ನೀರಿನಲ್ಲಿ ಕೊಚ್ಚಿಹೋದ ಪಿಕಪ್ ವಾಹನ: ಸ್ಥಳೀಯರ ಸಾಹಸದಿಂದ ಮತ್ತೆ ದಡಕ್ಕೆ: ಬೆಳ್ತಂಗಡಿ ತಾಲೂಕು ಚಾರ್ಮಾಡಿ, ಚಿಬಿದ್ರೆ ಬಳಿ ಘಟನೆ

 

ಬೆಳ್ತಂಗಡಿ: ಪಿಕಪ್ ವಾಹನವೊಂದು ನದಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋದ ಘಟನೆ ಚಾರ್ಮಾಡಿ ಸಮೀಪದ ಚಿಬಿದ್ರೆಯ ಉರ್ಪೆಲ್ ಗುಡ್ಡೆ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.

ಉರ್ಪೆಲ್ ಗುಡ್ಡೆ ಬಳಿ ಮೃತ್ಯುಂಜಯ ನದಿಯಲ್ಲಿ ಅಳದಂಗಡಿ ಕಡೆಯ ಪಿಕಪ್ ವಾಹನದಲ್ಲಿ ಸ್ಥಳೀಯರಾದ ಎಂ.ಕೆ. ದಯಾನಂದ ಎಂಬವರ ಮನೆಗೆ ಸೆಂಟ್ರಿಂಗ್ ಸಾಮಗ್ರಿಗಳನ್ನು ಸಾಗಿಸಿ ವಾಹನ ವಾಪಸಾಗುತ್ತಿತ್ತು. ಈ ಸಂದರ್ಭದಲ್ಲಿ ಪಿಕಪ್ ವಾಹನ ನದಿಯ ಮಧ್ಯಭಾಗಕ್ಕೆ ಬರುತ್ತಿದ್ದಂತೆಯೇ ಭಾರೀ ಪ್ರಮಾಣದ ನೀರು ಹರಿದು ಬಂದಿದೆ ಎಂದು ಹೇಳಲಾಗುತ್ತಿದೆ. ವಾಹನ ಚಲಾಯಿಸಲು ಸಾಧ್ಯವಾಗದಿದ್ದಾಗ ಅಪಾಯದ ಸೂಚನೆ ಅರಿತ ಪಿಕಪ್ ಚಾಲಕ ಹಾಗೂ ಪಿಕಪ್ ನಲ್ಲಿದ್ದ ಮತ್ತೋರ್ವ ವಾಹನದಿಂದ ಇಳಿದು ದಡಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ಪಿಕಪ್ ಅಲ್ಲಿಯೇ ಸಿಲುಕಿಕೊಂಡಿದ್ದು, ಚಾಲಕ ಕರೆಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಯುವಕರು ನೀರಿಗೆ ಇಳಿದು ವಾಹನಕ್ಕೆ ಹಗ್ಗ ಹಾಕಿ ಮರಕ್ಕೆ ಕಟ್ಟಿದ್ದಾರೆ. ಈ ಸಂದರ್ಭದಲ್ಲಿ ನೀರಿನ ಮಟ್ಟ ಮತ್ತಷ್ಟು ಮೇಲೇರಿದ್ದು ಪಿಕಪ್ ಮಗುಚಿ ಬಿದ್ದಿದೆ. ಎರಡು ಮೂರು ಪಲ್ಟಿಯಾಗಿ ಹಗ್ಗದ ಸಹಾಯದಿಂದ ನಿಂತಿದೆ ಎನ್ನಲಾಗಿದೆ.

ಎಸ್.ಕೆ. ಎಸ್.ಎಸ್.ಎಫ್.ನ ವಿಖಾಯ ತಂಡದವರು ಹಗ್ಗ ಹಾಗೂ ರೋಪ್ ಬಳಸಿ ಉಕ್ಕಿ ಹರಿಯುತ್ತಿದ್ದ ನದಿಗೆ ಧುಮುಕಿ ಪಿಕಪ್ ನ್ನು ಸಾಹಸಪಟ್ಟು ಎಳೆದು ನದಿಯಿಂದ ಮೇಲೆತ್ತಿದ್ದಾರೆ. ಪಿಕಪ್ ಸಂಪೂರ್ಣ ನುಜ್ಜುಗಿಜ್ಜಾಗಿದೆ. ಸ್ಥಳೀಯ ವಿಖಾಯ ತಂಡದ ಸಿರಾಜ್ ಚಿಬಿದ್ರೆ, ರಫೀಕ್, ನಝೀರ್ ಬಿ.ಕೆ., ಇಕ್ಬಾಲ್ ಕೋನ, ಇಮ್ರಾನ್, ಆಸಿಫ್, ಅದ್ದು, ಉಸ್ಮಾನ್ ಹಾಗೂ ಇತರರು ಪಿಕಪ್ ನ್ನು ಮೇಲೆತ್ತಲು ಸಹಕರಿಸಿದ್ದಾರೆ ಎನ್ನಲಾಗಿದೆ.

ಸ್ಥಳೀಯವಾಗಿ ಮಳೆ ಇಲ್ಲದಿದ್ದರೂ ನೀರಿನ ಹರಿವು ಹೇಗೆ ಏಕಾ ಏಕಿ ಹೆಚ್ಚಾಯಿತು ಎಂಬ ಬಗ್ಗೆ ಸ್ಥಳೀಯರು‌ ಅಚ್ಚರಿ ವ್ಯಕ್ತಪಡಿಸಿದ್ದಾರೆ.

error: Content is protected !!