ಶಿವಮೊಗ್ಗ: ಹುಣಸೋಡು ಗಡಿ ಪ್ರದೇಶದಲ್ಲಿ ಜಿಲೆಟಿನ್ ಕಡ್ಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನು ಮಾಲೀಕ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸ್ಫೋಟ ಸಂಭವಿಸಿದ ಪ್ರದೇಶದ ಕಲ್ಲು ಗಣಿಗಾರಿಕೆ ಜಮೀನು ಮಾಲೀಕ ಅವಿನಾಶ್ ಕುಲಕರ್ಣಿ, ಗುತ್ತಿಗೆದಾರ ಸುಧಾಕರ್ ಹಾಗೂ ಅಕ್ರಮ ಕಲ್ಲು ಗಣಿಗಾರಿಕೆ, ಅಕ್ರಮ ಜಿಲೆಟಿನ್ ಪೂರೈಕೆ ಮಾಡುತ್ತಿದ್ದ ನರಸಿಂಹ ಎಂಬವರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಗುರುವಾರ ರಾತ್ರಿ 10.25 ರ ಸುಮಾರಿಗೆ ಹುಣಸೋಡ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಜಿಲೆಟಿನ್ ತುಂಬಿದ್ದ ಲಾರಿ ಸ್ಫೋಟಗೊಂಡ ಪರಿಣಾಮ ಕಾರ್ಮಿಕರು ಮೃತಪಟ್ಟಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಈ ಘಟನೆಗೆ ಸಂತಾಪ ಸೂಚಿಸಿದ್ದು, ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಹಾರೈಸಿ ಟ್ವೀಟ್ ಮಾಡಿದ್ದಾರೆ.