ಬೀದಿ ಬದಿಯಲ್ಲಿ ಸ್ಯಾಂಡಲ್ ವುಡ್ ಹಿರಿಯ ನಟಿ‌ ಮೃತದೇಹ!: ಕಸದ ರಾಶಿ ಬದಿ ಶವ ಮಲಗಿಸಿರುವ ವಿಡಿಯೋ ವೈರಲ್!: ಶುಕ್ರವಾರ ಅಂತ್ಯಸಂಸ್ಕಾರಕ್ಕೂ ಮುನ್ನ ನಡೆದಿದ್ದ ಘಟನೆ: ಸ್ಪಷ್ಟನೆ ‌ನೀಡಿದ ಬಿ.ಜಯಾ ಕುಟುಂಬ: ಪರಿಸ್ಥಿತಿ ಲಾಭ‌ ಪಡೆದ್ರಾ ಸ್ಥಳೀಯರು?

 

ಬೆಂಗಳೂರು: ಒಂದು ತಿಂಗಳ ಹಿಂದೆ ಪಾರ್ಶ್ವವಾಯು ಕಾಯಿಲೆಗೆ ತುತ್ತಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದ ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟಿ ಬಿ. ಜಯಾ(77) ಅವರ ಮೃತದೇಹ, ಅಂತ್ಯಕ್ರಿಯೆ ‌ನಡೆಸದೆ ಬೀದಿ ಬದಿಯಲ್ಲಿ ಬಿದ್ದುಕೊಂಡಿದೆ ಎಂಬ ವಿಡಿಯೋ ‌ಶುಕ್ರವಾರ ವೈರಲ್ ಆಗಿದೆ. ಅಸಲಿಗೆ ಕಸದ ಬದಿ ಮೃತದೇಹ ಇದ್ದುದು ನಿಜವಾದರೂ, ವಿಡಿಯೋದಲ್ಲಿ ಹೇಳಲಾದಂತೆ‌ ಅನಾಥವಾಗಿ ಬೀದಿಯಲ್ಲಿ ಇರಲಿಲ್ಲ. ಸ್ಥಳೀಯರು ಪರಿಸ್ಥಿತಿ ಲಾಭ ಪಡೆದು ವಿಡಿಯೋ ಮಾಡಿ, ಚಿತ್ರರಂಗವನ್ನು ದೂಷಿಸಿದ್ದಾರೆ ಎಂದು ಕುಟುಂಬಸ್ಥರು ವಿಡಿಯೋ ಮಾಡಿ ಆರೊಪಿಸಿದ್ದಾರೆ.

ಸುಮಾರು 6 ದಶಕಗಳಿಗೂ ಹೆಚ್ಚು ಕಾಲ ಕಲಾ ಸೇವೆ ಮಾಡಿದ ಹಿರಿಯ ನಟಿ ಬಿ. ಜಯಾ ಅವರು ಅನಾರೋಗ್ಯ ಹಾಗ ವಯೋಸಹಜ ಸಮಸ್ಯೆಗಳಿಂದ ಜೂ. 3 ಗುರುವಾರ ನಿಧನರಾಗಿದ್ದರು. ಶುಕ್ರವಾರ ಸಂಜೆಯ ವೇಳೆಗೆ ‌ವಿಡಿಯೋ ಒಂದು ಹರಿದಾಡಿದ್ದು, ಯಾರೋ‌‌ನಾಲ್ಕು ಮಂದಿ ಹಿರಿಯ ಬಿ.ಜಯಾ ಅವರ ಮೃತದೇಹ ಬೀದಿ ಬದಿ, ಕಸದ ರಾಶಿ ಬಳಿ ಬಿದ್ದುಕೊಂಡಿದೆ. ಅಂತ್ಯಕ್ರಿಯೆ ನಡೆಸಲು ಸ್ಯಾಂಡಲ್ ವುಡ್ ನಲ್ಲಿ ಯಾರೂ ‌ಇಲ್ಲವೇ? ಯಾರಾದರೂ ಮೃತದೇಹಕ್ಕೆ ಮುಕ್ತಿ ನೀಡಿ‌‌ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ. ಆದರೆ ಬಳಿಕ ವಿಡಿಯೋ ವೈರಲ್ ಆಗಿದ್ದು, ಶುಕ್ರವಾರ ಬೆಳಗ್ಗೆ ನಡೆದಿದ್ದ ಘಟನೆ ಬಗ್ಗೆ ಬಿ.ಜಯಾ ಕುಟುಂಬ ಸ್ಪಷ್ಟನೆ ನೀಡಿದೆ.

ಘಟನೆ ಬಗ್ಗೆ ಬಿ.ಜಯಾ ಅವರ ತಮ್ಮ ಮಲ್ಲೇಶ್ ಹಾಗೂ ಅವರ ಮಗಳು ವಿಡಿಯೋ ಮಾಡಿದ್ದು, ಅಂತ್ಯಕ್ರಿಯೆಗೂ ಮುನ್ನ ರಸ್ತೆ ಬದಿ ಮಲಗಿಸಿದ್ದು ನಿಜ. ಬೆಳಗ್ಗೆ ಸುಮಾರು 9 ಗಂಟೆಗೆ ಮೃತದೇಹವನ್ನು ಅಂತ್ಯಕ್ರಿಯೆ ಸ್ಥಳಕ್ಕೆ ಕೊಂಡೊಯ್ಯಲಾಗಿದೆ‌, ಆದರೆ ಅಂತ್ಯಕ್ರಿಯೆಗೆ 11 ಗಂಟೆ ಬಳಿಕ ಸಮಯ ನಿಗದಿಪಡಿಸಲಾಗಿತ್ತು. ಕೋವಿಡ್ ನಿಯಮಾಮವಳಿ ಇದ್ದುದರಿಂದ ‌ಅಂತ್ಯಕ್ರಿಯೆ ಸ್ಥಳಕ್ಕೆ ಚಿತ್ರರಂಗದ ಯಾರಿಗೂ ಬರಲು ತಿಳಿಸಿರಲಿಲ್ಲ. ರುದ್ರಭೂಮಿಯೊಳಗೆ‌ ಕೊಂಡು ಹೋದ ತಕ್ಷಣ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಆದ್ದರಿಂದ ಅಂತ್ಯಕ್ರಿಯೆ ಪೂರ್ವ ವಿಧಿ- ವಿಧಾನಗಳನ್ನು ರುದ್ರಭೂಮಿಯ ಹೊರಗೆ ನಡೆಸಲು ತಿಳಿಸಲಾಗಿತ್ತು. ಆದ್ದರಿಂದ ಅಲ್ಲಿ ಇದ್ದ ರಸ್ತೆ ಬದಿಯಲ್ಲಿ ಅಂತ್ಯಕ್ರಿಯೆ ಪೂರ್ವ ವಿಧಿಗಳನ್ನು ನೆರವೇರಿಸಲು ಮಲಗಿಸಲಾಗಿತ್ತು. ಅಂತ್ಯಕ್ರಿಯೆಗೆ ಸಮಯಾವಕಾಶ ಇದ್ದುದರಿಂದ ಗೊಂದಲ ಉಂಟಾಗಿದೆ. ಈ ಸಮಯಾವಕಾಶದ ಸಂದರ್ಭದಲ್ಲಿ ಕೆಲವರು ವಿಡಿಯೋ ಮಾಡಿ ಗೊಂದಲ ಮೂಡಿಸುವ ಕಾರ್ಯ ಮಾಡಿದ್ದಾರೆ. ಜಯಾ ಅವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾಗ ಕುಟುಂಬದಿಂದ ಸಕಲ ಚಿಕಿತ್ಸೆ ನೀಡಲಾಗಿದೆ. ಯಾವುದಕ್ಕೂ ಕೊರತೆ ಮಾಡಿಲ್ಲ‌. ಚಿತ್ರರಂಗದ ಗಣ್ಯರೂ ಜಯಾ ಅವರ ಚಿಕಿತ್ಸೆಗೆ ಸಹಾಯ, ಸಹಕಾರ ನೀಡಿದ್ದಾರೆ ಎಂದು ಈ ವಿಡಿಯೋದಲ್ಲಿ ತಿಳಿಸಲಾಗಿದೆ.

350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಜಯಾ ಅವರು ನಟಿಸಿದ್ದು ರಂಗಭೂಮಿ, ಕಿರುತೆರೆಯಲ್ಲೂ ತಮ್ಮ ಛಾಪು ಮೂಡಿಸಿದ್ದರು. 1958ರಲ್ಲಿ ತೆರೆಕಂಡ ‘ಭಕ್ತ ಪ್ರಹ್ಲಾದ’ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಡಾ.ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಹಾಗೂ‌ ಇಂದಿನ ಯುವ ಪೀಳಿಗೆಯ ನಟರೊಂದಿಗೂ ಜಯಾ ನಟಿಸಿದ್ದರು. ಸುಮಾರು 6 ದಶಕಗಳಿಗೂ ಅಧಿಕ ಕಾಲ ಕನ್ನಡ ಚಿತ್ರರಂಗದಲ್ಲಿ ಪೋಷಕ ನಟಿಯಾಗಿ ಗುರುತಿಸಿಕೊಂಡಿದ್ದರು. ಅದರಲ್ಲೂ ಮುಖ್ಯವಾಗಿ ಕನ್ನಡ ಚಿತ್ರರಂಗದ ಮೊದಲ ತಲೆಮಾರಿನ ಹಾಸ್ಯನಟಿ ಎಂದು ಜಯಾ ಖ್ಯಾತರಾಗಿದ್ದಾರೆ.

error: Content is protected !!