ಬೆಳ್ತಂಗಡಿ: ತಾಲೂಕು ಮಟ್ಟದ ಅಂಬೇಡ್ಕರ್ ಭವನ ನಿರ್ಮಾಣ ಕುರಿತು ದಲಿತ ಮುಖಂಡರುಗಳ ಜೊತೆ ಪೂರ್ವಭಾವಿ ಸಭೆ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಅ.14 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಅಂದಾಜು 7 ಕೋಟಿ ರೂಪಾಯಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಲಿದೆ. ಈಗಾಗಲೇ ಕಟ್ಟಡ ನಿರ್ಮಾಣಕ್ಕೆ 3.60 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ. ಬೆಳ್ತಂಗಡಿ ತಾಲೂಕು ಕ್ರೀಡಾಂಗಣದ ಸ್ಥಳದಲ್ಲಿ 2.48 ಎಕ್ರೆ ಜಾಗದಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣವಾಗಲಿದೆ.ಅತೀ ಶೀಘ್ರದಲ್ಲೇ ಶಿಲಾನ್ಯಾಸ ನೆರವೇರಲಿದ್ದು. ಅಂಬೇಡ್ಕರ್ ಭವನದಲ್ಲಿ 500 ಮಂದಿ ಕುಳಿತುಕೊಳ್ಳುವ ಸಾಮಾರ್ಥ್ಯದ ಸಭಾ ಭವನ ಸುಂದರ ಪಾರ್ಕ್, ನಿರ್ಮಾಣ ವಾಕಿಂಗ್ ಟ್ರ್ಯಾಕ್ ಮಾಡುವ ಹಾಗೂ ಅಂಬೇಡ್ಕರ್ ಅವರ ಜೀವನಾಧರಿತ ಪುಸ್ತಕಗಳನ್ನೊಳಗೊಂಡ ಗ್ರಂಥಾಲಯ ನಿರ್ಮಾಣದ ಯೋಚನೆ ಮಾಡಲಾಗಿದ್ದು, ಸೋಮವತಿ ನದಿಯ ತಟದ ಪ್ರಕೃತಿರಮಣೀಯ ಪ್ರದೇಶದಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣವಾಗಲಿದೆ ಎಂದ ಶಾಸಕರು ಭವನದ ನೀಲಿ ನಕಾಶೆಯನ್ನು ಸಭೆಯ ಮುಂದಿಟ್ಟರು. ಈ ವೇಳೆ ಮುಖಂಡರುಗಳು ಮೆಚ್ಚುಗೆ ವ್ಯಕ್ತಪಡಿಸಿ ಶಾಸಕರ ಯೋಚನೆ ಯೋಜನೆಗಳಿಗೆ ಅಭಿನಂದನೆ ಸಲ್ಲಿಸಿದರು..ಪ್ರಮುಖರಾದ ವಸಂತ ಬಿ.ಕೆ. ಸಂಜೀವ ಆರ್. ನೇಮಿರಾಜ ಕಿಲ್ಲೂರು, ನವೀನ್ ನೆರಿಯ, ರಾಜೇಶ್ ಕಳೆಂಜ, ಪ್ರಭಾಕರ ಶಾಂತಿಗೋಡ್ ಸೇರಿದಂತೆ ಇನ್ನಿತರ ಪ್ರಮುಖರು ಅಂಬೇಡ್ಕರ್ ಪ್ರತಿಮೆ, ನಿರ್ವಹಣೆ,800 ಸಾಮರ್ಥ್ಯದ ಸಭಾ ಭವನ ವಿಸ್ತರಣೆ, ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಸಭೆಯಲ್ಲಿ ಅಭಿಪ್ರಾಯ ಹಂಚಿಕೊಂಡರು.
ಪಟ್ಟಣ ಪಂಚಾಯತ್ ವ್ಯಾಪ್ತಿಯ ರೆಂಕೆದಗುತ್ತು ಎಂಬಲ್ಲಿ 10 ಎಕರೆ ವಿಸ್ತೀರ್ಣದಲ್ಲಿ ನೂತನ ತಾಲೂಕು ಕ್ರೀಡಾಂಗಣಕ್ಕೆ ಜಾಗ ಕಾಯ್ದಿರಿಸಿಲಾಗಿದೆ ಎಂದು ಈ ವೇಳೆ ಶಾಸಕರು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಉಪಾಧ್ಯಕ್ಷೆ ಗೌರಿ ಮತ್ತು ಸದಸ್ಯ ಅಂಬರೀಷ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಸ್ವಾಗತಿಸಿ ಧನ್ಯವಾದವಿತ್ತರು. ಸಭೆಯಲ್ಲಿ ತಾಲೂಕಿನ ವಿವಿಧ ಸಂಘಟನೆಯ ಪ್ರಮುಖರು ಭಾಗವಹಿಸಿ ಸಲಹೆ ಸೂಚನೆ ನೀಡಿದರು.