ಇವತ್ತು ರಾತ್ರಿಯಿಂದ ಕೊರೊನಾ ಕರ್ಪ್ಯೂ: ಸರ್ಕಾರದಿಂದ ಕಠಿಣ ನಿಯಮ ಜಾರಿ: ಬೆಳ್ತಂಗಡಿಯಲ್ಲೂ ಅನಾವಶ್ಯಕ ತಿರುಗಾಡಿದರೆ ಬೀಳಲಿದೆ ಲಾಠಿಯ ಪೆಟ್ಟು

ಬೆಂಗಳೂರು: ಕೊರೊನಾ ಅಬ್ಬರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇವತ್ತು ರಾತ್ರಿ 9 ಗಂಟೆಯಿಂದ 14 ದಿನಗಳ ಕಾಲ ರಾಜ್ಯದಲ್ಲಿ ಕೊರೊನಾ ಕರ್ಫ್ಯೂ ಜಾರಿಯಾಗುತ್ತಿದ್ದು, ಬೆಳ್ತಂಗಡಿಯಲ್ಲೂ ಕೊರೊನಾ ಕರ್ಪ್ಯೂ ಕಠಿಣವಾಗಿರಲಿದೆ. ಈಗಾಗಲೇ ಪೊಲೀಸ್ ಇಲಾಖೆ ಸಜ್ಜಾಗಿದ್ದು ಅನಾವಶ್ಯಕವಾಗಿ ತಿರುಗಾಡುವವರಿಗೆ ಬೀಳಲಿದೆ ಲಾಠಿಯ ಪೆಟ್ಟು.ಈ ಬಗ್ಗೆ ಸಾರ್ವಜನಿಕರು ಗಮನಿಸಬೇಕು. ಅಗತ್ಯ ಸೇವೆ, ತುರ್ತು ಸೇವೆ ಹೊರತುಪಡಿಸಿ ಇತರೆಲ್ಲಾ ಸೇವೆ ಬಹುತೇಕ ಬಂದ್ ಆಗಲಿದೆ. ಕಳೆದ ಬಾರಿಯ ಲಾಕ್​​ಡೌನ್​​ನಂತೆ ಜನರು ಮನೆಯಲ್ಲೇ ವನವಾಸ ಅನುಭವಿಸಬೇಕಿದೆ.

ಕೊರೊನಾ 2ನೇ ಅಲೆ ತಡೆಯಲು ರಾಜ್ಯ ಸರ್ಕಾರ ಲಾಕ್​ಡೌನ್ ಮಾದರಿಯ ಕಠಿಣ ಕ್ರಮದ ಮೊರೆ ಹೋಗಿದೆ. ನೈಟ್​​​ಕರ್ಫ್ಯೂ ನಂತರ ವೀಕೆಂಡ್ ಕರ್ಫ್ಯೂ ಮೂಲಕ ಜನರಿಗೆ ಪರೋಕ್ಷ ಸಂದೇಶ ನೀಡಿದ್ದ ಸರ್ಕಾರ ಅಂತಿಮವಾಗಿ ವೀಕೆಂಡ್ ಕರ್ಫ್ಯೂವನ್ನು ವಾರವಿಡೀ ವಿಸ್ತರಿಸಿ ಮುಂದಿನ 14 ದಿನಕ್ಕೆ ಅನ್ವಯವಾಗುವಂತೆ ಇಂದು ರಾತ್ರಿ 9 ಗಂಟೆಯಿಂದ 24/7 ಕರ್ಫ್ಯೂ ಜಾರಿಗೊಳಿಸುತ್ತಿದೆ. ಕಠಿಣ ಕರ್ಫ್ಯೂ ಸಮಯದಲ್ಲಿ ಅಗತ್ಯ ಸೇವೆ, ತುರ್ತು ಸೇವೆಗೆ ಅನುಮತಿ ನೀಡಲಾಗಿದೆ. ತುರ್ತು ಸೇವೆಗೆ ಯಾವುದೇ ಸಮಯದ ಮಿತಿ ನಿಗದಿಪಡಿಸಿಲ್ಲ ಆದರೆ ಅಗತ್ಯ ಸೇವೆಗೆ ಮಾತ್ರ ಸಮಯ ನಿಗದಿಪಡಿಸಲಾಗಿದೆ. ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೂ ಹಾಲು, ತರಕಾರಿ, ದಿನಸಿ ಖರೀದಿಗೆ ಮಾಡಬಹುದಾಗಿದೆ. ಮೀನು, ಮಾಂಸದ ಅಂಗಡಿಗಳಿಗೂ ಇದೇ ನಿಯಮ ಅನ್ವಯಿಸುತ್ತದೆ. ಇವುಗಳನ್ನು ಹೊರತುಪಡಿಸಿದರೆ ಇತರ ಯಾವ ವಾಣಿಜ್ಯ ಮಳಿಗೆಗಳನ್ನು ತೆರೆಯಲು ನಿರ್ಬಂಧವಿರಲಿದೆ‌. ಇನ್ನು ಸಾಕಷ್ಟು ಜನರು ಹೋಟೇಲ್​ಗಳನ್ನೇ ಅವಲಂಭಿಸಿದ್ದಾರೆ. ಅವರಿಗೆ ಕಠಿಣ ಕರ್ಫ್ಯೂ ಸಮಯದಲ್ಲಿ ಊಟ, ತಿಂಡಿ ಸಮಸ್ಯೆ ಎದುರಾಗಬಾರದು ಎನ್ನುವ ಕಾರಣಕ್ಕೆ ಪಾರ್ಸೆಲ್ ಸೇವೆಗೆ ಅನುಮತಿಸಲಾಗಿದೆ. ಅದೇ ರೀತಿ ಆನ್​​ಲೈನ್ ಮೂಲಕ ಆಹಾರ ಸರಬರಾಜು ಮಾಡುವ ಫುಡ್ ಡೆಲಿವರಿ ಅಗ್ರಿಗೇಟರ್ಸ್​​ಗೆ ಅನುಮತಿಸಲಾಗಿದೆ. ಹೋಟೆಲ್​​ಗಳಿಗೆ ಹೋಗಲು ಸಾಧ್ಯವಾಗದವರು ಆನ್​​ಲೈನ್ ಮೂಲಕ ತರಿಸಿಕೊಳ್ಳಬಹುದಾಗಿದೆ‌.

ಸಾರ್ವಜನಿಕ ಸಾರಿಗೆ ಬಂದ್: 

ಇನ್ನು ರಾಜ್ಯಾದ್ಯಂತ ಸಾರಿಗೆ ಸೇವೆ ಬಂದ್ ಆಗಲಿದೆ. ರಾಜ್ಯ ಸಾರಿಗೆ ಸಂಸ್ಥೆ ಬಸ್, ಖಾಸಗಿ ಬಸ್​ಗಳು, ಮೆಟ್ರೋ ಸೇವೆ ಸ್ಥಗಿತವಾಗಲಿದೆ. ವಿಮಾನ ಮತ್ತು ರೈಲು ಸೇವೆ ಮಾತ್ರ ಲಭ್ಯವಿದ್ದು, ಪ್ರಯಾಣಕ್ಕೆ ಕಾಯ್ದಿರಿಸಿದ ಟಿಕೆಟ್​​ ತೋರಿಸಿ ಟ್ಯಾಕ್ಸಿ ಮತ್ತು ಆಟೋ ಸೇವೆ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ ಅದನ್ನು ಹೊರತುಪಡಿಸಿ ಇತರ ಸಂಚಾರಕ್ಕೆ ನಿರ್ಬಂಧವಿರಲಿದೆ.

ಮದ್ಯ ಪ್ರಿಯರಿಗೆ ನಿರಾಸೆ ಇಲ್ಲ

ಕಳೆದ ಬಾರಿ ಲಾಕ್ ಡೌನ್ ಮಾಡಿದ ಸಂದರ್ಭದಲ್ಲಿ ಮದ್ಯದ ಅಂಗಡಿಗಳಿಗೆ ಅವಕಾಶ ನೀಡಿರಲಿಲ್ಲ, ಇದರಿಂದಾಗಿ ಮದ್ಯ ಪ್ರಿಯರು ಪರದಾಡುವಂತಾಗಿತ್ತು,ಆದರೆ ಈ ಬಾರಿ ಅಂತಹ ಸನ್ನಿವೇಶ ಎದುರಾಗದಿರುವಂತೆ ಕಠಿಣ ಕರ್ಫ್ಯೂ‌ ದಿನಗಳಲ್ಲಿಯೂ ಪ್ರತೀ ದಿನ ಬೆಳಗ್ಗೆ 6 ರಿಂದ 10 ರವರೆಗೆ ಖರೀದಿಗೆ ಅವಕಾಶ ಇದೆ.

 

ಗಾರ್ಮೆಂಟ್ಸ್ ಕ್ಲೋಸ್, ನಿರ್ಮಾಣ ವಲಯಕ್ಕಿಲ್ಲ ಬ್ರೇಕ್

ರಾಜ್ಯದ ಎಲ್ಲಾ ಗಾರ್ಮೆಂಟ್ಸ್​​​ಗಳಿಗೂ ನಿರ್ಬಂಧ ವಿಧಿಸಿದ್ದು, ಕೇವಲ ನಿರ್ಮಾಣ ಚಟುವಟಿಕೆ ಹಾಗೂ ಕೈಗಾರಿಕಾ ವಲಯಕ್ಕೆ ಅವಕಾಶ ಕಲ್ಪಿಸಿದೆ, ಅನುಮತಿಸಿದ ಸೇವಾ ವಲಯದ ವ್ಯಾಪ್ತಿಗೆ ಬರುವ ಕಟ್ಟಡ ಕಾರ್ಮಿಕರು ಮತ್ತು ಕೈಗಾರಿಕೆಗಳ ಸಿಬ್ಬಂದಿ ಓಡಾಟಕ್ಕೆ ಅವಕಾಶವಿದೆ. ಸಂಸ್ಥೆಯ ಗುರುತಿನ ಚೀಟಿ ಬಳಸಿ ಸಂಚರಿಸಬಹುದಾಗಿದೆ.

ಕೃಷಿ ಚಟುವಟಿಕೆ ಮುಕ್ತ

ರಾಜ್ಯಾದ್ಯಂತ ಕೃಷಿ ಚಟುವಟಿಕೆಗೆ ಯಾವುದೇ ನಿರ್ಬಂಧ ವಿಧಿಸಿಲ್ಲ, ಕೃಷಿ ಸಂಬಂಧಿತ ಎಲ್ಲ ಚಟುವಟಿಕೆಗೂ ಅವಕಾಶ ಕಲ್ಪಿಸಲಾಗಿದೆ. ಕೃಷಿ ಕ್ಷೇತ್ರದ ಕೆಲಸ ಕಾರ್ಯಗಳು,ಕೃಷಿ ಉತ್ಪನ್ನಗಳ ಸಾಗಾಣಿಕೆ, ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಕಳೆದ ಬಾರಿಯಂತೆ ಕೃಷಿಕರಿಗೆ ಗ್ರೀನ್ ಪಾಸ್ ಕೊಡುವ ಚಿಂತನೆ ಕೂಡ ಕೃಷಿ ಇಲಾಖೆ ಮಾಡಿದೆ. ಈಗಾಗಲೇ 14 ದಿನದ ಕಠಿಣ ಕರ್ಫ್ಯೂಗೆ ಸರ್ಕಾರ ಎಲ್ಲ ಸಿದ್ದತೆ ಮಾಡಿಕೊಂಡಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಗೃಹ ಇಲಾಖೆಯಿಂದ ಮಾಡಿಕೊಂಡಿರುವ ಸಿದ್ದತೆ ವಿವರಿಸಿದ್ದಾರೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಕಠಿಣ ಕರ್ಫ್ಯೂ ಜಾರಿಯಲ್ಲಿ ಲೋಪವಾಗದಂತೆ ನೋಡಿಕೊಳ್ಳಲು ತಾಕೀತು ಮಾಡಿದ್ದಾರೆ.ಇಂದು ರಾತ್ರಿಯಿಂದಲೇ ಬೆಂಗಳೂರಿನ ಎಲ್ಲ ಫ್ಲೈ ಓವರ್ ಗಳನ್ನು ಬಂದ್ ಮಾಡಲಾಗುತ್ತದೆ, ಎಲ್ಲ ಕಡೆ ಬ್ಯಾರಿಕೇಡ್ ನಿರ್ಮಿಸಿ ತಪಾಸಣೆ ನಡೆಸಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ, ನಗರದ ಪ್ರಮುಖ ರಸ್ತೆಗಳನ್ನು ಒನ್ ವೇ ಮಾಡಲಾಗುತ್ತದೆ. ಅನಗತ್ಯವಾಗಿ ರಸ್ತೆಗಿಳಿದರೆ ಲಾಠಿ ರುಚಿ ತೋರಿಸಲೂ ಪೊಲೀಸರು ಸಿದ್ದತೆ ನಡೆಸಿದ್ದಾರೆ.ಹದ್ದಿನ ಕಣ್ಣಿಡಲು ಪೊಲೀಸ್​ ಇಲಾಖೆ ಸರ್ವ ಸನ್ನದ್ಧಕಳೆದ ಬಾರಿ ಕೊರೊನಾ ಸಂದರ್ಭದಲ್ಲೇ ಡಿಜೆ ಹಳ್ಳಿ ಕೆಜಿ ಹಳ್ಳಿ ಘಟನೆ ನಡೆದಿದ್ದರಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಡಲು ಪೊಲೀಸ್ ಇಲಾಖೆಗೆ ಗೃಹ ಸಚಿವರು ಸೂಚನೆ ನೀಡಿದ್ದಾರೆ. ಪೊಲೀಸ್ ಇಲಾಖೆ ಜೊತೆ ಗೃಹ ರಕ್ಷಕ ದಳದ ಸಿಬ್ಬಂದಿ, ಮೀಸಲು ಪೊಲೀಸ್ ಪಡೆಯನ್ನೂ ನಗರದಾದ್ಯಂತ ನಿಯೋಜನೆ ಮಾಡಿ ಭದ್ರತಾ ವ್ಯವಸ್ಥೆ ಬಲಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ.ಇನ್ನು ಎಲ್ಲಾ ಜಿಲ್ಲೆಗಳಿಗೂ ಡಿಜಿ ಪ್ರವೀಣ್ ಸೂದ್ ಮೂಲಕ ಸೂಚನೆ ನೀಡಿದ್ದು, ಆಯಾ ಜಿಲ್ಲೆಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸೂಕ್ತ ವ್ಯವಸ್ಥೆ ಮಾಡಬೇಕು, ಜನರ ಸಂಚಾರಕ್ಕೆ ನಿರ್ಬಂಧ ವಿಧಿಸಿ, ಅಗತ್ಯ ಸೇವೆ, ತುರ್ತು ಸೇವೆಗೆ ಮಾತ್ರ ಅವಕಾಶ ಕಲ್ಪಿಸಬೇಕು, ಅನುಮತಿಸಿದ ಸೇವೆಗೆ ಅವಕಾಶ ಕಲ್ಪಿಸಿ ಕಠಿಣ ಲಾಕ್ ಡೌನ್ ಜಾರಿಗೊಳಿಸುವಂತೆ ಸೂಚಿಸಲಾಗಿದೆ.ರಾಜ್ಯ ಸರ್ಕಾರದ ಸೂಚನೆಯಂತೆ ಪೊಲೀಸ್ ಇಲಾಖೆ ಇಂದು ರಾತ್ರಿ 9 ಗಂಟೆಯಿಂದ ಕೊರೊನಾ ಕರ್ಫ್ಯೂ ಜಾರಿಗೆ ಸಕಲ ಸಿದ್ದತೆ ಮಾಡಿಕೊಂಡಿದೆ. ವಾಕಿಂಗ್, ಜಾಗಿಂಗ್ ಎಲ್ಲ ಬಂದ್ ಆಗಲಿದೆ, ತುರ್ತು ಸೇವೆ, ಅಗತ್ಯ ವಸ್ತು ಖರೀದಿಗೆ ಹೊರತುಪಡಿಸಿ ಇತರ ಕಾರಣಕ್ಕೆ ಯಾರೂ ಮನೆಯಿಂದ ಹೊರಬರುವಂತಿಲ್ಲ.ಅಕ್ಷರಶಃ 14 ದಿನ ಜನ ಗೃಹವಾಸ ಅನುಭವಿಸಬೇಕಿದೆ‌.

ನಾಳೆಯಿಂದ 14 ದಿನ ಯಾವುದಕ್ಕೆಲ್ಲ ಅವಕಾಶ:

ಆಸ್ಪತ್ರೆ, ಕ್ಲಿನಿಕ್, ಲ್ಯಾಬ್,ರಕ್ತನಿಧಿ, ಔಷಧ ಅಂಗಡಿ

ಕಟ್ಟಡ ಕಾಮಗಾರಿಗಳು, ಕೈಗಾರಿಕೆಗಳು

ನಿರ್ಮಾಣ ಕಾಮಗಾರಿ,‌ದುರಸ್ತಿ ಕಾಮಗಾರಿಗಳು

ಕೃಷಿ ಸಂಬಂಧಿತ ಚಟುವಟಿಕೆಗಳು, ಸರಕು ಸಾಗಾಣೆ

ಬ್ಯಾಂಕ್, ವಿಮೆ,‌ಎಟಿಎಂ

ಸರ್ಕಾರಿ ಕಚೇರಿಗಳು (ಶೇ.50ರಷ್ಟು ಸಿಬ್ಬಂದಿ ಮಿತಿ)

ಹೋಂ ಡೆಲಿವರಿ, ಇ-ಕಾರ್ಮಸ್,

ಹೋಟೆಲ್‌ಗಳಲ್ಲಿ ಪಾರ್ಸಲ್ ಸೇವೆ

ವಿಮಾನ ಹಾಗೂ ರೈಲು ಸೇವೆ ಟಿಕೆಟ್ ತೋರಿಸಿ ಆಟೋ, ಟ್ಯಾಕ್ಸಿ ಬಳಕೆಗ ಅವಕಾಶ

ನಿಗದಿಯಾಗಿರುವ ಪರೀಕ್ಷೆ ಮತ್ತು ಆನ್ ಲೈನ್ ತರಗತಿ

ರೋಗಿಗಳು, ಅವರ ಸಹಾಯಕರ ಸಂಚಾರಕ್ಕೆ ಅವಕಾಶ

ಕೊರೊನಾ ಲಸಿಕೆ ಹಾಕಿಸಿ ಕೊಳ್ಳುವವರಿಗೆ ಅವಕಾಶ

 

ಈ ಕೆಳಗಿನ ಸೇವೆ ಇರೊದಿಲ್ಲ 

ಸಾರಿಗೆ ಬಸ್, ಖಾಸಗಿ ಬಸ್, ಮೆಟ್ರೋ ಸೇವೆ

ತುರ್ತು ಸೇವೆ ಹೊರತುಪಡಿಸಿ ಆಟೋ, ಕ್ಯಾಬ್ ಸೇವೆ

ಶಾಲಾ – ಕಾಲೇಜು, ತರಬೇತಿ ಕೇಂದ್ರ

ಸಿನಿಮಾ ಮಂದಿರ,‌ ಜಿಮ್, ಈಜುಕೊಳ,ಆಟದ

ಮೈದಾನ,ಕ್ಲಬ್, ರಂಗಮಂದಿರ,ಸಭಾಂಗಣಗಳು

ದೇವಸ್ಥಾನ, ಚರ್ಚ್, ಮಸೀದಿಗಳು

ಬಟ್ಟೆ ಅಂಗಡಿ, ಜ್ಯುವೆಲ್ಲರಿ ಅಂಗಡಿ, ಗೃಹೊಪಯೋಗಿ ವಸ್ತುಗಳ ಅಂಗಡಿಗಳು

ಸಾಮಾಜಿಕ, ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳು

ಈ ಕೆಳಗಿನ ಅಗತ್ಯ ವಸ್ತುಗಳ ಸೇವೆಗಳು ಬೆಳಿಗ್ಗೆ 6 ರಿಂದ 10 ರವರೆಗೆ

ಹಾಲಿನ ಬೂತ್, ದಿನಸಿ ಅಂಗಡಿ, ಹಣ್ಣು, ತರಕಾರಿ ಅಂಗಡಿ

ಪ್ರಾಣಿಗಳ ಆಹಾರದ ಅಂಗಡಿ

ಮದ್ಯ ಮಾರಾಟದ ಅಂಗಡಿ

ಮೀನು ಮತ್ತು ಮಾಂಸದ ಅಂಗಡಿ

ಮದುವೆ ಸಮಾರಂಭಕ್ಕೆ 50 ಜನರ ಮಿತಿ

ಅಂತ್ಯಸಂಸ್ಕಾರಕ್ಕೆ ಕೇವಲ 5 ಜನರಿಗೆ ಅವಕಾಶ ಇದೆ

error: Content is protected !!