ನಾರಾಯಣ ಗುರುಗಳ ಪ್ರೇರಣೆಯಿಂದ ಬದಲಾವಣೆ: ಪದ್ಮನಾಭ ಮಾಣಿಂಜ: ಬೆಳ್ತಂಗಡಿಯಲ್ಲಿ ’ನಮ್ಮೊಳಗಿನ ನಾಣು’ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ ಸಂಪದ

ಬೆಳ್ತಂಗಡಿ : ವರ್ಣಾವಸ್ಥೆ ವ್ಯವಸ್ಥೆಯಲ್ಲಿ ಶೂದ್ರ ಸಮಾಜವಾಗಿ ಕಾಣಿಸಿಕೊಂಡಿದ್ದ ಬಿಲ್ಲವರು ನಾರಾಯಣ ಗುರುಗಳ ಪ್ರೇರಣೆಯಿಂದಾಗಿ ಬದಲಾವಣೆಯ ಬದುಕನ್ನು ಕಾಣುವಂತಾಯಿತು. ಹಿಂದೂ ಸಮಾಜದಲ್ಲಿ ಬಿಲ್ಲವರು ಕೂಡ ಹಿಂದೂಗಳು ಎಂದು ತಲೆ ಎತ್ತಿ ಬದುಕಲು ಸಾಧ್ಯವಾಯಿತು ಎಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಎನ್. ಪದ್ಮನಾಭ ಮಾಣಿಂಜ ಹೇಳಿದರು.

ಅವರು ಭಾನುವಾರ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವವಾಹಿನಿ ಬೆಳ್ತಂಗಡಿ ಘಟಕ, ಯುವ ಬಿಲ್ಲವ ವೇದಿಕೆ ಬೆಳ್ತಂಗಡಿ, ಮಹಿಳಾ ಬಿಲ್ಲವ ವೇದಿಕೆ ಬೆಳ್ತಂಗಡಿ, ಯುವವಾಹಿನಿ ಮಹಿಳಾ ಸಂಚಲನಾ ಸಮಿತಿ ಬೆಳ್ತಂಗಡಿ ಇವುಗಳ ಸಹಕಾರದೊಂದಿಗೆ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಸಭಾಂಗಣದಲ್ಲಿ ಭಾನುವಾರ ನಡೆದ ’ನಮ್ಮೊಳಗಿನ ನಾಣು’ ಬ್ರಹ್ಮಶ್ರೀ ನಾರಾಯಣ ಗುರು ವಿಚಾರ ಸಂಪದವನ್ನು ಉದ್ಘಾಟಿಸಿ ಮಾತನಾಡಿದರು.

ಮಾನವ ನಿರ್ಮಿತವಾದ ತಾರತಮ್ಯದಿಂದ ಕೂಡಿದ ದುಷ್ಟ ಸಾಮಾಜಿಕ ವ್ಯವಸ್ಥೆಯನ್ನು ಸರಿ ಮಾಡಲು ನಾರಾಯಣ ಗುರುಗಳ ರೂಪದಲ್ಲಿ ದೇವರು ಅವತರಿಸಿರಬೇಕು. ಅವರು ಶೂದ್ರರಿಗೆ ದಾರಿಯನ್ನು ತೋರಿಸದೇ ಇರುತ್ತಿದ್ದರೆ ಇಂದಿಗೂ ಬಿಲ್ಲವ ಸಮಾಜ ತುಳಿತಕ್ಕೆ ಒಳಗಾಗಬೇಕಿತ್ತು ಎಂದರು.

ನಾರಾಯಣ ಗುರು ಜನನ ಪೂರ್ವ ಸಮಾಜ’ ಎಂಬ ವಿಷಯದಲ್ಲಿ ನಿವೃತ್ತ ಶಿಕ್ಷಕಿ, ಸಾಹಿತಿ ಬಿ. ಎಂ. ರೋಹಿಣಿ, ’ಪರಿವರ್ತನೆಯ ಹರಿಕಾರ ನಾರಾಯಣ ಗುರು’ ವಿಷಯದಲ್ಲಿ ಮಂಗಳೂರಿನ ರಥಬೀದಿಯ ಡಾ. ದಯಾನಂದ ಪೈ, ಸತೀಶ್ ಪೈ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶೇಷಪ್ಪ ಅಮೀನ್, ’ಪ್ರಸ್ತುತ ಸಮಾಜ, ಮುಂದಿನ ನಡೆ’ ವಿಷಯದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಎಂ. ಚಂದ್ರ ಪೂಜಾರಿ ವಿಚಾರ ಮಂಡಿಸಿ ಸಂವಾದ ನಡೆಸಿದರು.

ಯುವವಾಹಿನಿ ಕೇಂದ್ರ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ಸಮನ್ವಯಕಾರರಾಗಿ ವಿಚಾರ ಸಂಪದವನ್ನು ನಡೆಸಿಕೊಟ್ಟರು.

ತಾಲ್ಲೂಕು ಯುವ ಬಿಲ್ಲವ ವೇದಿಕೆ ಅಧ್ಯಕ್ಷ ರಂಜಿತ್ ಹೆಚ್. ಡಿ., ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ರಾಜಶ್ರೀ ರಮಣ್, ಯುವವಾಹಿನಿ ಮಹಿಳಾ ಸಂಚಲನಾ ಸಮಿತಿ ಅಧ್ಯಕ್ಷೆ ಸುಜಾತ ಅಣ್ಣಿ ಪೂಜಾರಿ ವೇದಿಕೆಯಲ್ಲಿದ್ದರು.

ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಪ್ರಸಾದ್ ಎಂ.ಕೆ ಸ್ವಾಗತಿಸಿ, ಚಂದ್ರಹಾಸ್ ಬಳಂಜ, ಸಮೀಕ್ಷಾ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಕಾರ್ಯದರ್ಶಿ ನಾರಾಯಣ ಸುವರ್ಣ ವಂದಿಸಿದರು.

error: Content is protected !!