ಧರ್ಮಸ್ಥಳದ ಅತ್ಯಮೂಲ್ಯ ವಾಹನ ಸಂಗ್ರಹಾಲಯಕ್ಕೆ ಹೊಸ ಅತಿಥಿಗಳು!:“ಮಂಜೂಷಾ” ವಾಹನ ಸಂಗ್ರಹಾಲಯ ಸೇರಿದ ಎರಡು ಡಬಲ್ ಡೆಕ್ಕರ್ ಬಸ್ ಗಳು: ಭಕ್ತರ ಚಿತ್ತ ಸೆಳೆಯುತ್ತಿರುವ ಮುಂಬೈ ಅತಿಥಿಗಳು

ಧರ್ಮಸ್ಥಳ: ಧರ್ಮಸ್ಥಳದ ಮಂಜೂಷ ವಾಹನ‌ ಸಂಗ್ರಹಾಲಯದ ಕಳೆ ಇನ್ನಷ್ಟು ಹೆಚ್ಚಾಗಿದ್ದು, ಎರಡು ಹೊಸ ಡಬ್ಬಲ್ ಡೆಕ್ಕರ್ ಬಸ್ ಗಳು ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪುವ ಮೂಲಕ ಹೊಸ ಆಕರ್ಷಣೆಯಾಗಿ, ಭಕ್ತರನ್ನು ಸೆಳೆಯುತ್ತಿದೆ. ಇದರಲ್ಲಿ ನೀಲಿ‌ ಬಣ್ಣದ ಬಸ್ ಮುಂಬೈನಲ್ಲಿ ಪ್ರವಾಸಿಗರನ್ನು ಹೊತ್ತೊಯ್ದು, ವಿವಿಧ ಪ್ರವಾಸಿ ಸ್ಥಳಗಳನ್ನು ತೋರಿಸುತ್ತಿದ್ದ ಟೂರಿಸ್ಟ್ ಬಸ್ ಆಗಿದೆ. ಇದರ ಮಹಡಿ ತೆರೆದುಕೊಂಡಿದೆ. ಇನ್ನು ಕೆಂಪು ಬಣ್ಣದ ಡಬ್ಬಲ್ ಡೆಕ್ಕರ್ ಬಸ್‌ ಸ್ಥಳೀಯ ಸಾರ್ವಜನಿಕರನ್ನು ಹೊತ್ತೊಯ್ಯುವ ಸಾರಿಗೆ ಬಸ್ ಆಗಿದೆ. ಇದರ ಮಹಡಿ ಪೂರ್ತಿಯಾಗಿ ‌ಮುಚ್ಚಿಕೊಂಡಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಚತುರ್ವಿಧ ದಾನಗಳು ನಡೆಯುವ ಜೊತೆಗೆ ಜ್ಞಾನ ದಾಹ ತಣಿಸುವ ವಿಚಾರಕ್ಕೂ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಭಕ್ತಿ ಸುಧೆ ಹರಿಸುವ ಜೊತೆಗೆ ಸಾಹಿತ್ಯ, ಸರ್ವಧರ್ಮ ಸಮನ್ವಯ, ಲಲಿತಕಲಾ ಗೋಷ್ಠಿಗಳು ಮೊದಲಾದವುಗಳಿಗೂ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಧರ್ಮಸ್ಥಳದ ಮಂಜೂಷಾ ವಸ್ತುಸಂಗ್ರಹಾಲಯಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ವಸ್ತುಸಂಗ್ರಹಾಲಯದಲ್ಲಿ ಸಾವಿರಾರು ವರ್ಷಗಳ ಹಿಂದಿನ ಪಳೆಯುಳಿಕೆಗಳಿಂದ ಹಿಡಿದು, ವಿದೇಶಗಳಲ್ಲಿ ‌ಲಭಿಸುವ ಕರಕುಶಲ ವಸ್ತುಗಳವರೆಗೆ ನೋಡಿದಷ್ಟು ಮುಗಿಯದ, ಆಸಕ್ತಿಕರ ವಿವಿಧ ವಸ್ತುಗಳ ಭಂಡಾರವೇ ಇದೆ. ಅದೇ ರೀತಿ ನೆಲ್ಯಾಡಿ ಬೀಡು ಬಳಿ ಇರುವ ವಾಹನ‌ ಸಂಗ್ರಹಾಲಯವೂ ಅತ್ಯಮೂಲ್ಯ ವಾಹನಗಳ ದೊಡ್ಡ ಸಂಗ್ರಹವನ್ನೇ ಹೊಂದಿದೆ.

ಹೊಸ ವಾಹನಗಳ ಸೇರ್ಪಡೆ:

“ಮಂಜೂಷಾ” ವಾಹನ ಸಂಗ್ರಹಾಲಯಕ್ಕೆ ಮುಂಬೈನಲ್ಲಿರುವ ಧರ್ಮಸ್ಥಳದ ಭಕ್ತರು ಸಂಗ್ರಹಿಸಿ ಕಳುಹಿಸಿದ ಎರಡು ಡಬಲ್ ಡೆಕ್ಕರ್ ಬಸ್‍ಗಳು ಧರ್ಮಸ್ಥಳಕ್ಕೆ ತಲುಪಿವೆ. ಮುಂಬೈನಿಂದ ಧರ್ಮಸ್ಥಳಕ್ಕೆ ಡಬಲ್ ಡೆಕ್ಕರ್ ಬಸ್‌ಗಳನ್ನು ವಿ.ಆರ್.ಎಲ್. ಲಾಜಿಸ್ಟಿಕ್ ಸಂಸ್ಥೆಯವರು ಸಾಗಾಟವನ್ನು ಉಚಿತವಾಗಿ ಮಾಡಿಕೊಟ್ಟಿದ್ದು ಧರ್ಮಾಧಿಕಾರಿ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಅವರಿಬ್ಬರಿಗೂ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದವನ್ನು ಕೋರಿ ಶುಭ ಹಾರೈಸಿದ್ದಾರೆ.

ಮುಂದೆ ಈ ಎರಡೂ ಬಸ್ ಗಳು ಕ್ಷೇತ್ರದ ವಿಶೇಷ ಆಕರ್ಷಣೆಯಾಗುವ ಸಾಧ್ಯತೆಗಳಿವೆ.‌

ಅತ್ಯಮೂಲ್ಯ ‌ವಾಹನಗಳು: 

ಈಗಾಗಲೇ ಕ್ಷೇತ್ರದ ಮಂಜೂಷಾ ವಾಹನ ಸಂಗ್ರಹಾಲಯದಲ್ಲಿ ‌ಮರ್ಸಿಡೀಸ್ ಬೆಂಝ್ ಸಂಸ್ಥೆಯ ಮಾತೃ ಸಂಸ್ಥೆಯಾದ ಡ್ಯಾಮ್ಲರ್ ಸಂಸ್ಥೆಯ, ಮೈಸೂರು ಮಹಾರಾಜರು ಬಳಸುತ್ತಿದ್ದ ವಿಕ್ಟೋರಿಯಾ ರಾಣಿಯ ವಿಶೇಷ ನವೀಕೃತ ಕಾರು, ಮಹತ್ಮಾ ಗಾಂಧೀಜಿಯವರು ಕರ್ನಾಟಕ ಪ್ರವಾಸ ಸಂದರ್ಭದಲ್ಲಿ ಬಳಸಿದ್ದ ಕಾರು, ಲಿಮೋಸಿನ್, ರೋಲ್ಸ್ ರಾಯ್ಸ್ ಮೊದಲಾದ ವಿವಿಧ ರಾಷ್ಟ್ರಗಳ, ವಿವಿಧ ವಿಶೇಷತೆಗಳನ್ನು ಹೊಂದಿರುವ ಕಾರುಗಳು ಇಲ್ಲಿವೆ. ಶತಮಾನಗಳ ಹಿಂದಿನ ಆಂಬ್ಯುಲೆನ್ಸ್, ವಿಶೇಷ ಖಾಸಗಿ ವಿಮಾನ, ತರಬೇತಿ ಪಡೆಯುವ ವಿಮಾನ, ಹಬೆಯಿಂದ ಚಲಿಸುವ ಉಗಿಬಂಡಿ (ರೈಲು ‌ಇಂಜಿನ್), ಹಬೆಯಿಂದ ಚಲಿಸುವ ರೋಡ್ ರೋಲರ್ ಹೀಗೆ ವಿವಿಧ ವಿಶೇಷತೆಗಳನ್ನು ಹೊಂದಿರುವ ದೊಡ್ಡ ಭಂಡಾರವೇ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿದೆ.

ಹೊಸ ವಾಹನಗಳು: 

ಇತ್ತೀಚೆಗೆ ಪರಿಸರ ಸ್ನೇಹಿ ಗೋವು ಹಾಗೂ ಕಾರ್ ಗಳ ಸಮ್ಮಿಶ್ರಣದ ‘ಗೋವು ಕಾರ್’ ಹಾಗೂ ವಸ್ತುಗಳ ಸಾಗಾಟಕ್ಕೆ ಬಳಸುವ ಪರಿಸರ ಸ್ನೇಹಿ ‌ಬಂಡಿ‌ ಹಲವು ವಿಶೇಷತೆಗಳ‌ ಮೂಲಕ ರಾಷ್ಟ್ರಾದ್ಯಂತ ವಿಶೇಷ ಸುದ್ದಿ‌ಮಾಡಿತ್ತು.‌

ಇದೀಗ ಮತ್ತೆ ಕಾಣ ಸಿಗುವುದೇ ಅಪರೂಪವಾದ, ಮುಂಬೈನಲ್ಲಿ ಜನಪ್ರಿಯವಾಗಿದ್ದ ಡಬ್ಬಲ್ ಡೆಕ್ಕರ್ ಬಸ್ ಗಳು ಧರ್ಮಸ್ಥಳಕ್ಕೆ ಆಗಮಿಸಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಹಳೆ ವಾಹನಗಳು ಧರ್ಮಾಧಿಕಾರಿಗಳ ಆಣತಿಯಂತೆ ಹೊಸ ರೂಪ ಪಡೆದು ರಸ್ತೆಯಲ್ಲಿ ಓಡಾಡೋದು ಮತ್ತೊಂದು ವಿಶೇಷತೆ. ಈ ಡಬ್ಬಲ್ ಡೆಕ್ಕರ್ ಬಸ್ ಗಳು‌ ಮುಂದೆ ಯಾವ ರೂಪ ಪಡೆಯಲಿದೆ‌ ಅನ್ನೋದು ಭಕ್ತವರ್ಗದ ಕುತೂಹಲವಾಗಿದೆ.

ಒಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಈ ವಿಶೇಷ ಕಾರ್ಯ ವಿಶ್ವಾದ್ಯಂತ ಜನರ ಮೆಚ್ಚುಗೆಗೆ ಪಾತ್ರವಾಗಿದೆ, ಇದು ಹೀಗೆಯೇ ಮುಂದುವರಿಯಲಿ ಜೊತೆಗೆ ಧರ್ಮಾಧಿಕಾರಿ ಡಾ. ಡಿ‌. ವೀರೇಂದ್ರ ಹೆಗ್ಗಡೆಯವರ ವಾಹನ ಪ್ರೀತಿ ಹಾಗೂ ವಿಶೇಷ ಅಭಿರುಚಿಗೆ ‘ಪ್ರಜಾಪ್ರಕಾಶ ನ್ಯೂಸ್’ ತಂಡದ ನಮನಗಳು.

error: Content is protected !!