ಬೆಂಗಳೂರು: ಕೋವಿಡ್ ಕಾರಣದಿಂದ ಈಗಾಗಲೇ ಕೇಂದ್ರ ಮಟ್ಟದ ಸಿಬಿಎಸ್ ಇ ಮತ್ತು ಐಸಿಎಸ್‌ಇ 10ನೇ, 12ನೇ ತರಗತಿ ಪರೀಕ್ಷೆಗಳು ರದ್ದಾಗಿದ್ದು, ರಾಜ್ಯದಲ್ಲಿ 2021ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆ ರದ್ದು ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಹತ್ವದ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮಕ್ಕಳ ಆರೋಗ್ಯ ಮತ್ತು ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ದ್ವಿತೀಯ ಪಿಯು ಪರೀಕ್ಷೆ ನಡೆಸುವುದಿಲ್ಲ. ಪ್ರಥಮ ಪಿಯು ಪರೀಕ್ಷೆ ಫಲಿತಾಂಶದ ಆಧಾರದಲ್ಲಿ ಗ್ರೇಡಿಂಗ್ ನೀಡಲಾಗುವುದು ಎಂದರು.
ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಸ್ಪೆಷಲ್ ಪರೀಕ್ಷೆ:
ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ವಿಶೇಷ ರೀತಿಯಲ್ಲಿ ಪರೀಕ್ಷೆ ನಡೆಸಲು ಯೋಜನೆ ರೂಪಿಸಲಾಗಿದೆ. ಜುಲೈ ಮೂರನೇ ವಾರದಲ್ಲಿ sslc ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಎಸ್.ಎಸ್.ಎಲ್.ಸಿ. ಕೋರ್ ವಿಷಯಗಳಾದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಸೇರಿಸಿ ಒಂದು ಪರೀಕ್ಷೆ ನಿಗದಿಪಡಿಸಲಾಗಿದೆ. ಪ್ರಶ್ನೆ ಪತ್ರಿಕೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳು(Multiple choice questions) ಮಾತ್ರ ಇರಲಿದ್ದು, ಸರಳವಾಗಿರಲಿದೆ. ಕೆಲವೇ ದಿನಗಳಲ್ಲಿ ಇದರ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡಲಾಗುವುದು. ಪ್ರಥಮ ಭಾಷೆ, ದ್ವಿತೀಯ ಭಾಷೆ ಹಾಗೂ ತೃತೀಯ ಭಾಷೆಗೆ ಮತ್ತೊಂದು ಪರೀಕ್ಷೆ ಇರಲಿದೆ ಎಂದರು.
ಈ ಬಾರಿ ಪರೀಕ್ಷಾ ಕೇಂದ್ರಗಳ ಸಂಖ್ಯೆ ದುಪ್ಪಟ್ಟು ಆಗಲಿದೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಒಂದು ಕೊಠಡಿಯಲ್ಲಿ 10ರಿಂದ 12 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ N 95 ಮಾಸ್ಕ್ ವಿತರಣೆ ಮಾಡಲಾಗುತ್ತದೆ. ಒಂದು ವೇಳೆ ಅನಿವಾರ್ಯ ಕಾರಣಗಳಿಂದಾಗಿ ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದರೆ, ಮತ್ತೊಂದು ಅವಕಾಶವನ್ನೂ ನೀಡಲಾಗುವುದು. ಅಂಕಗಳು ಗ್ರೇಡಿಂಗ್ ಮಾದರಿಯಲ್ಲಿ ಫಲಿತಾಂಶಗಳು ಪ್ರಕಟವಾಗಲಿದೆ ಎಂದು ಮಾಹಿತಿ ನೀಡದರು.
ಈ ಮೂಲಕ ರಾಜ್ಯದಲ್ಲಿ ಪಿ.ಯು. ಹಾಗೂ ಎಸ್.ಎಸ್.ಎಲ್. ಸಿ., ಪರೀಕ್ಷೆಗಳ ಬಗ್ಗೆ ತಲೆದೋರಿದ್ದ ಗೊಂದಲಗಳಿಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತೆರೆಯೆಳೆದಿದ್ದಾರೆ.