ಮಂಗಳೂರು: ಬೆಳ್ತಂಗಡಿ ತಾಲೂಕಿನ 8 ಗ್ರಾಮಗಳು ಸೇರಿ ದ.ಕ. ಜಿಲ್ಲೆಯ ಒಟ್ಟು 17 ಗ್ರಾಮಗಳನ್ನು ಜೂ.14ರ ಬೆಳಗ್ಗೆ 9 ಗಂಟೆಯಿಂದ ಜೂ. 21ರ ಬೆಳಗ್ಗೆ 9 ಗಂಟೆವರೆಗೆ ಸೀಲ್ ಡೌನ್ ಮಾಡಿ ಕೊರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಕಛೇರಿಯಿಂದ ಆದೇಶ ಹೊರಡಿಸಲಾಗಿದೆ. ಮಂಗಳೂರಿನ ನೀರುಮಾರ್ಗ, ಕೋಣಾಜೆ, ಸುಳ್ಯ ತಾಲೂಕಿನ ಐವರ್ನಾಡು, ಅಮರ ಮುಡ್ನೂರು, ಕೊಲ್ಲಮೊಗರು, ಗುತ್ತಿಗಾರು, ಅರಂತೋಡು ಸೇರಿ 5 ಗ್ರಾಮಗಳು ಹಾಗೂ ಕಡಬ ತಾಲೂಕಿನ ಸುಬ್ರಹ್ಮಣ್ಯ ಹಾಗೂ ಸವಣೂರು ಗ್ರಾಮಗಳು ಇದರಲ್ಲಿ ಸೇರಿವೆ.
ಸೀಲ್ ಡೌನ್ ಪಟ್ಟಿಯಲ್ಲಿ ಬೆಳ್ತಂಗಡಿಯದ್ದೇ ಸಿಂಹಪಾಲು ಇದ್ದು, ನಾರಾವಿ, ಕೊಯ್ಯೂರು, ಮಿತ್ತಬಾಗಿಲು, ಮಾಲಾಡಿ, ನೆರಿಯ, ಲಾಯಿಲಾ, ಉಜಿರೆ, ಚಾರ್ಮಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯನ್ನು ಸೀಲ್ ಡೌನ್ ಮಾಡಿ ಸೂಚನೆ ನೀಡಲಾಗಿದೆ.
ಸೀಲ್ ಡೌನ್ ಅವಧಿಯ ಒಂದು ವಾರ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಗ್ರಾಮಸ್ಥರಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಗ್ರಾಮ ಮಟ್ಟದಲ್ಲಿ ಕಾರ್ಯಪಡೆ ರಚಿಸಿ ಅದರ ಸದಸ್ಯರ ಮೂಲಕ ವಸ್ತುಗಳನ್ನು ಪೂರೈಸಲು ಸೂಚನೆ ನೀಡಲಾಗಿದೆ.
ಲಾಕ್ ಡೌನ್ ಕಟ್ಟುನಿಟ್ಟಿನ ಅನುಷ್ಠಾನ ಹಾಗೂ ಕೊರೋನಾ ನಿಯಂತ್ರಣಕ್ಕೆ ತಹಶೀಲ್ದಾರ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು, ಪೊಲೀಸ್ ವೃತ್ತ ನಿರೀಕ್ಷಕರು, ಪಿ.ಡಿ.ಓ.ಗಳು ಕ್ರಮಕೈಗೊಳ್ಳುವಂತೆಯೂ ಸೂಚಿಸಲಾಗಿದೆ.