ಬೆಳ್ತಂಗಡಿ: ಹುಟ್ಟುತ್ತಲೇ ಎರಡು ಕೈಗಳು ಇರಲಿಲ್ಲ, ಆದರೂ ಬದುಕಿನಲ್ಲಿ ಏನೂ ಮಾಡಲು ಸಾಧ್ಯವಿಲ್ಲವೆಂದು ಸುಮ್ಮನೆ ಕೂರಲಿಲ್ಲ. ಕಾಲುಗಳನ್ನೇ ಕೈಗಳಂತೆ ಬಳಸಿಕೊಂಡು ಪರೀಕ್ಷೆ ಬರೆದರು, ಮತ ಚಲಾವಣೆ ಮಾಡಿದರು, ದಿನ ನಿತ್ಯದ ಕಾರ್ಯಗಳನ್ನು ಸ್ವಾವಲಂಬಿಯಾಗಿ ಮಾಡಿದರು. ಇದೀಗ ಕೆಲಸ ನಿರ್ವಹಿಸುತ್ತಾ, ಸ್ವಾವಲಂಬಿ ಜೀವನ ಸಾಗಿಸುತ್ತಾ, ಸಮಾಜಕ್ಕೆ ಮಾದರಿಯಾಗುವ ಜೊತೆಗೆ ಮನೆಯಲ್ಲೇ ಇರುವ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ ಬೆಳ್ತಂಗಡಿ ತಾಲೂಕು ಗರ್ಡಾಡಿಯ ಸಬಿತಾ ಮೋನಿಸ್.
ಸಾಧನೆಗಳ ಮೂಲಕ ಜನರ ಚಿತ್ತ ಸೆಳೆದ ಸಬಿತಾ ಅವರ ಅಸಮಾನ್ಯ ಸಾಧನೆ ಗುರುತಿಸಿ 2021ನೇ ಸಾಲಿನ ‘ರಾಷ್ಟ್ರೀಯ ಮಹಿಳಾ ಸಾಧಕಿ ಪ್ರಶಸ್ತಿ’ಯ ಮೂಲಕ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ನವದೆಹಲಿಯ ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಕರ್ನಾಟಕದ ಪತ್ರಿಕೆಗಳ ಸಂಘ ಜಂಟಿಯಾಗಿ ಪ್ರಾಯೋಜಕತ್ವದಲ್ಲಿ ಈ ಗೌರವಯುತ ಪ್ರಶಸ್ತಿ ನೀಡಲಾಗುತ್ತಿದೆ.
ನ್ಯೂನತೆ ಮೆಟ್ಟಿ ನಿಂತರು:
ಸಬಿತಾ ಮೋನಿಸ್ ಛಲದಿಂದಲೇ ಸಾಧನೆಗಳ ಮೆಟ್ಟಿಲು ಏರಿದವರು. ಸಾಧನೆಗೆ ಅಂಗವೈಕಲ್ಯ ಅಡ್ಡಿಯಾದರೂ ಛಲ ಬಿಡದೇ ತಮ್ಮ ಎರಡು ಕಾಲುಗಳಿಂದಲೇ ಪರೀಕ್ಷೆ ಬರೆದು ಶಿಕ್ಷಣದ ಮೆಟ್ಟಿಲುಗಳನ್ನು ಏರಿ, ಉನ್ನತ ಶಿಕ್ಷಣವನ್ನೂ ಪೂರೈಸಿದರು. ತಮ್ಮ ದೈಹಿಕ ನ್ಯೂನತೆಯನ್ನು ಮೆಟ್ಟಿನಿಂತು ಇದೀಗ ಖಾಸಗಿ ಉದ್ಯೋಗ ಮಾಡುತ್ತಾ ಸಂಪಾದನೆಯನ್ನೂ ಮಾಡುತ್ತಿದ್ದಾರೆ. ಸದ್ಯ ಅವರು ಮೂಡು ಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ಕಲ್ಯಾಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮತಚಲಾವಣೆ ಸುದ್ದಿ:
ಸಬಿತಾ ಅವರು ಚುನಾವಣೆ ಸಂದರ್ಭದಲ್ಲಿ ಹೊರಜಗತ್ತಿಗೆ ಪರಿಚಯವಾದರು. ಸಾರ್ವತ್ರಿಕ ಚುನಾವಣೆ ಸಂದರ್ಭ ಕಾಲಿನಿಂದಲೇ ಮತ ಚಲಾಯಿಸುವ ಮೂಲಕ ಅವರು ರಾಜ್ಯದ ಗಮನ ಸೆಳೆಯುತ್ತಾರೆ.
ದೃಢ ಮನಸ್ಸಿನಿಂದ ಎಲ್ಲವೂ ಸಾಧ್ಯ:
ಪ್ರಜಾಪ್ರಕಾಶ ಜೊತೆ ಮಾತನಾಡಿದ ಸಾಧಕಿ ಸಬಿತಾ, “ಅಂಗವೈಕಲ್ಯತೆ ಎಂಬುವುದನ್ನು ಮರೆತು ಧೃತಿಗೆಡದೇ ಪ್ರಯತ್ನಪಟ್ಟಲ್ಲಿ ಎಲ್ಲವನ್ನೂ ಸಾಧಿಸಬಹುದು. ದೇಹದ ಅಂಗ ನ್ಯೂನತೆಯ ಬಗ್ಗೆ ಯೋಚಿಸದೇ ಸಾಧಿಸಿದರೆ ಎಲ್ಲವನ್ನೂ ಜಯಿಸಬಹುದು. ಹುಟ್ಟಿನಿಂದಲೇ ನನಗೆ ಕೈಗಳಿಲ್ಲದಿದ್ದರೂ ಕಾಲನ್ನೇ ಕೈಗಳನ್ನಾಗಿಸಿಕೊಂಡು ಅದರಲ್ಲೇ ನನ್ನ ದಿನನಿತ್ಯದ ಕೆಲಸಗಳನ್ನು ಮಾಡುತ್ತೇನೆ. ಅದಲ್ಲದೆ ಎಲ್ಲರಂತೆ ನಾನೂ ವಿದ್ಯಾಭ್ಯಾಸ ಪಡೆದು, ಉತ್ತಮ ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಶಿಕ್ಷಣ ಮುಗಿಸಿ, ಇದೀಗ ನೌಕರಿಯನ್ನೂ ಮಾಡುತಿದ್ದೇನೆ. ಕೈಗಳಿಲ್ಲ ಎಂದು ಧೃತಿಗೆಟ್ಟು ಕುಳಿತಿದ್ದರೆ ನಾನು ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿರಲಿಲ್ಲ, ಈ ನನ್ನ ಪ್ರಯತ್ನಕ್ಕೆ ನಮ್ಮ ಮನೆಯವರು ಶಾಲಾ ಅಧ್ಯಾಪಕರು, ಗೆಳೆಯರು ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತ ಬರುತಿದ್ದಾರೆ” ಎಂದು ಹೇಳಿದರು.
ಮಹಿಳೆಯರಿಗೆ ಗೌರವ ನೀಡಿ:
“ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೋಹನ್ ಆಳ್ವಾ ಅವರು ಉಚಿತ ಶಿಕ್ಷಣ ನೀಡಿದ್ದಾರೆ. ಅದೇ ಕಾಲೇಜಿನಲ್ಲಿ ಉದ್ಯೋಗವನ್ನೂ ಕಲ್ಪಿಸಿಕೊಟ್ಟಿದ್ದಾರೆ. ನನ್ನ ಎಲ್ಲ ಪ್ರಯತ್ನಗಳಿಗೆ ಸಹಕಾರ ನೀಡಿದ ಹಾಗೂ ನನ್ನ ಸಾಧನೆಯನ್ನು ಗುರುತಿಸಿ ಗೌರವಿಸಿದ ಸಂಘ- ಸಂಸ್ಥೆಗಳಿಗೆ ಅಭಿನಂದನೆಗಳು. ಸಮಾಜದಲ್ಲಿ ಪ್ರತಿಯೊಬ್ಬ ಮಹಿಳೆಗೆ ಗೌರವ ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕು. ಮಹಿಳೆಯರೂ ಧೃತಿಗೆಡದೇ ಪ್ರಯತ್ನ ಪಡಬೇಕು, ಆಗ ಪ್ರಯತ್ನಕ್ಕೆ ಫಲ ಸಿಗುತ್ತದೆ ಎಂದರು. ಎಲ್ಲರಿಗೂ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು” ಎಂದು ತಿಳಿಸಿದರು.
ಸವಾಲಾಗಿ ಸ್ವೀಕರಿಸಿದೆವು:
ಮಗಳ ಸಾಧನೆಯ ಬಗ್ಗೆ ಸಬಿತಾ ಮನೆಯವರು ಮಾತನಾಡಿ, “ಮಗಳ ಬಗ್ಗೆ ಹೆಮ್ಮೆ ಇದೆ ಎಲ್ಲವನ್ನೂ ಸವಾಲಾಗಿ ಸ್ವೀಕರಿಸಿ ಇದೀಗ ಪ್ರಶಸ್ತಿಗೆ ಆಯ್ಕೆಯಾಗಿದ್ದು ತುಂಬಾ ಸಂತೋಷ ತಂದಿದೆ” ಎಂದರು.
ನಮ್ಮಲ್ಲಿ ಏನೂ ಸೌಲಭ್ಯವಿಲ್ಲ, ಅವಕಾಶಗಳು ಲಭಿಸಿಲ್ಲ, ಯಾವುದೇ ಸೌಲಭ್ಯಗಳು ಇಲ್ಲ ಎಂದು ಕೊರಗುವ ಮಂದಿಗೆ ಸಬಿತಾ ತಮ್ಮ ಸಾಧನೆಯ ಮೂಲಕ ಪ್ರೇರಣೆಯಾಗುವ ಜೊತೆಗೆ ಸ್ಪೂರ್ತಿಯಾಗಿದ್ದಾರೆ. ಸಬಿತಾ ಅವರ ಸಾಧನೆ ಇನ್ನಷ್ಟು ಮಂದಿಗೆ ದಾರಿದೀಪವಾಗಲಿ, ಸಬಿತಾ ಅವರು ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಲಿ, ಅವರಿಗೆ ಇನ್ನೂ ಹೆಚ್ಚಿನ ಗೌರವ ಸಿಗಲಿ ಎನ್ನುವುದು ಪ್ರಜಾಪ್ರಕಾಶ ನ್ಯೂಸ್ ತಂಡದ ಆಶಯವಾಗಿದೆ. ಎಲ್ಲ ಮಹಿಳೆಯರಿಗೆ “ವಿಶ್ವ ಮಹಿಳಾ ದಿನ” ದ ಶುಭಾಶಯಗಳು.