ಧರ್ಮಸ್ಥಳ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಗುರುವಾರ ಶಿವರಾತ್ರಿಯನ್ನು ಪುಣ್ಯ ರಾತ್ರಿಯಾಗಿ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತಿದ್ದು, ನಾಡಿನ ವಿವಿಧ ಕಡೆಗಳಿಂದ ಸಹಸ್ರಾರು ಭಕ್ತರು ಆಗಮಿಸಿದ್ದಾರೆ.
ಶಿವರಾತ್ರಿ ಅಂಗವಾಗಿ ಗುರುವಾರ ಸಂಜೆ ಗಂಟೆ 6ರಿಂದ ಶುಕ್ರವಾರ ಬೆಳಗ್ಗಿನ ಜಾವದವರೆಗೆ ನಾಲ್ಕು ಜಾವಗಳಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಭಕ್ತರಿಂದ ಅಭಿಷೇಕ ಸೇವೆ ನಡೆಯುತ್ತದೆ. ವಿಶೇಷ ಪೂಜೆ, ಅರ್ಚನೆಗಳ ಬಳಿಕ ರಥೋತ್ಸವ ನಡೆಯುತ್ತದೆ. ರಾತ್ರಿ ಇಡೀ ಶಿವಪಂಚಾಕ್ಷರಿ ಪಠಣ, ಶಿವನಾಮ ಸ್ಮರಣೆ, ಭಜನೆ, ಸತ್ಸಂಗ, ಉಪವಾಸ, ಜಾಗರಣೆ ಇತ್ಯಾದಿ ಕಾರ್ಯಕ್ರಮಗಳೊಂದಿಗೆ ಶ್ರದ್ಧಾ-ಭಕ್ತಿಯಿಂದ ಶಿವರಾತ್ರಿಯನ್ನು ಎಲ್ಲರೂ ಪುಣ್ಯರಾತ್ರಿಯಾಗಿ, ಶುಭ ರಾತ್ರಿಯಾಗಿ ಆಚರಿಸುತ್ತಾರೆ.
ಪಾದಯಾತ್ರಿಗಳ ಗಡಣ: ಬೆಂಗಳೂರು, ಮೈಸೂರು, ಹಾಸನ ಚಿಕ್ಕಮಗಳೂರು ಮೊದಲಾದ ಕಡೆಗಳಿಂದ ಮೂವತ್ತು ಸಾವಿರಕ್ಕೂ ಮಿಕ್ಕಿ ಪಾದಯಾತ್ರಿಗಳು ಬುಧವಾರ ಧರ್ಮಸ್ಥಳ ತಲುಪಿದ್ದಾರೆ. ಹತ್ತು ಸಾವಿರ ಪಾದಯಾತ್ರಿಗಳು ಉಜಿರೆ ತಲುಪಿದ್ದು ಅಲ್ಲಿನ ಶಾಲಾ-ಕಾಲೇಜುಗಳಲ್ಲಿ ಅವರಿಗೆ ಉಚಿತ ವಸತಿ ವ್ಯವಸ್ಥೆ ಮಾಡಲಾಗಿದೆ.
ಗುರುವಾರ ಬೆಳಗ್ಗೆ ಹೆಚ್ಚಿನ ಭಕ್ತಾದಿಗಳು ನೇತ್ರಾವತಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ಧರ್ಮಸ್ಥಳ ತಲುಪುವರು. ಧರ್ಮಸ್ಥಳದಲ್ಲಿ ವೈಶಾಲಿ, ಸಾಕೇತ, ಗಂಗೋತ್ರಿ ವಸತಿ ಛತ್ರಗಳಲ್ಲಿ ಪಾದಯಾತ್ರಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ.
ಧರ್ಮಸ್ಥಳದ ಸಂಚಾರಿ ಆಸ್ಪತ್ರೆ, ಎಸ್.ಡಿ.ಎಂ. ಆಸ್ಪತ್ರೆ ಹಾಗೂ ಅಂಬುಲೆನ್ಸ್ ಉಚಿತ ಆರೋಗ್ಯ ಸೇವೆಯಲ್ಲಿ ನಿರತವಾಗಿವೆ.
ಬೆಂಗಳೂರಿನ ಚರ್ಮರೋಗ ತಜ್ಞರಾದ ಡಾ. ಕೆ.ಎಲ್. ಪಂಚಾಕ್ಷರಿ ನೇತೃತ್ವದಲ್ಲಿ ಡಾ. ನಾಗರಾಜು, ಡಾ. ಮಂಜುನಾಥ್, ಡಾ. ಶೀತಲ್ ಶರ್ಮ, ಡಾ. ರೇಣುಕಾ, ಡಾ. ನಾಗಲಕ್ಷ್ಮೀ ಮತ್ತು ಕೆ.ಪಿ. ಸಿದ್ಧರಾಮೇಗೌಡ ಅವರು ಭಕ್ತರಿಗೆ ಧರ್ಮಸ್ಥಳದಲ್ಲಿ ಉಚಿತ ಆರೋಗ್ಯ ಸೇವೆ ನೀಡುತ್ತಿದ್ದಾರೆ.