ನೋವು ನಲಿವುಗಳನ್ನು ನೋಡಲು ಕಣ್ಣು ದೇವರು ಕೊಟ್ಟ ಕೊಡುಗೆ: ಹರೀಶ್ ಕುಮಾರ್

ಬೆಳ್ತಂಗಡಿ : ದೇಹದ ಪ್ರತಿಯೊಂದು ಭಾಗವೂ ನಮ್ಮ ಆಸ್ತಿ ಇದ್ದಂತೆ ಕಣ್ಣು ಎಂಬುದು ಪ್ರತಿಯೊಬ್ಬರ ನೋವು ನಲಿವನ್ನು ಕಾಣಲು ದೇವರು ಕೊಟ್ಟ ಕೊಡುಗೆಯಾಗಿದೆ ಎಂದು ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಹೇಳಿದರು.

ಅವರು ಭಾನುವಾರ ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಕಲಾಭವನದಲ್ಲಿ ನಾಗರಿಕಾ ಸೇವಾ ಸಮಿತಿ ಗುರುವಾಯನಕೆರೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮತ್ತು ಮಹಮ್ಮಾಯಿ ಸೇವಾ ಸಮಿತಿ ಪುತ್ರಬೈಲು ಲಾಯಿಲ ಇದರ ಆಶ್ರಯದಲ್ಲಿ ನಡೆದ ಕಣ್ಣಿನ ಉಚಿತ ತಪಾಸಣೆ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕರಿಗೆ ಉಪಯುಕ್ತವಾದ ಇಂತಹ ಶಿಬಿರಗಳ ಆಯೋಜನೆ ನಿಜಕ್ಕೂ ಶ್ಲಾಘನೀಯ. ನಾಗರಿಕರು ಕೂಡ ಇಂತಹ ಶಿಬಿರದಲ್ಲಿ ಭಾಗವಹಿಸಿ, ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಪಿಎಂಸಿ ಸದಸ್ಯ ಈಶ್ವರ ಬೈರ ಮಾತನಾಡಿ, ದೇವರ ಸೇವೆ ಮಾಡುತ್ತಿರುವವರಿಗೆ ದೇವರ ಅನುಗ್ರಹವಿದೆ. ಪ್ರತಿಯೊಬ್ಬರೂ ದೇವರ ಸೇವೆಯೊಂದಿಗೆ ಸಮಾಜದ ಸೇವೆ ಮಾಡುವವರನ್ನು ಗೌರವಿಸಬೇಕು. ಭಗವಂತ ಇಂತವರಿಗೆ ಮಾತ್ರ ಶಕ್ತಿಯನ್ನು ನೀಡುತ್ತಾನೆ ಎಂದರು.


ಕಾರ್ಯಕ್ರಮದಲ್ಲಿ ಉಜಿರೆ ಎಸ್‌ಡಿಎಂ ಆಸ್ಪತ್ರೆಯ ನಿರ್ದೇಶಕ ಎಂ ಜನಾರ್ಧನ್, ಮೆಡಿಕಲ್ ಸೂಪರಿಡೆಂಟ್ ಡಾ. ಕಾಶಿನಾಥ್ ಶೆಣೈ, ಕೆ.ಪಿ.ಸಿ.ಸಿ. ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ಬೆಳ್ತಂಗಡಿ ಪಟ್ಟಣ ಪಂ ಅಧ್ಯಕ್ಷೆ ರಜನಿ ಕುಡ್ವ, ಕಳಿಯ ಗ್ರಾ.ಪಂ ಅಧ್ಯಕ್ಷೆ ಸುಹಾಸಿನಿ,. ಮೆಲಂತಬೆಟ್ಟು ಗ್ರಾ.ಪಂ ಅಧ್ಯಕ್ಷೆ ಹರಿಣಾಕ್ಷಿ, ಕೊಯ್ಯೂರು ಗ್ರಾ.ಪಂ ಅಧ್ಯಕ್ಷ ಜಗನ್ನಾಥ್ ಎಂ., ಲಾಲ ಗ್ರಾ.ಪಂ ಅಧ್ಯಕ್ಷೆ ಆಶಾ ಬೆನಡಿಕ್ಟ್ ಸಲ್ದಾನ, ಗ್ರಾಮಾಭಿವೃದ್ಧಿ ಯೋಜನೆಯ ಪ್ರಾ.ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯ್ಸ್ , ಗುರುವಾಯನಕೆರೆ ನಾಗರಿಕಾ ಸೇವಾ ಸಮಿತಿ ಕಾರ್ಯದರ್ಶಿ ಮುರಳಿಧರ ದಾಸ್ ಉಪಸ್ಥಿತರಿದ್ದರು.

ಗುರುವಾಯನಕೆರೆ ನಾಗರಿಕಾ ಸೇವಾ ಸಮಿತಿ ಅಧ್ಯಕ್ಷ ಸುಕೇಶ್ ಕಡಂಬು ಸ್ವಾಗತಿಸಿದರು. ಜಿ.ಪಂ. ಮಾಜಿ ಅಧ್ಯಕ್ಷೆ ರಾಜಶ್ರೀ ಹೆಗ್ಡೆ ವಂದಿಸಿದರು. ಪೃಥ್ವೀಶ್ ಗೌಡ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 701 ಫಲಾನುಭವಿಗಳು ಹೆಸರು ನೊಂದಾಯಿಸಿ ಪ್ರಯೋಜನ ಪಡೆದುಕೊಂಡರು.

error: Content is protected !!