ನಿದ್ದೆ ಮಾಡುತ್ತಿದೆಯೇ ಬೆಳ್ತಂಗಡಿಯ ಲೋಕೋಪಯೋಗಿ ಇಲಾಖೆ?, ಹೊಂಡಗಳ ಮುಚ್ಚುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ಸಾರ್ವಜನಿಕರ ಪ್ರಶ್ನೆಗಳ ಸುರಿಮಳೆ: ಹೆದ್ದಾರಿ ‌ಹೊಂಡಗಳಿಂದ ಜನಸಾಮಾನ್ಯರಿಗೆ ದಿನಂಪ್ರತಿ ಅವಾಂತರವಾದರೂ ಅಧಿಕಾರಿಗಳ ಜಾಣ ಮೌನ!: ಭಾನುವಾರ ರಾತ್ರಿ ರಸ್ತೆ ‌ಹೊಂಡಕ್ಕೆ ಬಿದ್ದು ಅದೃಷ್ಟವಶಾತ್ ಉರಗಪ್ರೇಮಿ ಪ್ರಾಣಾಪಾಯದಿಂದ ಪಾರು!, ಸೋಮವಾರ ಹೊಂಡ ಮುಚ್ಚಿದ ಸಾರ್ವಜನಿಕರು

ಬೆಳ್ತಂಗಡಿ: ವಿಷಪೂರಿತ ಹಾವನ್ನು ರಕ್ಷಿಸಿ ತರುತ್ತಿದ್ದ ಉರಗ ಪ್ರೇಮಿಯೊಬ್ಬರು, ರಸ್ತೆ ಹೊಂಡದಿಂದ ಅಪಘಾತಕ್ಕೀಡಾಗಿದ್ದು, ಈ ವೇಳೆ ರಕ್ಷಿಸಲ್ಪಟ್ಟ ಹಾವು ಕಣ್ಮರೆಯಾಗಿ ಆತಂಕ ಸೃಷ್ಟಿಯಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಮಂಜೊಟ್ಟಿ ಬಳಿ ನಡೆದಿದೆ. ಹೆದ್ದಾರಿ ಸೇರಿದಂತೆ ತಾಲೂಕಿನ ವಿವಿಧೆಡೆ ಬೃಹತ್ ಹೊಂಡಗಳು ಸೃಷ್ಟಿಯಾಗಿದ್ದರೂ ಲೋಕೋಪಯೋಗಿ ಇಲಾಖೆ ನಿದ್ರೆ ಮಾಡುತ್ತಿದೆಯೇ. ಭಾನುವಾರ ರಾತ್ರಿ ಒಂದು ವೇಳೆ ಹಾವು ಕಚ್ಚಿ ಮಾನವೀಯತೆ ಮೆರೆಯಲು ಹೋದ ಉರಗಪ್ರೇಮಿಯ ಪ್ರಾಣಹಾನಿಯಾಗುತ್ತಿದ್ದರೆ ಯಾರು ಹೊಣೆ…? ಎಂದು ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಘಟನೆಯ ವಿವರ:
ಲಾಯಿಲಾ ಬಳಿ ವಾಸಿಸುತ್ತಿರುವ ಉರಗ ಪ್ರೇಮಿ‌ ಅಶೋಕ್ ಅವರಿಗೆ ಭಾನುವಾರ ಸಂಜೆ ಕರೆಯೊಂದು ಬಂದಿದ್ದು, ವಿಷಪೂರಿತ ಹಾವಾದ ನಾಗರಹಾವು ಬಂಗಾಡಿಯ ಮನೆಯೊಂದರಲ್ಲಿ ಇರುವ ಕುರಿತು ಹಾಗೂ ರಕ್ಷಿಸಲು ಮಾಹಿತಿ ಲಭಿಸಿದೆ. ತಕ್ಷಣ ಮಾನವೀಯತೆ ದೃಷ್ಟಿಯಿಂದ ‌ ಹಾವನ್ನು ರಕ್ಷಿಸುವ ಸಲುವಾಗಿ ತೆರಳಿ, ರಕ್ಷಣಾ ಕಾರ್ಯ ನಡೆಸಿ ಹಾವನ್ನು ಡಬ್ಬದಲ್ಲಿ ತುಂಬಿದ್ದಾರೆ‌. ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಕತ್ತಲಾಗಿದ್ದು ಅಶೋಕ್ ಅವರು ರಾತ್ರಿ 8 ಗಂಟೆ ಸುಮಾರಿಗೆ ರಕ್ಷಿಸಿದ ಹಾವನ್ನು ಸುರಕ್ಷಿತ ಸ್ಥಳಕ್ಕೆ ಬಿಡುವ ದೃಷ್ಟಿಯಿಂದ ತಮ್ಮ ದ್ವಿ-ಚಕ್ರ ವಾಹನದಲ್ಲಿ ಬೆಳ್ತಂಗಡಿಯತ್ತ ಹೊರಟಿದ್ದಾರೆ. ಮಂಜೊಟ್ಟಿ ಸಮೀಪ ಹೋಗುತ್ತಿದ್ದರು, ಮಳೆ ಬಂದ ಪರಿಣಾಮ ರಸ್ತೆಯಲ್ಲಿ ನೀರು ನಿಂತಿದ್ದು, ರಸ್ತೆಯಲ್ಲಿ ಉಂಟಾಗಿದ್ದ ಬೃಹತ್ ಹೊಂಡವನ್ನು ಅಂದಾಜಿಸಲು ಸಾಧ್ಯವಾಗದೆ‌, ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಬಿದ್ದಿದೆ. ಈ ಸಂದರ್ಭದಲ್ಲಿ ಅಶೋಕ್ ಅವರೂ ಬಿದ್ದಿದ್ದು, ಅಪಘಾತದ ತೀವ್ರತೆಗೆ ಜೊತೆಗಿದ್ದ ನಾಗರ ಹಾವೂ ಡಬ್ಬದ ಮುಚ್ಚಳ ತೆರೆಯಲ್ಪಟ್ಟು, ಹೊರಗೆ ಬಂದು ಕಾಣೆಯಾಗಿದೆ. ಅಪಘಾತ ರಾತ್ರಿ ನಡೆದ ಪರಿಣಾಮ ಅಶೋಕ್ ಅವರಿಗೆ‌ ದೇಹದ ವಿವಿಧೆಡೆ ಗಾಯ ಉಂಟಾಗಿದೆ. ಈ ಸಂದರ್ಭದಲ್ಲಿ ಏನಾಗಿದೆ ಎಂದು ಯಾರೂ ಅಂದಾಜಿಸುವಂತೆ ಇರಲಿಲ್ಲ, ಒಂದು ವೇಳೆ ಹಾವು ಕಚ್ಚಿದ್ದಲ್ಲಿ ಪ್ರಾಣಾಪಾಯ ಸಂಭವಿಸುವ ಆತಂಕವೂ ಎದುರಾಗಿತ್ತು. ಅಪಘಾತದ ತೀವ್ರತೆಗೆ ದ್ವಿಚಕ್ರ ವಾಹನದ ಮುಂಭಾಗದ ಚಕ್ರ, ಶಾಕ್ ಅಬ್ಸರ್ವರ್ ಹಾನಿಗೊಂಡಿದೆ. ಅಪಘಾತದ ಮಾಹಿತಿ ಪಡೆದ ಸ್ಥಳೀಯರು ಸೋಮವಾರ ಬೆಳಗ್ಗೆ ಯಾವುದೇ ಇಲಾಖೆಗಳನ್ನು ಕಾಯುತ್ತಾ ಕೂರದೆ ಹೊಂಡ ಮುಚ್ಚುವ ಕಾರ್ಯ‌ನಡೆಸಿದ್ದಾರೆ.

ಆಸ್ಪತ್ರೆಯಲ್ಲಿ ‌ನಿಗಾ:
ಅಪಘಾತದ ಬಳಿಕ ಅಶೋಕ್ ಅವರು ಖಾಸಗಿ ಆಸ್ಪತ್ರೆಗೆ ತೆರಳಿ‌‌ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಅಶೋಕ್ ಅವರು ಬಿದ್ದ ಸ್ಥಳದ ಬಳಿಯೇ ಹಾವು ಇದ್ದ ಡಬ್ಬ ಬಿದ್ದಿದ್ದು, ಹಾವು ಕಚ್ಚಿದೆಯೇ ಎಂಬ ಆತಂಕ ಮೂಡಿತ್ತು. ಆದರೆ ಆಸ್ಪತ್ರೆಯಲ್ಲಿಯೇ ಕೆಲ ಗಂಟೆಗಳ ಕಾಲ ಇದ್ದು ಆರೋಗ್ಯದ ಬಗ್ಗೆ ನಿಗಾ ವಹಿಸಿ ಬಳಿಕ ಅದೃಷ್ಟವಶಾತ್ ಹಾವು ಕಚ್ಚಿಲ್ಲ ಎಂಬುದು ಖಾತ್ರಿಯಾದ ಬಳಿಕ ಅಶೋಕ್ ಅವರು ಮನೆಗೆ ಮರಳಿದ್ದಾರೆ.

ಸಾರ್ವಜನಿಕರ ಆಕ್ರೋಶ:
ಗುರುವಾಯನಕೆರೆ- ಬೆಳ್ತಂಗಡಿ ರಸ್ತೆ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಗ್ರಾಮೀಣ ರಸ್ತೆಗಳಲ್ಲಿ ಬೃಹತ್ ಹೊಂಡ ಸೃಷ್ಟಿಯಾಗಿದೆ‌. ಮಳೆಗಾಲದಲ್ಲಿ ಈ ಹೊಂಡಗಳ ಆಳ ಅಂದಾಜಿಸುವುದೂ ಕಷ್ಟ ಸಾಧ್ಯ. ಅದರಲ್ಲೂ ದ್ವಿ-ಚಕ್ರ ವಾಹನಗಳು ಬೃಹತ್ ಹೊಂಡಗಳಿಂದ ನಿಯಂತ್ರಣ ತಪ್ಪಿ ಸವಾರರು ಬೀಳುವ ಸಾಧ್ಯತೆ ಅಧಿಕವಾಗಿದೆ. ಹೊಂಡಗಳಿಂದ ಟ್ರಾಫಿಕ್ ಜಾಮ್, ಅಪಘಾತ, ಬೀಳುವುದು ಮೊದಲಾದ ಅವಾಂತರ ದಿನಂಪ್ರತಿ ನಡೆಯುತ್ತಿದ್ದರೂ ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧ ಪಟ್ಟ  ಅಧಿಕಾರಿಗಳು ಯಾಕೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ…? ಜನಸಾಮಾನ್ಯರ ಸಮಸ್ಯೆ ಕುರಿತು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಯಾಕೆ…? ಈ ‌ಜಾಣ ಮೌನ ಅನುಸರಿಸುತ್ತಿರುವ ಉದ್ದೇಶವಾದರೂ ಏನು…? ಗುರುವಾಯನಕೆರೆ ಬಳಿ ಬೃಹತ್ ಹೊಂಡ ಸೃಷ್ಟಿಯಾಗಿ, ಸಮಸ್ಯೆಯಾಗುತ್ತಿದ್ದರೂ ಮುಚ್ಚಲು ಯಾಕೆ ಯಾವುದೇ ಕ್ರಮ ಕೈಗೊಂಡಿಲ್ಲ…? ಎಂಬ ಪ್ರಶ್ನೆಗಳ ಸುರಿಮಳೆಯನ್ನೇ ಸಾರ್ವಜನಿಕರು ಸುರಿಸುತ್ತಿದ್ದು, ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ‌.

ಈ ಬಗ್ಗೆ  ಸಂಬಂಧ ಪಟ್ಟ ಇಲಾಖೆಗಳು ಕೂಡಲೇ ಎಚ್ಚೆತ್ತುಕೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ ಎಂಬುದು ‘ಪ್ರಜಾಪ್ರಕಾಶ ನ್ಯೂಸ್’ ತಂಡದ ಆಶಯವಾಗಿದೆ.

error: Content is protected !!