ಬೆಳ್ತಂಗಡಿ: ಕೋವಿಡ್ ಸೋಂಕು ದೇಶವ್ಯಾಪಿಯಾಗಿ ಹರಡುತ್ತಿದ್ದು, ಸರಕಾರ ಅನೇಕ ನಿಯಮಾವಳಿಯನ್ನು ರೂಪಿಸಿ ಕೊರೋನಾ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಅನೇಕ ಹೆಜ್ಜೆಯನ್ನಿಟ್ಟಿದೆ. ಆ ನಿಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನಲ್ಲೂ ಮುಂಜಾಗ್ರತಾ ಕ್ರಮವಾಗಿ ಉಜಿರೆಯಲ್ಲಿ ಕೋವಿಡ್ ಕೇರ್ ಸೆಂಟರ್, ಜನರ ಸ್ಪಂದನೆಗಾಗಿ ಕಾಲ್ ಸೆಂಟರ್, 60 ಲಕ್ಷ ರೂ. ವೆಚ್ಚದ ಲಿಕ್ವಿಡ್ ಆಕ್ಸಿಜನ್‌ನ ಒಂದು ಸೆಂಟರ್ ಹಾಗೂ ಹೊರ ಗುತ್ತಿಗೆಯಲ್ಲಿ ವೈದ್ಯರ, ದಾದಿಯರ ನೇಮಕಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ತಿಳಿಸಿದರು.
ಅವರು ಸೋಮವಾರ ಸಂಜೆ ಇಲ್ಲಿನ ಪ್ರವಾಸಿ ಬಂಗ್ಲೆಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಎಪ್ರಿಲ್ 27ರ ಮಂಗಳವಾರ ಸಂಜೆಯೊಳಗೆ ಎಂದರೆ ಮಂಗಳವಾರ ಕೋವಿಡ್-19ಗೆ ಸಂಬಂಧಪಟ್ಟಂತೆ ಕಾಲ್ ಸೆಂಟರ್ ತೆರಲಾಗುವುದು. ತುರ್ತು ಸ್ಪಂದನೆಯ ದೂರವಾಣಿ ಸಂಖ್ಯೆಯನ್ನು ನೀಡಲಾಗುವುದು. ಯಾವುದೇ ಅನಿವಾರ್ಯ ಸಂದರ್ಭದಲ್ಲಿ ದೂರವಾಣಿ ಕರೆ ಮಾಡಬಹುದು. ದೂರವಾಣಿ ಸಂಖ್ಯೆಯನ್ನು ಮಾಧ್ಯಮದಲ್ಲಿ, ಸಾಮಾಜಿಕ ಜಾಲತಾಣ ತಿಳಿಸಲಾಗುವುದು. ಕೋವಿಡ್ ಸೋಂಕು ದೇಶವ್ಯಾಪಿಯಾಗಿ ಹರಡುತ್ತಿದ್ದು, ಸರಕಾರ ಅನೇಕ ನಿಯಮಾವಳಿಯನ್ನು ರೂಪಿಸಿ ಕೊರೋನಾ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಅನೇಕ ಹೆಜ್ಜೆಯನ್ನಿಟ್ಟಿದೆ. ಜಾಗೃತ ಸಮಾಜವನ್ನು ಸುರಕ್ಷಿತವಾಗಿ ರಕ್ಷಿಸುವ ದೃಷ್ಟಿಯಲ್ಲಿ ಬೆಳ್ತಂಗಡಿಯಲ್ಲೂ ಅನುಷ್ಠಾನ ಮಾಡಲು ನಿರ್ಧರಿಸಿ, ತಹಸೀಲ್ದಾರ್, ಇಒ, ಟಿಎಚ್‌ಒ, ತಾಲೂಕಿನ ಎಲ್ಲಾ ಪಿಡಿಒ, ವಿ.ಎ. ಗಳನ್ನು ಕರೆದು ಈಗಾಗಲೇ ಒಂದು ಸುತ್ತಿನ ಚರ್ಚೆ ನಡೆಸಲಾಗಿದೆ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮತ್ತೊಮ್ಮೆ ಎರಡನೇ ಕೊರೋನಾ ಅಲೆಯ ಸಂದರ್ಭದಲ್ಲೂ ಕೊವೀಡ್ ಕೇರ್ ಸೆಂಟರ್‌ಗಾಗಿ ಉಜಿರೆ ಲಾಯಿಲದಲ್ಲಿರುವ ಟಿ.ಬಿ. ಆಸ್ಪತ್ರೆಯನ್ನು ತಾಲೂಕಿನ ಜನತೆಗಾಗಿ ಒದಗಿಸಿಕೊಟ್ಟಿದ್ದಾರೆ. 207 ಕೋವಿಡ್ ಪ್ರಕರಣಗಳು ಚಾಲ್ತಿಯಲ್ಲಿದೆ. 171 ಪ್ರಕರಣದ ಕೋವಿಡ್ ಸೋಂಕಿತರು ಅವರವರ ಮನೆಯಲ್ಲಿ ಹೋಂ ಐಸೋಲೇಶನ್‌ನಲ್ಲಿದ್ದು ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ ದಿನದಲ್ಲಿ ಕೊರೋನಾ ಸೋಂಕಿನ ಗಂಭೀರತೆ ಹೆಚ್ಚಾದಾಗ ಅವಶ್ಯತೆಗಾಗಿ 200 ಬೆಡ್‌ಗಳ ಲಾಯಿಲದಲ್ಲಿರುವ ಟಿ.ಬಿ. ಆಸ್ಪತ್ರೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ಎಲ್ಲಾ ವಿಧದಲ್ಲೂ ಸುಸಜ್ಜಿತವಾಗಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.
ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹಬ್ಬುತ್ತಿದ್ದು ಅದಕ್ಕೆ ಸಂಬಂಧಪಟ್ಟಂತೆ ಪುನಃ ನಮ್ಮ ಸರಕಾರದಿಂದ ತಾಲೂಕಿನಲ್ಲಿರುವ ವೈದ್ಯರ ವರದಿ ಕೇಳಿದ್ದಾರೆ. ಜಿಲ್ಲಾಧಿಕಾರಿಯವರು ಸಭೆ ನಡೆಸಿದ್ದು, ಎಸ್‌ಡಿಆರ್‌ಎಫ್ ಮೂಲಕ ಒಂದಿಷ್ಟು ವೈದ್ಯಕೀಯ ಸಲಕರಣೆಯನ್ನು ಪಡೆದುಕೊಳ್ಳಲಿಕ್ಕೆ ಅನುಮತಿ ಕೊಟ್ಟಿದೆ. ನಾನು ಈಗಾಗಲೇ ತಾಲೂಕು ವೈದ್ಯಾಧಿಕಾರಿ ಹಾಗೂ ವೈದ್ಯರ ಜತೆ ಚರ್ಚೆ ನಡೆಸಿದ್ದು, ಪಟ್ಟಿ ಮಾಡಿ ಕಳುಹಿಸಿಕೊಡಲಾಗುವುದು. ಇದರ ಜತೆಗೆ ಲಿಕ್ವಿಡ್ ಆಕ್ಸಿಜನ್ ಸೆಂಟರ್ ಒಂದನ್ನು ಮಾಡಬೇಕೆನ್ನುವ ಕೋರಿಕೆ ಕೊಟ್ಟಿದ್ದೇನೆ. ಸುಮಾರು 60 ಲಕ್ಷ ರೂ. ವೆಚ್ಚದ ಲಿಕ್ವಿಡ್ ಆಕ್ಸಿಜನ್ ಸೆಂಟರ್‌ಗೆ ಎಸ್‌ಡಿಆರ್‌ಎಫ್ ಮೂಲಕ ನೀಡಲು ಜಿಲ್ಲಾಧಿಕಾರಿಯವರು ಅನುಮತಿ ನೀಡಿದ್ದಾರೆ. ಅವರ ಪ್ರಸ್ತಾವನೆಯನ್ನು ಕಳುಹಿಸುತ್ತೇನೆ. ತಾತ್ಕಾಲಿಕವಾಗಿ 5 ಮಂದಿ ವೈದ್ಯರ ನೇಮಕಕ್ಕೆ ಈಗಾಗಲೇ ನಮ್ಮ ಟಿಎಚ್‌ಓ ಬರೆದಿದ್ದಾರೆ. ವೈದ್ಯರನ್ನು ಹಾಗೂ ದಾದಿಯರನ್ನು ಹೊರ ಗುತ್ತಿಗೆಯಲ್ಲಿ ತೆಗೆದುಕೊಳ್ಳಲಿಕ್ಕೆ ಜಿಲ್ಲಾಡಳಿತ ಅನುಮತಿಯನ್ನು ನೀಡಿದೆ. ನೇರವಾಗಿ ನಿಯೋಜನೆಗೊಳಿಸಲು ಅವಕಾಶವಿದ್ದು, ಪ್ರಯತ್ನ ಮಾಡುತ್ತಿದ್ದೇವೆ. ಯಾರಿಗೆ ಸೇವೆ ಮಾಡಲು ಆಸಕ್ತಿ ಇದೆಯೋ ಅವರನ್ನು ನಿಯೋಜನೆಗೊಳಿಸಲಾಗುವುದು ಎಂದರು.
ತಾಲೂಕಿನಲ್ಲಿ ಕೊರೋನಾ ನಿಯಂತ್ರಣ ಮಾಡುವ ದೃಷ್ಟಿಯಲ್ಲಿ ಮುಂಜಾಗ್ರತೆಯಾಗಿ ಜನರಿಗೆ ಅನುಕೂಲವಾಗುವಂತೆ ಒಂದಿಷ್ಟು ಆಲೋಚನೆಯನ್ನು ಮಾಡಿದ್ದೇವೆ. ಕಳೆದ ಬಾರಿ ವಿದೇಶದಿಂದ, ಹೊರ ರಾಜ್ಯದಿಂದ ಆಯಾಯ ಪ್ರದೇಶದ ಶಾಲೆಯಲ್ಲಿ ಕ್ವಾರೆಂಟೈನ್ ಮಾಡಲಾಗಿತ್ತು. ಪ್ರಸ್ತುತ ವರ್ಷ ಕೂಡಾ ವಿದೇಶದಿಂದ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಬರುವವರು ಇದ್ದಾರೆ. ಸುರಕ್ಷತೆ ದೃಷ್ಟಿಯಿಂದ ಬರುವವರಿಗೆ ಆತ್ಮೀಯ ಸ್ವಾಗತ ಕೊಡುತ್ತೇನೆ. ಆದರೆ ಬಂದಂತವರು ನಮ್ಮ ಮನೆ ಹಾಗೂ ಗ್ರಾಮದ ಸುರಕ್ಷತೆ ದೃಷ್ಟಿಯಿಂದ ಸ್ವ ಇಚ್ಛೆಯಿಂದ ಆಯಾಯ ಗ್ರಾಮದ ಶಾಲೆಗಳಲ್ಲಿ ಕ್ವಾರೆಂಟೈನ್ ಆಗಲು ಅವಕಾಶ ಮಾಡಿಕೊಡುತ್ತೇವೆ. ಹೊರ ಭಾಗದಿಂದ ಬರುವವರು ಸಹಕಾರ ನೀಡಬೇಕು ಎಂದು ವಿನಂತಿಸುತ್ತೇನೆ.
ಒಂದು ಗ್ರಾಮ, ಒಂದು ತಾಲೂಕು ಕೊರೊನಾದಿಂದ ಸುರಕ್ಷಿತವಾದರೆ ರಾಜ್ಯ ದೇಶ ಸುರಕ್ಷಿತವಾಗುತ್ತದೆ. ಮಂಗಳವಾರ ರಾತ್ರಿಯಿಂದ ಮುಂದಿನ 14 ದಿನದ ಕೊರೊನಾ ಕರ್ಫ್ಯೂಗೆ ತಾಲೂಕಿನ ಜನತೆ ಸ್ಪಂದಿಸಬೇಕು ಎಂದು ವಿನಂತಿಸಿದರು.
ಜನಪ್ರತಿನಿಧಿಗಳು, ಮಾಧ್ಯಮದವರು, ಪಿಡಿಒಗಳು, ಗ್ರಾಮಕರಣಿಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪೊಲೀಸ್ ಇಲಾಖೆ ಸಿಬ್ಬಂದಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು ನಾವೆಲ್ಲರೂ ಸೇರಿ ಕೊರೋನಾದ ಫ್ರಂಟ್ ಲೈನ್ ವಾರಿಯರ್ಸ್ ಕೆಲಸ ಮಾಡುತ್ತೇವೆ. ಎಲ್ಲರೂ ಸುರಕ್ಷತೆಯೊಂದಿಗೆ ಮುಂಜಾಗ್ರತಾ ಕ್ರಮ ಕೈಗೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಕರೆ ನೀಡಿದರು.