
ಮಂಗಳೂರು:ಮುಂಬೈಯ ಬಂಟರ ಸಂಘದ ಆಂತರಿಕ ವಿವಾದಕ್ಕೆ ತೆರೆ ಬಿದ್ದಿದೆ ಎಂದು ತಿಳಿದು ಬಂದಿದೆ. ಖ್ಯಾತ ಉದ್ಯಮಿಗಳು, ಕೊಡುಗೈ ದಾನಿಗಳು ಆಗಿರುವ ಕನ್ಯಾನ ಸದಾಶಿವ ಶೆಟ್ಟಿ ಮತ್ತು ಬಂಟರ ಸಂಘದ ಕೆಲವು ಪದಾಧಿಕಾರಿಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಈ ವಿಚಾರ ಬಾರಿ ಸುದ್ದಿಯಾಗಿ ಸಂಚಲನ ಸೃಷ್ಟಿಯಾಗಿತ್ತು. ಈ ಮಧ್ಯೆ ಸದಾಶಿವ ಶೆಟ್ಟಿಯವರು ಬೇಸರದಲ್ಲಿ ತನ್ನ ಎಲ್ಲಾ ಸಮಾಜಸೇವೆಗಳನ್ನು ಮತ್ತು ಕೊಡುಗೆಗಳನ್ನು ನಿಲ್ಲಿಸುವುದಾಗಿ ಘೋಷಿಸಿದ್ದರು. ಇದು ಬಾರೀ ಚರ್ಚೆಗೆ ಕಾರಣವಾಗಿತ್ತಲ್ಲದೆ. ಕನ್ಯಾನ ಸದಾಶಿವ ಶೆಟ್ಟಿಯವರ ಅಭಿಮಾನಿಗಳು ಅಸಾಮಾಧಾನ ಹೊರಹಾಕಿದ್ದರು.ಬಳಿಕದ ಬೆಳವಣಿಗೆಯಲ್ಲಿ ಕನ್ಯಾನ ಸದಾಶಿವ ಶೆಟ್ಟಿಯವರು ಐಕಳ ಹರೀಶ್ ಶೆಟ್ಟಿ ಮತ್ತು ಅಜಿತ್ ಕುಮಾರ್ ಮಾಲಾಡಿ ವಿರುದ್ಧ ವಾಗ್ದಾಳಿ ನಡೆಸಿದ್ದರು ಎಂದು ಪ್ರಚಾರವಾಗಿತ್ತು.
ಇವರ ನಡುವಿನ ಭಿನ್ನಾಭಿಪ್ರಾಯವನ್ನು ಸರಿಪಡಿಸುವ ಪ್ರಯತ್ನ ಸತತವಾಗಿ ನಡೆದಿತ್ತು. ಇದೀಗ ಸಮಾನ ಮನಸ್ಕರು ಮುಂಬೈನಲ್ಲಿ ಸೇರಿ ವಿವಾದವನ್ನು ಬಗೆಹರಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.ಸಭೆಯಲ್ಲಿ ಉದ್ಯಮಿಗಳಾದ ಶಶಿಧರ ಶೆಟ್ಟಿ ಬರೋಡ, ಗೋಲ್ಡ್ ಪಿಂಚ್ ಪ್ರಕಾಶ್ ಶೆಟ್ಟಿ ,ಪಟ್ಲ ಸತೀಶ್ ಶೆಟ್ಟಿ, ಮಹೇಶ್ ಶೆಟ್ಟಿ ತೆಳ್ಳಾರ್,ರವಿ ಶೆಟ್ಟಿ ಸಾಯಿ ಪ್ಯಾಲೇಸ್ ಸೇರಿದಂತೆ ಇನ್ನಿತರ ಪ್ರಮುಖರ ಸಮ್ಮುಖದಲ್ಲಿ ಮುಂಬೈನಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ.
ಸಭೆಯಲ್ಲಿ ಐಕಳ ಹರೀಶ್ ಶೆಟ್ಟಿಯವರು ತಾವು ಸದಾಶಿವ ಶೆಟ್ಟರ ಮನಸ್ಸಿಗೆ ನೋವು ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದರಲ್ಲದೇ. ಉಡುಪಿಯಲ್ಲಿ ಅಪೂರ್ಣವಾಗಿರುವ ‘ಸದಾಶಿವ ಶೆಟ್ಟಿ ಕನ್ಯಾನ’ ಸಭಾಂಗಣವನ್ನು ಇದೇ ವರ್ಷ ಡಿಸೆಂಬರ್ 31ರ ಒಳಗೆ ಲೋಕಾರ್ಪಣೆಗೊಳಿಸುವ ಭರವಸೆಯನ್ನೂ ನೀಡಿದ್ದಾರೆ.
ಈ ಸಕಾರಾತ್ಮಕ ಸ್ಪಂದನೆಯಿಂದ ಸಮಾಧಾನಗೊಂಡ ಕನ್ಯಾನ ಸದಾಶಿವ ಶೆಟ್ಟಿಯವರು ಸಮಾಜ ಸೇವಾ ಕಾರ್ಯಗಳನ್ನು ಎಂದಿನಂತೆ ಮುಂದುವರಿಸುವುದಾಗಿ ಘೋಷಿಸಿದ್ದಾರೆ.