ಉಜಿರೆ: ವಿಕಲ ಚೇತನರು ಶಾಪಗ್ರಸ್ತರಲ್ಲ. ಅವರಲ್ಲಿ ವಿಶೇಷ ಪ್ರತಿಭೆಗಳಿದ್ದು ಅದನ್ನು ಗುರುತಿಸಿ ಸಕಾಲಿಕ ಪ್ರೋತ್ಸಾಹ ನೀಡಿ ಅವರು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ ಹೇಳಿದರು.
ಮದ್ದಡ್ಕದಲ್ಲಿರುವ ಬ್ರೈಟ್ ಇಂಡಿಯಾ ಸಂಸ್ಥೆಯ ಆಶ್ರಯದಲ್ಲಿ ಉಜಿರೆಯಲ್ಲಿರುವ ಜನಜಾಗೃತಿ ವೇದಿಕೆಯ ಜಾಗೃತಿ ಸೌಧದಲ್ಲಿ ಭಾನುವಾರ ವಿಕಲ ಚೇತನರಿಗೆ ಸಾಧನಾ ಸಲಕರಣೆಗಳನ್ನು ವಿತರಿಸಿ ಅವರು ಮಾತನಾಡಿದರು.
ವಿಕಲ ಚೇತನರು ಕೀಳರಿಮೆ ತೊರೆದು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಸಾರ್ಥಕ ಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ಬೆಳ್ತಂಗಡಿ ತಾಲೂಕಿನ ಏಳು ಮಂದಿ ವಿಕಲ ಚೇತನರಿಗೆ ವಾಕರ್ ಮತ್ತು ಗಾಲಿ ಕುರ್ಚಿಗಳನ್ನು ವಿತರಿಸಲಾಯಿತು.
ಕಡಿರುದ್ಯಾವರ ಗ್ರಾಮ ಪಂಚಾಯಿತಿ ಸದಸ್ಯೆ ಸಾವಿತ್ರಿ, ಮತ್ತು ವಿಕಲ ಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಜೋಸೆಫ್ ಉಪಸ್ಥಿತರಿದ್ದರು.
ಬ್ರೈಟ್ ಇಂಡಿಯಾ ಸಂಸ್ಥೆಯ ಕೋಶಾಧಿಕಾರಿ ಶಿಶುಪಾಲ ಪೂವಣಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಬಿ.ಪಿ. ವಜ್ರನಾಭಯ್ಯ ಧನ್ಯವಾದವಿತ್ತರು.