ಮಂಗಳೂರು: ಕೇರಳಕ್ಕೆ ನೈರುತ್ಯ ಮಾರುತಗಳು ಪ್ರವೇಶಿಸಿವೆ. ಅರಬ್ಬಿ ಸಮುದ್ರದ ಮಧ್ಯ ಭಾಗದಲ್ಲಿ ಮೇಲ್ಮೆ ಸುಳಿಗಾಳಿ ತೀವ್ರವಾಗಿರುವುದರಿಂದ ರಾಜ್ಯದ ವಿವಿಧೆಡೆ ಈಗಾಗಲೇ ಮಳೆಯಾಗುತ್ತಿದೆ. ಮುಂಗಾರು ಪ್ರವೇಶದ ಹಿನ್ನೆಲೆ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಇನ್ನೆರಡು ದಿನ ಗುಡುಗು -ಮಿಂಚು ಸಹಿತ ಮಳೆಯಾಗಲಿದ್ದು, ಗಂಟೆಗೆ 30-40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಮಾಹಿತಿ ಹಾಗೂ ಮುನ್ನೆಚ್ಚರಿಕೆ ನೀಡಿದೆ.
ಕರ್ನಾಟಕಕ್ಕೆ ಶನಿವಾರ ಮುಂಗಾರು ಪ್ರವೇಶವಾಗಲಿದ್ದು, ಜೂ.6ರವರೆಗೆ ರಾಜ್ಯಾದ್ಯಂತ ಗುಡುಗು ಸಹಿತ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಒಟ್ಟು 17 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಜಿಲ್ಲೆಗಳಾದ ದ.ಕ., ಉಡುಪಿ ಹಾಗೂ ಉ.ಕ.ದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ಎಲ್ಲೋ ಅಲರ್ಟ್ ಘೋಷಿಸಿರುವ ಇತರ ಜಿಲ್ಲೆಗಳು ಬೀದರ್, ಗದಗ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಕಲಬುರಗಿ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ಕೊಡಗು, ಹಾಸನ, ಕೊಪ್ಪಳ, ದಾವಣಗೆರೆ. ಈ ಜಿಲ್ಲೆಗಳಲ್ಲಿ 64.5 ಮಿ.ಮೀ.ನಿಂದ 115.5 ಮಿ.ಮೀ. ಮಳೆಯಾಗುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಲಾಗಿದೆ.