ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರ ಕ್ರಿಯಾಶೀಲತೆಯಿಂದ ಜಿಲ್ಲೆಯಲ್ಲೇ ಅತ್ಯುತ್ತಮ ಆರೋಗ್ಯ ಸೇವೆಯನ್ನು ಬೆಳ್ತಂಗಡಿಗೆ ಒದಗಿಸಿದ್ದಾರೆ. ಅವರ ಸೇವಾ ಕಾರ್ಯ ಎಲ್ಲರಿಗೂ ಮಾದರಿಯಾಗಿದ್ದು, ಬೆಳ್ತಂಗಡಿ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಪ್ರತ್ಯೇಕ ಮಕ್ಕಳ ವಿಭಾಗ ತೆರೆಯಲು ಅನುದಾನ ಕೋರಿದ್ದು ಎಂ.ಆರ್.ಪಿ.ಎಲ್. ಸಂಸ್ಥೆಯೊಂದಿಗೆ ಮಾತುಕತೆ ನಡೆಸಿದ್ದೇನೆ. ಅಗತ್ಯವಾಗಿ ಸಹಕಾರ ನೀಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೆ.ಐ.ಓ.ಸಿ.ಎಲ್. ಲಿಮಿಟೆಡ್ ವತಿಯಿಂದ ಸಿ.ಎಸ್.ಆರ್. ಫಂಡ್ ಮೂಲಕ ನೀಡಲಾದ 50 ಬೆಡ್ ಗಳ ವಿತರಣೆ ಸಂದರ್ಭ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಸಹಕಾರ ಕೋರಿದ ಹಿನ್ನಲೆಯಲ್ಲಿ ಸಂಸದ ಕಟೀಲು ಅವರು ಸ್ಪಂದಿಸಿ, ಭರವಸೆ ನೀಡಿದರು.
ಶಾಸಕರು ಶ್ರಮವಹಿಸಿ ತಂದಿರುವ ಆರೋಗ್ಯ ಇಲಾಖೆಗೆ ಸಂಬಂದಪಟ್ಟ ಅಭಿವೃದ್ಧಿ ಕಾರ್ಯಗಳು ತಾಲೂಕಿನ ಜನತೆಗೆ ಸದುಪಯೋಗ ಆಗುವಂತೆ ನೋಡಿಕೊಳ್ಳುವ ಕೆಲಸ ಆರೋಗ್ಯ ಇಲಾಖೆಯದ್ದು. ಈಗಾಗಲೇ ಕೋವಿಡ್ ನಿಯಂತ್ರಣಕ್ಕೆ ಬೆಳ್ತಂಗಡಿಯಲ್ಲಿ ಹಲವಾರು ಯೋಜನೆ, ಯೋಚನೆ ನಡೆದಿದೆ. ಸ್ವಾಬ್ ಟೆಸ್ಟ್ ಗೆ ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ವಾಹನ , ರಾಜ್ಯಯಲ್ಲೇ ಪ್ರಪ್ರಥಮವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೆಂದ್ರ ಹೆಗ್ಗಡೆಯವರ ಸಹಕಾರದಲ್ಲಿ ಕೋವಿಡ್ ಕೇರ್ ಸೆಂಟರ್, ಬೆಳ್ತಂಗಡಿಗೆ ಆಕ್ಸಿಜನ್ ಪ್ಲಾಂಟ್, ಪ್ರತಿ ಪ್ರಾ.ಆರೋಗ್ಯ ಕೇಂದ್ರಗಳಿಗೆ
ಮಿನಿ ಆಕ್ಸಿಜನ್ ಸಿಲಿಂಡರ್, 50 ಬೆಡ್ ಗಳ ಒದಗಣೆ ಸೇರಿದಂತೆ ಜನರ ಆರೋಗ್ಯದ ದೃಷ್ಟಿಯಿಂದ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಭಾರತ ಸರಕಾರದ ಉದ್ಯಮ ಸಂಸ್ಥೆಗಳಾದ ಎಂ.ಆರ್.ಪಿ.ಎಲ್., ಕೆ.ಐ.ಓ.ಸಿ.ಎಲ್ ಮೊದಲಾದ ಮಂಗಳೂರಿನ ಎಲ್ಲಾ ಕಂಪೆನಿಗಳು ಸಹಕಾರ ನೀಡಿದೆ. ಕೆ.ಐ.ಓ.ಸಿ.ಎಲ್ ಕಂಪೆನಿ ಕಳೆದ ಬಾರಿ 10 ಕೋ.ರೂ. ಸಲಕರಣೆ ಒದಗಿಸಿದ್ದು, ಈ ಬಾರಿ ತನ್ನ ಲಾಭಂಶದಲ್ಲಿ ಆಂಬ್ಯುಲೆನ್ಸ್ ಸಹಿತ ಬೆಡ್ ಒದಗಿಸಲು 2 ಕೋ.ರೂ. ವಿನಿಯೋಗಿಸಿದೆ. ಈ ಪೈಕಿ ಬೆಳ್ತಂಗಡಿ ಹಾಗೂ ಮೂಡುಬಿದರೆಗೆ ತಲಾ 50 ಬೆಡ್, ಉಪ್ಪಿನಂಗಡಿಗೆ ಆಕ್ಸಿಜನ್ ಪ್ಲಾಂಟ್ ನೀಡಿದ್ದಾರೆ ಎಂದು ತಿಳಿಸದ ಅವರು ಕಂಪೆನಿಯ ಕೆಲಸವನ್ನು ಶ್ಲಾಘಿಸಿದರು.
ಕೆ.ಐ..ಓ.ಸಿ.ಎಲ್ ಸಂಸ್ಥೆಯ ಮುಖ್ಯ ಆಡಳಿತ ನಿರ್ದೇಶಕ ಎಂ. ವಿ. ಸುಬ್ಬರಾವ್ ಅವರು, ಜಿಲ್ಲೆಯ ಎಲ್ಲಾ ರಾಜಕೀಯ ಜನಪ್ರತಿನಿಧಿಗಳು ಕಂಪೆನಿಗೆ ಸಹಕಾರ ನೀಡುತ್ತಿರುವ ಹಿನ್ನಲೆಯಲ್ಲಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಮುಂದಿನ ದಿನಗಳಲ್ಲೂ ಆರೋಗ್ಯಕ್ಕೆ ಸಂಬಂದಿಸಿದ ವಿಷಯಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದರು.
ತಾಲೂಕಿನ ಜನತೆಯ ಆರೋಗ್ಯ ದೃಷ್ಟಿಯಿಂದ ಎಲ್ಲಾ ವಿಧದಲ್ಲೂ ಸಹಕಾರ ನೀಡುತ್ತಿರುವ ಸಂಸದ ನಳಿನ್ ಕುಮಾರ್ ಗೆ ಹಾಗೂ ಸಿ.ಎಸ್.ಆರ್ ಫಂಡ್ ನಿಂದ 50 ಬೆಡ್ ಒದಗಿಸಿದ ಕೆ.ಐ.ಓ.ಸಿ.ಎಲ್ ಕಂಪನಿಗೆ ಶಾಸಕ ಹರೀಶ್ ಪೂಂಜ ಕೃತಜ್ಞತೆ ಸಲ್ಲಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಯಾನಂದ ಗೌಡ, ಸದಸ್ಯ ಶರತ್ ಕುಮಾರ್, ತಹಸೀಲ್ದಾರ್ ಮಹೇಶ್ ಜೆ., ತಾಲೂಕು ವೈದಾಧಿಕಾರಿ ಡಾ. ಕಲಾಮಧು , ತಾಲೂಕು ಆಸ್ಪತ್ರೆ ಆಡಳಿತ ವೈದಾಧಿಕಾರಿ ಡಾ. ವಿದ್ಯಾವತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್., ಕೆ.ಐ.ಓ.ಸಿ.ಎಲ್ ಕಂಪನಿಯ ಅಧಿಕಾರಿಗಳು ಉಪಸ್ಥಿತರಿದ್ದರು.