನ್ನನ್ನು ಆಹ್ವಾನಿಸಿಲ್ಲ, ಕ್ಷಮೆಯನ್ನೂ ಯಾಚಿಸಿಲ್ಲ. ಶಾಸಕರು ನನ್ನ ಸವಾಲು ಸ್ವೀಕರಿಸದೆ ಪಲಾಯನಗೈಯುವ ಮೂಲಕ ಅವರು ಕೊಟ್ಟಿರುವ ಲೆಕ್ಕದಲ್ಲಿ ತಪ್ಪು ಇರುವುದನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಕೂಡಲೇ ಶಾಸಕರು ಜನತೆಯ ಕ್ಷಮೆ ಯಾಚಿಸಬೇಕು, ಇಲ್ಲವಾದಲ್ಲಿ ಬಹಿರಂಗ ಚರ್ಚೆಗೆ ದಿನ ನಿಗದಿಗೊಳಿಸಬೇಕು ಎಂದು ಸವಾಲು ಹಾಕಿದರು.
ಶಾಸಕರ ಹೊಗಳು ಭಟರಾದ ಪ್ರತಾಪ್ ಸಿಂಹ ನಾಯಕ್!:
ಇತ್ತಿಚೆಗೆ ತನ್ನ ಸ್ಥಾನದ ಘನತೆ ಗೌರವವನ್ನು ಮರೆತು ಬೆಳ್ತಂಗಡಿಯ ಮಟ್ಟಿಗೆ ಕೇವಲ ಶಾಸಕ ಹರೀಶ್ ಪೂಂಜಾ ಅವರ ಹೊಗಳು ಭಟರಾಗಿ ಮೂಡಿ ಬಂದಿರುವ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರು, ನಾನು ಕೇಳಿದ ಲೆಕ್ಕದ ಬಗ್ಗೆ ನನ್ನ ಸಲಹಾ ಸಮಿತಿಗೆ ಲೆಕ್ಕ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ ಎನ್ನುವ ಬಾಲಿಶಃ ಪ್ರತಿಕ್ರಿಯೆ ನೀಡಿ ನನ್ನನ್ನು ಮತ್ತು ನನ್ನ ಪಕ್ಷದ ಇತರ ನಾಯಕರನ್ನು ಎತ್ತಿ ಕಟ್ಟುವ ಕೆಲಸಕ್ಕೆ ಕೈ ಹಾಕಿದ್ದಾರೆ. ನಾನು ಪ್ರತಾಪ ಸಿಂಹ ನಾಯಕ್ ಅವರ ಅನುದಾನದ ಲೆಕ್ಕ ಕೇಳಿದ್ದಲ್ಲ, ಅವರು ವಿಧಾನ ಪರಿಷತ್ ಶಾಸಕರಾದ ಬಳಿಕ ಅವರ ಕೊಡುಗೆ ಬೆಳ್ತಂಗಡಿಗೆ ಶೂನ್ಯ. ಹಾಗಾಗಿ ಅವರಲ್ಲಿ ಲೆಕ್ಕ ಕೇಳುವ ಪ್ರಮೇಯವೇ ಇಲ್ಲ ಎಂದು ಮಾಜಿ ಶಾಸಕರು ತಿಳಿಸಿದರು.
‘ಸಿಂಹ’ ಹೋಗಿ ‘ಬೆಕ್ಕು’ ಆಗಿದ್ದೀರಿ!:
ಪ್ರತಾಪ್ ಸಿಂಹ ನಾಯಕ್ ಅವರು ನಿದ್ದೆಯಲ್ಲಿ ಇದ್ದವನನ್ನು ಎಬ್ಬಿಸಬಹುದು. ನಟನೆ ಮಾಡುವವನನ್ನು ಎಬ್ಬಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಆದರೆ ಶಾಸಕ ಹರೀಶ್ ಪೂಂಜರು ಎಚ್ಚರಿಕೆಯಲ್ಲಿದ್ದರೂ ತಪ್ಪು ಲೆಕ್ಕದ ವಿಚಾರದಲ್ಲಿ ಅವರು ಇದುವರೆಗೆ ಎದ್ದಿಲ್ಲ. ಆದರೆ ಪ್ರತಾಪ್ ಅವರು ನಿದ್ರೆಯಲ್ಲಿ ಇದ್ದರೂ, ಎದ್ದು ಬಂದು ಅವರ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದೀರಿ. ಇದರಲ್ಲಿ ಶಾಸಕರ ಹೊಗಳು ಭಟರಾದ ನಿಮ್ಮ ಪ್ರವೇಶ ನಮಗೆ ಅಗತ್ಯ ಇರಲಿಲ್ಲ. ಪ್ರತಾಪ್ ಸಿಂಹ ನಾಯಕ್ ಅವರ ಕಚೇರಿಯ ಕೂಗಳತೆ ದೂರದ ತಾಲೂಕು ಕಚೇರಿಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ ಯಾಕೆ ಗೊತ್ತಾಗುತ್ತಿಲ್ಲ. ನೀವೋರ್ವ ಜವಾಬ್ದಾರಿಯುತ ವಿಧಾನ ಪರಿಷತ್ ಸದಸ್ಯ ಸ್ಥಾನದಲ್ಲಿದ್ದೀರಿ. ಆದರೆ ನೀವು ಈಗ ‘ಸಿಂಹ’ ಹೋಗಿ ‘ಬೆಕ್ಕು’ ಆಗಿದ್ದೀರಿ. ಶಾಸಕರ ನೇತೃತ್ವದ ಭ್ರಷ್ಟಾಚಾರದ ವಿಚಾರದಲ್ಲಿ ನೀವು ತೆಪ್ಪಗಿದ್ದೀರಲ್ಲ ನಿಮಗೆ ಗೌರವ ಇದೆಯೇ? ಎಂದು ವಿಧಾನ ಪರಿಷತ್ ಶಾಸಕರನ್ನು ಕೆ. ವಸಂತ ಬಂಗೇರ ಪ್ರಶ್ನಿಸಿದರು.
ಜನರನ್ನು ಲೂಟಿ ಮಾಡುವ ಕೆಲಸ:
ಪುತ್ತೂರು, ಸುಳ್ಯ, ಬಂಟ್ವಾಳ ಮುಂತಾದ ಕಡೆ ಅಕ್ರಮ-ಸಕ್ರಮ ಬೈಠಕ್ ಪ್ರಾರಂಭಗೊಂಡಿದ್ದರೂ, ಬೆಳ್ತಂಗಡಿಯಲ್ಲಿ ಇನ್ನೂ ಪ್ರಾರಂಭಗೊಂಡಿಲ್ಲ. ಕೂಡಲೇ ಅಕ್ರಮ-ಸಕ್ರಮ ಬೈಠಕ್ ನಡೆಸಿ ಬಡವರಿಗೆ ನ್ಯಾಯ ಒದಗಿಸಿಕೊಡಬೇಕಾಗಿ ಈ ಮೂಲಕ ಆಗ್ರಹಿಸುತ್ತಿದ್ದೇನೆ. ಇಲ್ಲವಾದಲ್ಲಿ ತಾಲೂಕು ಕಛೇರಿ ಎದುರು ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು. ಅಕ್ರಮ-ಸಕ್ರಮ ಕಡತದ ವಿಚಾರದಲ್ಲಿ ಬಿ.ಜೆ.ಪಿ ಪಕ್ಷದ ದಲ್ಲಾಳಿಗಳು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು ಸೆಂಟ್ಸ್ ಒಂದಕ್ಕೆ ಇಂತಿಷ್ಟು ದರ ಎಂದು ನಿಗದಿಪಡಿಸಿ ಜನರನ್ನು ಲೂಟಿ ಮಾಡುವ ಕೆಲಸದಲ್ಲಿ ನಿರತರಾಗಿರುವ ಮಾಹಿತಿ ನನ್ನ ಗಮನಕ್ಕೆ ಬಂದಿದೆ. ಅಲ್ಲದೆ ಕಡತ ಸಿಟ್ಟಿಂಗ್ ಇಡಬೇಕಾದರೆ ಬಿ.ಜೆ.ಪಿ. ಶಕ್ತಿ ಕೇಂದ್ರದ ಅಧ್ಯಕ್ಷರು ಹೇಳಿದರೆ ಮಾತ್ರ ಇಡುವುದಾಗಿ ಶಾಸಕರು ಹೇಳಿದ್ದಾರೆ ಎನ್ನುವ ವಿಚಾರವೂ ನನ್ನ ಗಮನಕ್ಕೆ ಬಂದಿದೆ. ಅಕ್ರಮ-ಸಕ್ರಮ ಕಡತಗಳ ವಿಚಾರದಲ್ಲಿ ತಹಶೀಲ್ದಾರ್ ಮತ್ತು ಅವರ ಕೈ ಕೆಳಗಿನ ಅಧಿಕಾರಿಗಳು ಇಂತಹ ವ್ಯವಸ್ಥೆಗೆ ಆಸ್ಪದ ನೀಡಿದಲ್ಲಿ ಪ್ರತಿಭಟನೆ ಅನಿವಾರ್ಯ ಎಂದು ಈ ಮೂಲಕ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಎಂದರು.
ಪರಿಹಾರದಲ್ಲಿ ತಾರತಮ್ಯ:
ಎರಡು ವರ್ಷಗಳ ಹಿಂದೆ ತಾಲೂಕಿನಲ್ಲಿ ಸುಮಾರು 16 ಗ್ರಾಮಗಳಲ್ಲಿ ನೆರೆಯಿಂದ ಅನೇಕ ಮನೆ, ಕೃಷಿ ಕೊಚ್ಚಿ ಹೋಯಿತು. ಕೆಲವರಿಗೆ ಪರಿಹಾರ ಸಿಕ್ಕಿತು. ಅರ್ಹರಲ್ಲದ ಕೆಲ ಬಿಜೆಪಿ ಮುಖಂಡರು ಅಧಿಕಾರಿಗಳಿಗೆ ಲಂಚ ಕೊಟ್ಟು ಮನೆ ಮಂಜೂರು ಮಾಡಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ನೈಜ ಸಂತ್ರಸ್ತರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡಸೆಬೇಕೆಂದು ಈ ಮೂಲಕ ಆಗ್ರಹಿಸುತ್ತಿದ್ದೇನೆ. ಈ ಬಗ್ಗೆ ಅವರಿಗೆ ಪತ್ರವನ್ನೂ ಬರೆಯುತ್ತೇನೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ, ನ್ಯಾಯವಾದಿ ಪಿ. ಕೇಶವ ಬೆಳಾಲು, ಪ.ಪಂ. ಸದಸ್ಯರಾದ ರಾಜಶ್ರೀ ರಮಣ್, ಜನಾರ್ದನ ಕುಲಾಲ್, ಜಗದೀಶ್ ಡಿ., ಮುಸ್ತರ ಜಾನ್ ಮೆಹಬೂಬ್, ವಕೀಲರಾದ ಮನೋಹರ ಇಳಂತಿಲ ಮೊದಲಾದವರು ಉಪಸ್ಥಿತರಿದ್ದರು.