ಬೆಳ್ತಂಗಡಿ: ಮುಂಡಾಜೆ ಗ್ರಾ.ಪಂ. ವ್ಯಾಪ್ತಿಯ ಕಾಪು ಕಿಂಡಿ ಅಣೆಕಟ್ಟಿನ ಸಮೀಪ ರಸ್ತೆ ಬದಿಯ ಸರಕಾರಿ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡು ಹರಿದಾಡಿದ ಘಟನೆ ಮಂಗಳವಾರ ನಡೆದಿದ್ದು, ಅಗ್ನಿಶಾಮಕ ದಳದ ಸಮಯೋಚಿತ ಕಾರ್ಯಾಚರಣೆಯಿಂದ ದೊಡ್ಡ ಮಟ್ಟದ ಅಪಾಯ ತಪ್ಪಿದೆ.
ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಬದಿ ಗಿಡಗಂಟಿಗಳು ಕೂಡಿದ್ದ ಜಾಗದಲ್ಲಿ ಯಾರೋ ಧೂಮಪಾನಿಗಳಿಂದಲೋ ಏನೋ ಬೆಂಕಿ ಉಂಟಾಗಿ, ಸುತ್ತಮುತ್ತ ಪಸರಿಸತೊಡಗಿತ್ತು. ಈ ಬಗ್ಗೆ ಸ್ಥಳೀಯರು ಶಾಸಕ ಹರೀಶ್ ಪೂಂಜ ಅವರಿಗೆ ಮಾಹಿತಿ ನೀಡಿದರು. ಬೆಂಗಳೂರಿನಲ್ಲಿದ್ದ ಶಾಸಕರು ಕೂಡಲೇ ಸ್ಪಂದಿಸಿ, ಬೆಳ್ತಂಗಡಿ ಅಗ್ನಿಶಾಮಕ ದಳಕ್ಕೆ ವಿಚಾರ ತಿಳಿಸಿದರು. ಅಗ್ನಿಶಾಮಕ ದಳದ ಅಧಿಕಾರಿ ಕ್ಲೇವಿಯಸ್ ಡಿ’ಸೋಜಾ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ಹತೋಟಿಗೆ ತರುವಲ್ಲಿ ಯಶಸ್ವಿಯಾದರು. ಮೆಸ್ಕಾಂನ ಮುಂಡಾಜೆ ವಿಭಾಗದ ಅಭಿಯಂತರ ಶಂಕರಲಿಂಗೇ ಗೌಡ, ಅರಣ್ಯ ಇಲಾಖೆ ಸಿಬ್ಬಂದಿ, ಶರತ್ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್ ಬಂಗೇರ ಮೊದಲಾದವರು ಕಾರ್ಯಾಚರಣೆಗೆ ಸಹಕರಿಸಿದರು.
ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯರ ಸಹಕಾರದಲ್ಲಿ ಬೆಂಕಿಯನ್ನು ನಂದಿಸಿದ್ದು ಭಾರಿ ಅನಾಹುತ ತಪ್ಪಿದಂತಾಗಿದೆ.
ಹೆಚ್ಚುತ್ತಿತ್ತು ಹಾನಿ!:
ಬೆಂಕಿ ಬಿದ್ದ ಜಾಗದಲ್ಲಿ 11 ಕೆವಿ ವಿದ್ಯುತ್ ಲೈನ್, ಖಾಸಗಿ ಕಂಪೆನಿಯ ವಿದ್ಯುತ್ ಲೈನ್, ಎಚ್.ಟಿ,ಎಲ್.ಟಿ. ವಿದ್ಯುತ್ ಲೈನ್ ಹಾದು ಹೋಗಿದೆ. ಸಮೀಪದಲ್ಲಿ ಅಡಕೆ, ರಬ್ಬರ್ ತೋಟಗಳು ಇವೆ. ಅಲ್ಲದೆ ಶಿವರಾತ್ರಿ ಅಂಗವಾಗಿ ತೆರೆದ ತಾತ್ಕಾಲಿಕ ಅಂಗಡಿಗಳು, ಶಿವರಾತ್ರಿ ಪಾದಯಾತ್ರಿಗಳು ಹಾಗೂ ಅವರ ವಸ್ತುಗಳನ್ನು ತುಂಬಿದ್ದ ವಾಹನಗಳೂ ಇದ್ದವು. ಹರಡುತ್ತಿದ್ದ ಬೆಂಕಿಯನ್ನು ತಕ್ಷಣ ಹತೋಟಿಗೆ ತಂದ ಕಾರಣ ಹೆಚ್ಚಿನ ಹಾನಿ ಉಂಟಾಗಿಲ್ಲ.