ಅಮ್ಮನ ನೆನಪು ಮೊಬೈಲ್ ನಲ್ಲಿದೆ ದಯವಿಟ್ಟು ಹುಡುಕಿಕೊಡಿ: ಕೊರೊನಾದಿಂದ ಮೃತ ಪಟ್ಟ ತಾಯಿಯ ಮೊಬೈಲ್ ಹುಡುಕಿಕೊಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದ ಪುತ್ರಿ

ಮಡಿಕೇರಿ : ಕೊರೊನಾದಿಂದ ಸಾವನ್ನಪ್ಪಿದ ಮಹಿಳೆಯೊಬ್ಬರ ಮಗಳು ತನ್ನ ತಾಯಿಯ ಮೊಬೈಲ್ ಹುಡುಕಿಕೊಡಿ ಎಂದು ಜಿಲ್ಲಾಧಿಕಾರಿ, ಪೊಲೀಸರು ಹಾಗೂ ಶಾಸಕರಿಗೆ ಪತ್ರ ಬರೆದಿದ್ದಾಳೆ. ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗುಮ್ಮನ‌ಕೊಲ್ಲಿ ಗ್ರಾಮದ ನವೀನ್ ಕುಮಾರ್ ಎಂಬವರ ಪುತ್ರಿ ಹೃತಿಕ್ಷಾ ಪತ್ರ ಬರೆದು ಮನವಿ ಮಾಡಿದ್ದಾಳೆ.

ನನ್ನ ಅಮ್ಮನ ನೆನಪು ಆ ಮೊಬೈಲ್​ನಲ್ಲಿದೆ. ಆದರೆ ಆಸ್ಪತ್ರೆಯಲ್ಲಿ ಕಳೆದುಹೋಗಿದೆ ಅದನ್ನು ಹುಡುಕಿ ಕೊಡಿ ಎಂದಿದ್ದಾಳೆ.ವಿಡಿಯೋ ಮೂಲಕ ಮೊಬೈಲ್ ಹುಡುಕಿಕೊಡುವಂತೆ ಮನವಿ ಮಾಡಿಕೊಂಡಿದ್ದಾಳೆ.

ಮನವಿಪತ್ರದಲ್ಲಿ ಏನಿದೆ..?

15 ದಿನಗಳ ಹಿಂದೆ ನಮ್ಮ ಅಮ್ಮ-ಅಪ್ಪ ನಾನು ಕೊರೊನಾ ಸೋಂಕಿಗೆ ತುತ್ತಾಗಿದ್ದು, ಅಮ್ಮನಿಗೆ ರೋಗ ಹೆಚ್ಚಾಗಿದ್ದ ಕಾರಣ ಮಡಿಕೇರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾನು ಮತ್ತು ಅಪ್ಪ ಮನೆಯಲ್ಲಿ ಕ್ವಾರಂಟೈನ್ ಆಗಿದ್ದೆವು. ಅಪ್ಪ ದಿನಗೂಲಿ ನೌಕರಾಗಿದ್ದು ಅಕ್ಕ ಪಕ್ಕದವರ ಸಹಾಯದಿಂದ ಜೀವನ ಮಾಡಿದೆವು. ಮೇ16ರಂದು ಅಮ್ಮ ಮೃತರಾದರು. ಅವರ ಜೊತೆಯಲ್ಲಿ ಇದ್ದ ಮೊಬೈಲ್ ಯಾರೋ ತೆಗೆದುಕೊಂಡಿದ್ದಾರೆ. ನಾನು ತಬ್ಬಲಿಯಾಗಿದ್ದು ನನ್ನ ತಾಯಿಯ ನೆನಪುಗಳು ಅ ಮೊಬೈಲ್​ನಲ್ಲಿದೆ, ಆದ್ದರಿಂದ ಯಾರಾದ್ರು ತೆಗೆದುಕೊಂಡಿದ್ರೆ ಅಥವಾ ಸಿಕ್ಕಿದ್ರೆ ಈ ತಬ್ಬಲಿಗೆ ಹಿಂದಿರುಗಿಸಿ ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾಳೆ.

ಜಿಲ್ಲಾಧಿಕಾರಿಗೆ ಬರೆದ ಈ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಪತ್ರಕ್ಕೆ ಜಿಲ್ಲಾಡಳಿತ ಪ್ರತಿಕ್ರಿಯಿಸಿ ಆದಷ್ಟು ಬೇಗ ಆಕೆಯ ಮಹಿಳೆಯ ಮೊಬೈಲ್ ಹುಡುಕಿಕೊಡುವ ಭರವಸೆ ನೀಡಿದ್ದಾರೆ.

error: Content is protected !!