ಧರ್ಮಸ್ಥಳ: ಧರ್ಮಸ್ಥಳದ ಅಣ್ಣಪ್ಪ ಬೆಟ್ಟದ ಬಳಿ ವ್ಯಕ್ತಿಯೋರ್ವ ಗಾಯಗೊಂಡಿದ್ದು, ‘ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರ’ ಸಕಾಲಿಕ ಸಮಯಪ್ರಜ್ಞೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಫಿಡ್ಸ್ ಪೀಡಿತನಾಗಿ ಬಳಲುತ್ತಿದ್ದ ವ್ಯಕ್ತಿ ಒಬ್ಬಂಟಿಯಾಗಿದ್ದು, ಬಿದ್ದಾಗ ತಲೆಗೆ ತೀವ್ರ ಪೆಟ್ಟಾಗಿದ್ದು, ರಕ್ತ ಸ್ರಾವವಾಗಿ ರಸ್ತೆ ಬದಿ ಬಿದ್ದುಕೊಂಡಿದ್ದರು. ರಸ್ತೆಯಲ್ಲಿ ಸಾಗುತ್ತಿದ್ದ ‘ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರು’ ಇದನ್ನು ಗಮನಿಸಿ ಸಹಾಯಕ್ಕೆ ಧಾವಿಸಿದರು. ಪ್ರಾಥಮಿಕ ಚಿಕಿತ್ಸೆಯ ಬಳಿಕ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಆಕಾಶ್ ಅವರನ್ನು ಸಂಪರ್ಕಿಸಿ, ಅವರ ಸಲಹೆಯ ಮೇರೆಗೆ ಆ್ಯಂಬುಲೆನ್ಸ್ ಮುಖಾಂತರ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ತೀವ್ರ ರಕ್ತಸ್ರಾವವಾಗುತ್ತಿದ್ದ ಹಿನ್ನೆಲೆ ಅಸ್ಪತ್ರೆಗೆ ಸೇರಿಸುವುದು ತಡವಾಗಿದ್ದರೆ ಅಥವಾ ಯಾರೂ ಸಮೀಪ ಸುಳಿಯದಿದ್ದರೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯೂ ಇತ್ತು ಎನ್ನಲಾಗುತ್ತಿದೆ.
ಧರ್ಮಸ್ಥಳ ವಲಯ ಸ್ವಯಂಸೇವಕರಾದ ಪೃಥ್ವೀಶ್ ಧರ್ಮಸ್ಥಳ, ಸ್ನೇಕ್ ಪ್ರಕಾಶ್, ಬೆಳಾಲು ವಲಯ ಸ್ವಯಂಸೇವಕ ಸಂತೋಷ್, ಉಜಿರೆ ವಲಯ ಸ್ವಯಂಸೇವಕ ರವೀಂದ್ರ ಹಾಗೂ ಸ್ಥಳೀಯರ ಸಮಯಪ್ರಜ್ಞೆಯಿಂದ ವ್ಯಕ್ತಿಯ ಜೀವ ಉಳಿದಿದೆ.
ವರದಿ: ಸ್ವಸ್ತಿಕ್ ಕನ್ಯಾಡಿ