ಮತ್ತೆ ಲೆಕ್ಕ ಕೇಳಿದ ಮಾಜಿ ಶಾಸಕ ವಸಂತ ಬಂಗೇರ: ಶಾಸಕ ಹರೀಶ್ ಪೂಂಜ ಅಭಿವೃದ್ದಿಗಾಗಿ ಬಳಸಿದ ಅನುದಾನಗಳ ಸರ್ಕಾರಿ ದಾಖಲೆ ಜನರ ಮುಂದಿಡುವಂತೆ ಆಗ್ರಹ: ₹ 800 ಕೋಟಿ ಲೆಕ್ಕ‌ನೀಡಿದರೆ ಅಭಿನಂದಿಸುವೆ, ನೀಡದಿದ್ದರೆ ಶಾಸಕರು‌ ಜನರ ಕ್ಷಮೆ ಕೇಳಲಿ: ಪಡಿತರ ಅಕ್ಕಿ‌ ಅಕ್ರಮ ಮಾರಾಟ ಸತ್ಯಾಂಶ ಬಹಿರಂಗ ಪಡಿಸಲಿ: ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರ ಸವಾಲು

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಕಳೆದ ಮೂರು ವರ್ಷದಲ್ಲಿ ತಾನು ತಾಲೂಕಿಗೆ ರೂ.800 ಕೋಟಿ ಮಂಜೂರಾತಿ ಮಾಡಿ ಅಭಿವೃದ್ಧಿಗಾಗಿ ವಿನಿಯೋಗಿಸಲಾಗಿದೆ ಎಂದು ಪ್ರಚಾರ ಮಾಡಿದ್ದಾರೆ. ಶಾಸಕರು 800 ಕೋಟಿ ರೂ. ವೆಚ್ಚದ ಕಾಮಗಾರಿಗಳ ಅಧಿಕೃತ ಸರ್ಕಾರಿ ದಾಖಲೆಗಳನ್ನು ಬಿಡುಗಡೆಗೊಳಿಸಿದರೆ ನಾನೇ ಮಾಜಿ ಶಾಸಕನ ನೆಲೆಯಲ್ಲಿ ಸಾರ್ವಜನಿಕರ ಪರವಾಗಿ ಅವರನ್ನು ಅಭಿನಂದಿಸುತ್ತೇನೆ. ದಾಖಲೆ ಬಿಡುಗಡೆಗೊಳಿಸಲು ವಿಫಲವಾದರೆ ತಾಲೂಕಿನ ಜನರಲ್ಲಿ ಶಾಸಕರು ಕ್ಷಮೆ ಕೇಳಬೇಕು’ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.

ಅವರು ಬುಧವಾರ ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

2020ರ ಜನವರಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ 347 ಕೋಟಿ ರೂಪಾಯಿಗಳ ಕಾಮಗಾರಿಗಳ ಶಿಲಾನ್ಯಾಸ ನೆರವೇರಿಸಿದ್ದರು. ಅದರಲ್ಲಿ ಬಹುತೇಕ ನಾನು ಶಾಸಕನಾಗಿರುವ ವೇಳೆ ಮಂಜೂರು ಮಾಡಿ ಶಿಲಾನ್ಯಾಸ ನೆರವೇರಿಸಿದ ಕಾಮಗಾರಿಗಳಿಗೆ ಮತ್ತೆ ಶಿಲಾನ್ಯಾಸ ನಡೆದಿರುವುದು. ಇದಾಗಿ 1 ವರ್ಷ 5 ತಿಂಗಳಲ್ಲಿ ರಾಜ್ಯದ 224 ಕ್ಷೇತ್ರಗಳ ಪೈಕಿ ಬೆಳ್ತಂಗಡಿ ಕ್ಷೇತ್ರಕ್ಕೆ 453 ಕೋಟಿ ಅನುದಾನ ನೀಡಿರುವುದು ಆಶ್ಚರ್ಯವಾಗಿದೆ. ನೆರೆ, ಬರ, ಪ್ರವಾಹ, ಕೋವಿಡ್ ಸಮಸ್ಯೆ ಮಧ್ಯೆಯೂ ಈ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಅಷ್ಟೊಂದು ಅನುದಾನ ನೀಡಿರುವುದು ನಂಬಲಸಾಧ್ಯ. ಕೋವಿಡ್ ವ್ಯಾಕ್ಸಿನ್‍ಗಾಗಿ ರಾಜ್ಯ ಸರ್ಕಾರ ಪರದಾಡುತ್ತಿರುವಾಗ 1 ಕ್ಷೇತ್ರದ ಅಭಿವೃದ್ಧಿಗಾಗಿ ರೂ.453 ಕೋಟಿ ನೀಡಿರುವುದು ಸಂಶಯವಾಗುತ್ತಿದೆ. ಈ ಬಗ್ಗೆ ಶಾಸಕ ಪೂಂಜರವರು ದಾಖಲೆಗಳನ್ನು ಜನತೆಯ ಮುಂದಿಡಲಿ’ ಎಂದರು.

ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತಕ್ಕೊಳಪಟ್ಟ ನ್ಯಾಯ ಬೆಲೆ ಅಂಗಡಿಯ ನ್ಯಾಯತರ್ಪು ಗ್ರಾಮದ ಜಾರಿಗೆಬೈಲು ಶಾಖೆಯಲ್ಲಿ ಏ.29ರಂದು ಅನ್ನ ಭಾಗ್ಯದ ಸುಮಾರು 10 ಚೀಲ ಅಕ್ಕಿಯನ್ನು ಸಿಬ್ಬಂದಿ ಬಾಬು ಯಾನೆ ಶಿವರಾಮ ಶೆಟ್ಟಿ ಮಾರಾಟ ಮಾಡಿದ್ದು, ಈ ಬಗ್ಗೆ ಸ್ಥಳೀಯರು ಫೋಟೋ ಸಾಕ್ಷಿ ಸಮೇತ ಪೊಲೀಸ್ ಹಾಗೂ ಕಂದಾಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪಿಕಪ್ ಮತ್ತು ಚಾಲಕನನ್ನು ವಶಕ್ಕೆ ಪಡೆದು ವಿಚಾರಿಸಿ ಬಿಟ್ಟಿದ್ದಾರೆ. ಮೇ.21ರಂದು ಕಳಿಯ ಸಿ.ಎ ಅಧ್ಯಕ್ಷರು ಸೃಷ್ಟೀಕರಣ ನೀಡಿ ‘ಅಕ್ಕಿಯ 170 ಗೋಣಿ ಚೀಲಗಳನ್ನು ಮಾರಾಟ ಮಾಡಿದ್ದು ಎಂದಿದ್ದಾರೆ. ಅದೇ ಹೌದಾದರೆ 170 ಗೋಣಿ ಚೀಲವನ್ನಾದರೂ ಪೊಲೀಸರು ವಶಪಡಿಸಿಕೊಳ್ಳಬೇಕಿತ್ತು. ಅದೂ ನಡೆದಿಲ್ಲ ಎನ್ನುವಾಗ ಸತ್ಯಾಂಶವೇನು ಎಂದು ಜನತೆಯ ಮುಂದೆ ಬಹಿರಂಗಪಡಿಸಿ ಎಂದು ಒತ್ತಾಯಿಸಿದರು.

ಅಕ್ಕಿ ಮಾರಾಟ ಪ್ರಕರಣ ಆದ ಬಳಿಕ ಆಡಳಿತ ಮಂಡಳಿ ತುರ್ತು ಸಭೆ ನಡೆಸಿ ಸಿಬ್ಬಂದಿ ಶಿವರಾಮ ಶೆಟ್ಟಿಯನ್ನು ಪನಿಶ್‍ಮೆಂಟ್ ಮೇಲೆ ಕರ್ತವ್ಯಕ್ಕೆ ಕಳಿಯ ಶಾಖೆಗೆ ನಿಯೋಜಿಸಿದ್ದರು. ಆದರೆ ಶಾಸಕ ಹರೀಶ್ ಪೂಂಜರು ಶಿವರಾಮ ಶೆಟ್ಟಿ ಪರ ನಿಂತು ಮತ್ತೆ ನ್ಯಾಯತರ್ಪು ಶಾಖೆಗೆ ಅವರನ್ನು ಪುನಃ ನಿಯೋಜನೆ ಮಾಡಿರುತ್ತಾರೆ. ಈ ಎಲ್ಲ ಬೆಳವಣಿಗೆಗಳ ಹಿಂದಿನ ರಹಸ್ಯವೇನು ಎಂದು ಜನತೆಗೆ ತಿಳಿಸಬೇಕು ಎಂದು ಒತ್ತಾಯಿಸಿದರು.

ವಿವಾದಿತ ಕೃಷಿ ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ರೈತರು ಒತ್ತಾಯ ಮಾಡುತ್ತಲೇ ಬಂದಿದ್ದಾರೆ. ಆದರೆ 6 ತಿಂಗಳಾದರೂ ಸರ್ಕಾರ ರೈತರ ಹೋರಾಟಕ್ಕೆ ಬೆಲೆಯನ್ನೇ ನೀಡುತ್ತಿಲ್ಲ. ಪೊಟ್ರೋಲ್ ಡೀಸೆಲ್, ಗ್ಯಾಸ್, ಅಗತ್ಯ ವಸ್ತುಗಳ ಬೆಲೆ ಏರುತ್ತಲೇ ಇದೆ. ಕೊರೊನಾ ಸೋಂಕಿತರ ಮತ್ತು ಮರಣ ಹೊಂದುತ್ತಿರುವವರ ಸಂಖ್ಯೆಯನ್ನು ನಿಖರವಾಗಿ ಜನತೆಯ ಮುಂದಿಡುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಬಡವರ ಪ್ರಾಣಕ್ಕೆ ಬೆಲೆಯೇ ಇಲ್ಲದಂತಾಗಿದೆ ಎಂದರು.
ಧರ್ಮಸ್ಥಳದ ರವೀಂದ್ರನ್ ಆತ್ಮಹತ್ಯೆಗೆ ಪ್ರೇರೇಪಣೆ ನೀಡಿದ ಅಪರಾಧಿಗಳನ್ನು ಪತ್ತೆ ಹಚ್ಚಿ ಜೈಲಿಗೆ ಹಾಕಬೇಕು. ತಾಲ್ಲೂಕಿನಲ್ಲಿ ಲಂಚದ ಹಾವಳಿ ಮಿತಿ ಮೀರಿದೆ. ಲಂಚದ ಜೊತೆ ಆದೇಶಗಳು ಆಗುತ್ತಿದ್ದಾವೆ. ಮರಳು ದಂಧೆ ವ್ಯಾಪಕವಾಗಿದ್ದು ತಡೆಯಬೇಕಾದ ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ ಎಂದರು.

ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಶೈಲೇಶ್ ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಕೊರೊನಾ ವ್ಯಾಪಕವಾಗಿದೆ. ಎಲ್ಲರಿಗೂ ಲಸಿಕೆ ತಲುಪಿಸುವ ಕೆಲಸವನ್ನು ಶಾಸಕರು ಹಾಗೂ ಸಂಸದರು ಮಾಡಬೇಕು. ಕೊರೊನಾ ಸೋಂಕಿನಿಂದ ಮೃತ ಪಟ್ಟವರ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ ನೀಡಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ರಂಜನ್ ಜಿ.ಗೌಡ ಮಾತನಾಡಿ, ನಾನಾ ಕಾರಣಗಳಿಗಾಗಿ ಖಾಸಗಿ ಬ್ಯಾಂಕುಗಳಲ್ಲಿ ಜನರು ಮಾಡಿರುವ ಸಾಲಗಳ ಕಂತುಗಳನ್ನು ಸರ್ಕಾರ ಮುಂದೂಡಬೇಕು’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಂಗಾಡಿ ಸಿ.ಎ.ಬ್ಯಾಂಕ್ ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ ಹಾಗೂ ಶೇಖರ ಲಾಯಿಲ ಇದ್ದರು.

error: Content is protected !!