ಬೆಳ್ತಂಗಡಿ: ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ಕೋವಿಡ್ ಪಾಸಿಟಿವ್ ಬಂದ ಹಾಗೂ ಗುಣಮುಖರಾದ ಒಟ್ಟು 120 ಮನೆಗಳಿಗೆ ಶನಿವಾರ ಬೆಳ್ತಂಗಡಿ ನಗರ ಬಿಜೆಪಿ ಸಮಿತಿ ವತಿಯಿಂದ ಮನೆ ಮನೆಗೆ ತೆರಳಿ ಅಗತ್ಯ ದಿನಬಳಕೆ ಆಹಾರ ಕಿಟ್ ವಿತರಿಸಲಾಯಿತು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ನಗರ ಆಡಳಿತ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದು, ಕೋರೊನ ಸೋಂಕು ಹೆಚ್ಚಿರುವ ಪ್ರದೇಶಗಳಿಗೆ ವಿವಿಧ ಸಂಘ ಸಂಸ್ಥೆಗಳು ಆಹಾರ ಕಿಟ್ ನೀಡುತ್ತಿದೆ. ಶನಿವಾರ ನಗರ ಬಿಜೆಪಿ ಸಮಿತಿಯವರು ನಗರದ ಸೀಲ್‌ಡೌನ್ ಪ್ರದೇಶ ಸುದೇಮುಗೇರು ಸೇರಿದಂತೆ ನಗರ ವ್ಯಾಪ್ತಿಯಲ್ಲಿ ಪಾಸಿಟಿವ್ ಬಂದ ಹಾಗೂ ಗುಣಮುಖರಾದ ಸುಮಾರು 120 ಮನೆಗಳಿಗೆ 10 ಕೆ.ಜಿ. ಅಕ್ಕಿ, ಅಗತ್ಯ ಸಾಮಾಗ್ರಿಗಳ ಆಹಾರ ಕಿಟ್ ವಿತರಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷೆ ತುಳಸಿ ಕರುಣಾಕರ್, ಸದಸ್ಯರಾದ ಲೋಕೇಶ್, ಶರತ್ ಕುಮಾರ್ ಶೆಟ್ಟಿ, ಗೌರಿ, ಬಿಜೆಪಿ ಮಂಡಲ ಉಪಾಧ್ಯಕ್ಷ ಸೀತಾರಾಮ ಬೆಳಾಲು, ನಗರ ಅಧ್ಯಕ್ಷ ಗಣೇಶ್ ಸಂಜಯನಗರ, ಕಾರ್ಯದರ್ಶಿ ಕೇಶವ ಅಚ್ಚಿನಡ್ಕ, ಬೂತ್ ಸಮಿತಿ ಅಧ್ಯಕ್ಷರಾದ ಸಂಕೇತ್ ಶೆಟ್ಟಿ ಮತ್ತು ವಿಶ್ವನಾಥ್, ಗಣೇಶ್ ಗುಂಪಲಾಜೆ ಮೊದಲಾದವರು ಇದ್ದರು.