ಬೆಂಗಳೂರು: ನಟ ಸಂಚಾರಿ ವಿಜಯ್ ಅವರ ಮೆದುಳು ವಿಫಲಗೊಂಡಿದೆ ಎಂದು ಅಪೋಲೋ ಆಸ್ಪತ್ರೆ ವೈದ್ಯರು ಮಧ್ಯಾಹ್ನ ತಿಳಿಸಿದ್ದರು. ಇದೀಗ 8.30ರ ಸುಮಾರಿಗೆ ವೈದ್ಯರು ಮಾಹಿತಿ ನೀಡಿ ಮೆದುಳು ನಿಷ್ಕ್ರಿಯ ಗೊಂಡಿದೆ. ಅಪ್ನಿಯಾ ಎರಡು ಟೆಸ್ಟ್ ಗಳಲ್ಲೂ ಪಾಸಿಟಿವ್ ವರದಿ ಬಂದಿದ್ದು ಬ್ರೈನ್ ಡೆಡ್ ಆಗಿರುವುದು ದೃಢಪಟ್ಟಿದೆ ಎಂದು ಅಪೋಲೋ ಆಸ್ಪತ್ರೆ ವೈದ್ಯ ಡಾ. ಅರುಣ್ ನಾಯಕ್ ತಿಳಿಸಿದ್ದಾರೆ.
ಸಂಚಾರಿ ವಿಜಯ್ ಅವರ ಕುಟುಂಬದ ಅನುಮತಿ ಮೇರೆಗೆ ಅಂಗಾಂಗಗಳ ದಾನ ಪಡೆಯಲು ವೈದ್ಯರ ತಂಡದ ಸಿದ್ಧತೆ ನಡೆಸಿದೆ. ಕಿಡ್ನಿಗಳು, ಕಣ್ಣುಗಳು, ಹಾರ್ಟ್ ವಾಲ್ವ್, ಲಿವರ್ ಮೊದಲಾದ ಅಂಗಾಂಗಗಳನ್ನು ರಾತ್ರಿ 9.30ರ ಸುಮಾರಿಗೆ ದಾನ ಪಡೆಯುವ ಪ್ರಕ್ರಿಯೆ ನಡೆಯಲಿದೆ. ಅದೇ ರೀತಿ ಇದೇ ಹೊತ್ತಿಗೆ ಆಸ್ಪತ್ರೆಯ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಿದೆ. ಈ ವೇಳೆ ವಿಜಯ್ ಅವರ ನಿಧನ ಮಾಹಿತಿ ಅಧಿಕೃತವಾಗಿ ತಿಳಿಸುವ ಸಾಧ್ಯತೆಯಿದೆ.
ಅಂಗಾಂಗ ದಾನ:
ಅಪೋಲೋ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ.ಅರುಣ್ ನಾಯಕ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಅಂಗಾಂಗ ದಾನ ಪ್ರಕ್ರಿಯೆ ಮುಗಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಯಲಿದೆ. ಮಂಗಳವಾರ ಮುಂಜಾವಿನ ವೇಳೆಗೆ ಶರೀರ ಹಸ್ತಾಂತರ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದ್ದಾರೆ.
ಅಂತಿಮ ದರ್ಶನ:
ಮಂಗಳವಾರ ಬೆಳಗ್ಗೆ 8ರಿಂದ 10ರವರೆಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅವರ ಹುಟ್ಟೂರು, ಕಡೂರು ತಾಲೂಕಿನ ಪಂಚನ ಹಳ್ಳಿಯಲ್ಲಿ ಅಂತಿಮ ವಿಧಿ ವಿಧಾನ ನಡೆಯಲಿದೆ ಎಂಬುದಾಗಿ ವಿಜಯ್ ಸ್ನೇಹಿತ, ನಿರ್ದೇಶಕ ಮಂಸೋರೆ ಮಾಹಿತಿ ನೀಡಿದ್ದಾರೆ.
ಸಂಚಾರಿ ವಿಜಯ್ ಅವರು ಸಂಚರಿಸುತ್ತಿದ್ದ ಬೈಕ್ ಶನಿವಾರ ರಾತ್ರಿ ಅಪಘಾತಗೊಂಡು ಗಂಭೀರ ಗಾಯಗೊಂಡಿದ್ದರು, ಇವರನ್ನು ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ರು. ವಿಜಯ್ ಅವರ ತಲೆ ಹಾಗೂ ತೊಡೆಗೆ ಗಂಭೀರ ರೀತಿಯ ಏಟು ಬಿದ್ದಿದ್ದು, ಬಲ ಮೆದುಳಿಗೆ ತೀವ್ರ ಸ್ವರೂಪದ ಗಾಯವಾಗಿದ್ದರಿಂದ ಶನಿವಾರ ತಡರಾತ್ರಿಯೇ ಸರ್ಜರಿ ಮಾಡಲಾಗಿತ್ತು.
ಸಂಚಾರಿ ವಿಜಯ್ ‘ನಾನು ಅವನಲ್ಲ ಅವಳು’, ‘ಹರಿವು’ ಚಿತ್ರಗಳ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆದು ಖ್ಯಾತರಾಗಿದ್ದರು. ಮೇಲೊಬ್ಬ ಮಾಯಾವಿ, ತಲೆದಂಡ, ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿತ್ತು. ವಿಜಯ್ ಈ ಹಿಂದೆ ನಾತಿಚರಾಮಿ, ಕಿಲ್ಲಿಂಗ್ ವೀರಪ್ಪನ್, ಕೃಷ್ಟ ತುಳಸಿ, ರಿಕ್ತ, 6ನೇ ಮೈಲಿ, ಆಟಕ್ಕುಂಟು ಲೆಕ್ಕಕ್ಕಿಲ್ಲ, ಫಿರಂಗಿಪುರ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.