ಧರ್ಮಸ್ಥಳದ ಮುಳಿಕ್ಕಾರಿನಲ್ಲಿ ನೆರಿಯಾ ನದಿಗೆ 15 ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ: ಪ್ರಗತಿಯಲ್ಲಿರುವ ಕಾಮಗಾರಿಯನ್ನು ವೀಕ್ಷಿಸಿದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಶಾಸಕ ಹರೀಶ್ ಪೂಂಜ

ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ಮುಳಿಕ್ಕಾರು ಎಂಬಲ್ಲಿ ನೆರಿಯ ಹೊಳೆಗೆ ಸಣ್ಣ ನೀರಾವರಿ ಇಲಾಖೆಯ ಅನುದಾನದಿಂದ ಸುಮಾರು 15 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಣೆಕಟ್ಟು ಕಾಮಗಾರಿಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿರುವ ಮುಳಿಕ್ಕಾರು ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡಿದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು, ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳಕ್ಕೆ ಕುಡಿಯುವ ನೀರು ಪೂರೈಕೆಗಾಗಿ ಧರ್ಮಸ್ಥಳ ಗ್ರಾಮದ ಮುಳಿಕ್ಕಾರು ಎಂಬಲ್ಲಿ ನೆರಿಯಾ ನದಿಗೆ 15 ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಮಂಜೂರಾತಿ ದೊರಕಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂದಾಗಿ ಮುಂದೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಸರಕಾರ 15 ಕೋಟಿ ರೂ. ಮಂಜೂರಾತಿ ನೀಡಿ ಕಳೆದ ವರ್ಷ ಕಾಮಗಾರಿ ಪ್ರಾರಂಭಿಸಿದೆ. ಆದರೆ ಕೊರೋನಾದಿಂದಾಗಿ ಎಲ್ಲಾ ಕೆಲಸಗಳು ಸ್ಥಗಿತವಾಗಿ ಇದೀಗ ಗುತ್ತಿಗೆದಾರರು ಕಾಮಗಾರಿಯನ್ನು ಕೈಗೆತ್ತಿಕೊಂಡು ಸುಮಾರು ಒಂದೂವರೆ ತಿಂಗಳಲ್ಲಿ ನಿರೀಕ್ಷೆಗಿಂತ ಮೀರಿ ಶೀಘ್ರವಾಗಿ ಕೆಲಸ ಮಾಡಿದ್ದಾರೆ ಎಂದ ಡಾ. ಹೆಗ್ಗಡೆಯವರು, ಯೋಜನೆಯನ್ನು ಅನುಷ್ಠಾನಗೊಳಿಸಿದ ಇದಕ್ಕಾಗಿ ಕರ್ನಾಟಕ ಸರ್ಕಾರ, ಸಣ್ಣ ನೀರಾವರಿ ಇಲಾಖೆ ಹಾಗೂ ಈ ಕುರಿತು ವಿಶೇಷ ಪ್ರಯತ್ನ ಮಾಡಿದ ಶಾಸಕ ಹರೀಶ್ ಪೂಂಜ ಅವರನ್ನು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಭಿನಂದಿಸಿ ಧರ್ಮಸ್ಥಳದ ಭಕ್ತರು ಹಾಗೂ ಸಾರ್ವಜನಿಕರ ಪರವಾಗಿ ಕೃತಜ್ಞತೆ ಸಲ್ಲಿಸಿದರು.

ಶಾಸಕ ಹರೀಶ್ ಪೂಂಜ ಮಾತನಾಡಿ, ಮುಳಿಕ್ಕಾರಿನಲ್ಲಿ ಸುಮಾರು 15 ಕೋ.ರೂ. ವೆಚ್ಚದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾತಿಗೆ ಮನ್ನಣೆಯನ್ನು ನೀಡಿ ಕರ್ನಾಟಕ ಸರಕಾರ ಮತ್ತು ಸಣ್ಣ ನೀರಾವರಿ ಇಲಾಖೆ ಮೂಲಕ ಇಷ್ಟು ದೊಡ್ಡ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕಳೆದ ವರ್ಷವೇ ಸಣ್ಣ ನೀರಾವರಿ ಇಲಾಖೆ ವತಿಯಿಂದ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ 15 ಕೋಟಿ ರೂ. ಮಂಜೂರಾಗಿದ್ದು, ಕೊರೊನಾದಿಂದಾಗಿ ಒಂದು ವರ್ಷ ವಿಳಂಬವಾಗಿ ಕಾಮಗಾರಿ ಆರಂಭವಾಗಿದೆ ಇದೇ ಫೆಬ್ರವರಿ 10 ಕ್ಕೆ ಕಾಮಗಾರಿ ಆರಂಭಿಸಿದ್ದು ಇದೇ ಎಪ್ರಿಲ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅವರು ಭರವಸೆ ನೀಡಿದರು.

ಕ್ಷೇತ್ರಕ್ಕೆ ಸಾವಿರಾರು ಮಂದಿ ಭಕ್ತಾಧಿಗಳಿಗೆ ತೀರ್ಥಸ್ನಾನ ಸಂದರ್ಭ ನೇತ್ರಾವತಿ ನದಿಯಲ್ಲಿ ನೀರು ಕಡಿಮೆಯಾದರೂ ಇಲ್ಲಿಂದ ಅಲ್ಲಿಗೆ ನೀರು ಸರಬರಾಜು ಮಾಡಲಾಗುವುದು. ಧರ್ಮಸ್ಥಳದಲ್ಲಿರುವ ಎಲ್ಲಾ ಓವರ್‌ಹೆಡ್ ಟ್ಯಾಂಕ್‌ಗಳಿಗೂ ನೀರು ತುಂಬಿಸಿ ನೀರಿನ ಸಮಸ್ಯೆ ಬಗೆ ಹರಿಯಲಿದೆ. ಗುತ್ತಿಗೆದಾರ ಅಶೋಕ ಕುಮಾರ್ ನೇತೃತ್ವದಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು ಸೋಮವಾರದಿಂದ ಸೆಂಟ್ರಿಂಗ್ ಆರಂಭಗೊಂಡಿದೆ ಎಂದರು.

ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಗೋಕುಲ್‌ದಾಸ್ ಅವರು, ಕಿಂಡಿ ಅಣೆಕಟ್ಟು ೮೬ ಮೀ. ಅಗಲ ಹಾಗೂ ೭ ಮೀ ಎತ್ತರವಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿಷ್ಣು ಕಾಮತ್, ಎಂಜಿನಿಯರ್‌ಗಳಾದ ರಾಕೇಶ್, ಶಿವ ಪ್ರಸನ್ನ, ಗುತ್ತಿಗೆದಾರ ಅಶೋಕ ಶೆಟ್ಟಿ, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ.ಶೆಟ್ಟಿ, ಧರ್ಮಸ್ಥಳ ಗ್ರಾ.ಪಂ. ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಸದಸ್ಯರಾದ ಮುರಳೀಧರ ದಾಸ್, ಹರ್ಷಿತ್ ಜೈನ್ ಮೊದಲಾದವರು ಇದ್ದರು.

error: Content is protected !!