ಇತಿಹಾಸ ಪ್ರಸಿದ್ಧ ‌ನಾಳ ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಜ.24ರಿಂದ ಜ.30ರವರೆಗೆ ವರ್ಷಾವಧಿ ಜಾತ್ರೆ, ಮಹಾರಥೋತ್ಸವ: ನ್ಯಾಯ ತೀರ್ಪು ನೀಡುತ್ತಿದ್ದ ಕ್ಷೇತ್ರವೆಂಬ ಐತಿಹ್ಯ

 

ನಾಳ: ಸುಮಾರು ಸಾವಿರ ವರ್ಷಗಳ ಇತಿಹಾಸವಿರುವ ನಂಬಿಕೆಯಿರುವ ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ ಜ.24ರಿಂದ ಜ.30ರವರೆಗೆ ನಡೆಯಲಿದೆ.

ಜನವರಿ 24ರಿಂದ ಜನವರಿ 30ರವರೆಗೆ ದೇವಳದ ತಂತ್ರಿಗಳಾದ ಬ್ರಹ್ಮಶ್ರೀ ಬಾಲಕೃಷ್ಣ ಪಾಂಗಾಣ್ಣಾಯರವರ ಮಾರ್ಗದರ್ಶನದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ ಗೇರುಕಟ್ಟೆ ಅವರ ನೇತೃತ್ವದಲ್ಲಿ ನಡೆಯಲಿದೆ. ಜ. 24ರಂದು ರವಿವಾರ ಪೂರ್ವಾಹ್ನ ಗಂಟೆ 10.30ಕ್ಕೆ ಹೊರೆಕಾಣಿಕೆ ಸಮರ್ಪಣೆ, ಪೂರ್ವಾಹ್ನ ಗಂಟೆ 11.30ಕ್ಕೆ ಧ್ವಜಾರೋಹಣ, ಮಧ್ಯಾಹ್ನ ಮಹಾಪೂಜೆ, ನಿತ್ಯ ಬಲಿ, ಅನ್ನಸಂತರ್ಪಣೆ ನಡೆಯಲಿದೆ.‌ ರಾತ್ರಿ ಗಂಟೆ 8ರಿಂದ ದೇವರ ಬಲಿ ಹೊರಟು ಉತ್ಸವ, ವಸಂತಕಟ್ಟೆಯಲ್ಲಿ ಮಹಾಪೂಜೆ – ನಿತ್ಯಬಲಿ, ದೀಪದ ಬಲಿ ನಡೆಯಲಿದೆ.‌ ಅದೇ ರೀತಿ ರಾತ್ರಿ 7 ಗಂಟೆಗೆ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಬಾಚಕೆರೆ, ಸರಪಾಡಿ ಅವರಿಂದ ತುಳು ಯಕ್ಷಗಾನ ಬಯಲಾಟ ‘ಸೂರ್ಯ ಕಾಂತಿ’ ಪ್ರದರ್ಶನ ನಡೆಯಲಿದೆ. ಜ. 25ರಂದು ಸೋಮವಾರ ಬೆಳಗ್ಗೆ ಉಷಾಕಾಲ ಪೂಜೆ, ಅಲಂಕಾರ ಪೂಜೆ, ಮಧ್ಯಾಹ್ನ ಮಹಾಪೂಜೆ ನಿತ್ಯಬಲಿ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 8ರಿಂದ ದೇವರ ಬಲಿ ಹೊರಟು ಕೆರೆಕಟ್ಟೆ ಉತ್ಸವ- ಮಹಾಪೂಜೆ, ನಿತ್ಯಬಲಿ – ದೀಪದ ಬಲಿ ನಡೆಯಲಿದೆ. ಸಂಜೆ ಗಂಟೆ 7 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ನಿರ್ದೇಶನದಲ್ಲಿ ರಾಷ್ಟ್ರದೇವೋಭವ ಖ್ಯಾತಿಯ ಸನಾತನ ನಾಟ್ಯಾಲಯ ಪ್ರಸ್ತುತಪಡಿಸುವ ರಾಷ್ಟ್ರ ಮತ್ತು ಧರ್ಮ ಜಾಗೃತಿ ಹಾಡು ನೃತ್ಯ ನಿರೂಪಣೆಯ ವಿನೂತನ ಪ್ರಸ್ತುತಿ ‘ಪುಣ್ಯಭೂಮಿ ಭಾರತ’ ಪ್ರದರ್ಶನಗೊಳ್ಳಲಿದೆ‌. ಜ. 26 ಮಂಗಳವಾರ ಬೆಳಗ್ಗೆ ಉಷಾಕಾಲ ಪೂಜೆ, ಅಲಂಕಾರ ಪೂಜೆ, ಮಧ್ಯಾಹ್ನ ಮಹಾಪೂಜೆ ನಿತ್ಯಬಲಿ – ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 8ರಿಂದ ದೇವರ ಬಲಿ ಹೊರಟು ಚಂದ್ರಮಂಡಲ ಉತ್ಸವ, ರಥಬೀದಿ ಕಟ್ಟೆ ಪೂಜೆ, ಪ್ರಸಾದ ವಿತರಣೆ, ಮಹಾಪೂಜೆ – ನಿತ್ಯಬಲಿ, ದೀಪದ ಬಲಿ ನಡೆಯಲಿದೆ. ರಾತ್ರಿ ಗಂಟೆ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಂಗಾರ್ ಕಲಾವಿದೆರ್ ಪುರುಷರಕಟ್ಟೆ ಪುತ್ತೂರು ಅಭಿನಯಿಸುವ ತುಳು ಹಾಸ್ಯಮಯ ನಾಟಕ “ನಾಡ್ಂಡಲ ತಿಕ್ಕಂದ್” ಪ್ರದರ್ಶನಗೊಳ್ಳಲಿದೆ‌.

ಜ.27ರಂದು ಬುಧವಾರ ಮಧ್ಯಾಹ್ನ ದರ್ಶನ ಬಲಿ, ಬಟ್ಟಲು ಕಾಣಿಕೆ, ದರ್ಶನ ಪ್ರಸಾದ, ಮಹಾಪೂಜೆ, ಮಧ್ಯಾಹ್ನ 1ಗಂಟೆಗೆ ಮಹಾಅನ್ನಸಂತರ್ಪಣೆ, ಸಂಜೆ 6 ಗಂಟೆಗೆ ಶ್ರೀ ಪಿಲಿಚಾಮುಂಡಿ ಮತ್ತು ಕೊಡಮಣಿತ್ತಾಯಿ ದೈವಗಳ ಭಂಡಾರ ಇಳಿಯುವುದು. ಸಂಜೆ 7 ಗಂಟೆಗೆ ರಥಕಲಶ, ರಾತ್ರಿ 7.30ರಿಂದ ದೇವರ ಬಲಿ ಹೊರಟು ಉತ್ಸವ, ಕೊಡಮಣಿತ್ತಾಯ ದೈವದ ಗಗ್ಗರ ಸೇವೆ, ರಾತ್ರಿ 10.30ಕ್ಕೆ ಮಹಾರಥೋತ್ಸವ ಶ್ರೀ ಭೂತ ಬಲಿ-ಕವಾಟ ಬಂಧನ ನಡೆಯಲಿದೆ‌. ಸಂಜೆ ಗಂಟೆ 7 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ ಆಚಾರ್ಯ ಬಳಗದವರಿಂದ ‘ಸಂಗೀತ ಗಾನ ಸಂಭ್ರಮ’ ನಡೆಯಲಿದೆ.

28ರಂದು ಗುರುವಾರ ಕವಾಟೋದ್ಘಾಟನೆ, ದಿವ್ಯ ದರ್ಶನ, ಮಹಾಪೂಜೆ, ಚೂರ್ಣೋತ್ಸವ ಬಲಿ, ವಿಶೇಷ ಸೇವೆಗಳು (ತುಲಾಭಾರ, ಕೊಡಿಮರಕ್ಕೆ ಜಾನುವಾರು ಒಪ್ಪಿಸುವುದು.) ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಗಂಟೆ 7ಕ್ಕೆ ದೇವರ ಬಲಿ ಹೊರಟು ಬಾಕಿಮಾರು ಗದ್ದೆಯಲ್ಲಿ ಪಿಲಿಚಾಮುಂಡಿ ದೈವದ ಭೇಟಿ ಮತ್ತು ಗಗ್ಗರ ಸೇವೆ, ಅವಭ್ರತ ಸ್ನಾನ, ಧ್ವಜಾವರೋಹಣ, ಮಹಾಪೂಜೆ, ಸಂಜೆ 6 ಗಂಟೆಯಿಂದ ಶ್ರೀ ದುರ್ಗಾಂಭ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲು ಸುರತ್ಕಲ್ “ಸುದರ್ಶನ ವಿಜಯ” ಯಕ್ಷಗಾನ ತಾಳಮದ್ದಳೆ ನಡೆಲಿದೆ. ಜ.29ರಂದು‌ ಬೆಳಗ್ಗೆ ಸಂಪ್ರೋಕ್ಷಣೆ, ಕಲಶಾಭಿಷೇಕ, ಮಹಾಪೂಜೆ. ರಾತ್ರಿ ಗಂಟೆ 8ಕ್ಕೆ ಭಜನಾ ವರ್ಧಂತಿ, ರಾತ್ರಿ ಗಂಟೆ 9.30ಕ್ಕೆ ರಂಗಪೂಜೆ, ಮಹಾ ಮಂತ್ರಾಕ್ಷತೆ ನಡೆಯಲಿದೆ. ಜ. 30ರಂದು‌ ರಾತ್ರಿ ಗಂಟೆ 7ರಿಂದ ಊರ ಹವ್ಯಾಸಿ ಕಲಾವಿದರಿಂದ, ನಾಳ ಕೇಸರಿ ಬಳಗದ ನಿರ್ವಹಣೆಯಲ್ಲಿ ಹರೀಶ ಪಡುಬಿದ್ರಿ ವಿರಚಿತ ತುಳು ನಾಟಕ “ಏಪ ಸುದಾರ್ವರ್’ ಹಾಗೂ ರಾತ್ರಿ ಗಂಟೆ 10.30ರಿಂದ ಊರ ಹವ್ಯಾಸಿ ಹಾಗೂ ಅತಿಥಿ ಕಲಾವಿದರಿಂದ ಯಕ್ಷಗಾನ ಬಯಲಾಟ ‘ಮೋಕ್ಷ ಸಂಗ್ರಾಮ’ ಪ್ರದರ್ಶನಗೊಳ್ಳಲಿದೆ‌.

ಹೊರಕಾಣಿಕೆ:
ಜ. 24ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಸರಿಯಾಗಿ ದೇವಸ್ಥಾನದ ದ್ವಾರದ ಬಳಿಯಿಂದ ದೇವಸ್ಥಾನದವರೆಗೆ ವೈಭವಪೂರ್ಣ ಹೊರಕಾಣಿಕೆ ಮೆರವಣಿಗೆ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೊರಕಾಣಿಕೆಯನ್ನು ಶ್ರೀ ದೇವರಿಗೆ ಅರ್ಪಿಸಲಿದ್ದಾರೆ.

ದೇಗುಲದ ಹಿನ್ನೆಲೆ:
ನ್ಯಾಯತರ್ಪು ಗ್ರಾಮದಲ್ಲಿರುವ ಈ ದೇಗುಲ‌ದಲ್ಲಿ ಬಲ್ಲಾಳ ಅರಸರ ಕಾಲದಲ್ಲಿ ಮುಂದಿರುವ ರಾಜಗೋಪುರದಲ್ಲಿ ವ್ಯಾಜ್ಯಗಳನ್ನು ಪರಿಹರಿಸಿ, ‘ತೀರ್ಪು’ ನೀಡುವ ಕ್ರಮವಿತ್ತು. ಅಲ್ಲಿರುವ ಒಂದು ಕಲ್ಲಿನ ಮೇಲೆ ಕುಳಿತು ಆರೋಪಿಗಳು. ಸತ್ಯವನ್ನು ಹೇಳಿದ ಬಳಿಕ ರಾಜರು ನ್ಯಾಯದ ಬಗೆಗೆ ತೀರ್ಪು ನೀಡುತ್ತಿದ್ದರು. ಮುಂದಕ್ಕೆ ಇದು ‘ನ್ಯಾಯತೀರ್ಪು – ನ್ಯಾಯತರ್ಪು’

ಗ್ರಾಮವೆಂದು ಕರೆಯಲಾಯಿತು ಎಂಬ ಇತಿಹಾಸವಿದೆ.
ನ್ಯಾಯತರ್ಪು, ಕಳಿಯ ಮತ್ತು ಓಡಿಲ್ಲಾಳ ಗ್ರಾಮಗಳಲ್ಲದೆ ಹತ್ತಿರದ ಕಣಿಯೂರು, ಕೊಯ್ಯೂರು, ಕುವೆಟ್ಟು ಮತ್ತು ಮಚ್ಚಿನ ಗ್ರಾಮದ ಆಸುಪಾಸಿಗೂ ಶ್ರೀಕ್ಷೇತ್ರದ ವ್ಯಾಪ್ತಿಯಿದೆ‌.‌

ಹಿಂದೆ ಕಣ್ವಮುನಿಗಳು ತಪಸ್ಸು ಮಾಡುವಾಗ ನೆರಳು ಕೊಟ್ಟಿದ್ದ ಒಂದು ಬೃಹದಾಕೃತಿಯ ರೆಂಜೆಯ ಮರ ಇತ್ತೀಚೆಗಿನ ವರೆಗೂ ದೇವಾಲಯದ ಮುಂಭಾಗದಲ್ಲಿ ಇತ್ತು. ಕ್ಷೇತ್ರದಲ್ಲಿರುವ ವಿಗ್ರಹವನ್ನು ಕಣ್ವಮುನಿಯೇ ಪ್ರತಿಷ್ಠಾಪಿಸಿದರೆಂಬ ಕಥೆಯಿದೆ. ಮಾರ್ಕಂಡೇಯ ಪುರಾಣ ಹೇಳುವ ಪ್ರಕಾರ ವೈಪ್ರಚಿತ್ತ ಎಂಬ ದಾನವನನ್ನು ದೇವಿಯು ವಧಿಸಿದ್ದು ಇಲ್ಲಿಯೇ ಎಂಬ ಸುಂದರ ಕತೆಯಿದೆ. ಇಲ್ಲಿರುವ ವನದುರ್ಗೆ ಅಥವಾ ಮಹಿಷ ಮರ್ದಿನಿಯ ರೂಪದಲ್ಲಿರುವ ದೇವಿಯ ಮನೋಹರ ವಿಗ್ರಹವು ಒಂದು ಕೈಯಲ್ಲಿ ತ್ರಿಶೂಲ ಧಾರಿಣಿಯಾಗಿದೆ. ಶಂಖ, ಚಕ್ರ, ಅಭಯ ಮುದ್ರೆಗಳು ಮೂರು ಕೈಗಳಲ್ಲಿವೆ. ಈ ಕ್ಷೇತ್ರಕ್ಕೆ ಕುಡುಪಿನಿಂದ ಸುಬ್ರಹ್ಮಣ್ಯ ಸ್ವಾಮಿಯು ಬಂದು ಜಾಗ ಬೇಡಿದ್ದ ದೇವಿಯು ಅದಕ್ಕೆ ನಿರಾಕರಿಸಿದ್ದಳು. ಇಲ್ಲಿರುವ ಗೋಪುರದಲ್ಲಿ ಹುತ್ತವೊಂದನ್ನು ತನ್ನ ಸನ್ನಿಧಾನದ ಸಾಕ್ಷ್ಯವಾಗಿ ಉಳಿಸಿ ಸುಬ್ರಹ್ಮಣ್ಯನು ಬಳ್ಳಮಂಜಕ್ಕೆ ತೆರಳಿದ ಎನ್ನುವ ಐತಿಹ್ಯವೂ ಇದೆ. ಅಭಯ ಪ್ರದಾಯಿನಿಯಾದ ದೇವಿ ಭಕ್ತರ ಸಕಲ ಇಷ್ಟಾರ್ಥ ಈಡೇರಿಸುತ್ತಾರೆ ಎಂಬ ನಂಬಿಕೆಯಿದೆ. ವಿವಾಹವಾಗದ ಕನ್ಯೆಯರು ಇಲ್ಲಿಗೆ ಮೂರು ಶುಕ್ರವಾರಗಳಲ್ಲಿ ಬಂದು ದೇವಿಯ ಬಳಿ ಪ್ರಾರ್ಥನೆ ಸಲ್ಲಿಸಿ, ಸ್ವಯಂವರ ಪಾರ್ವತಿ ಪೂಜೆ ಮಾಡಿಸಿದರೆ ಶೀಘ್ರ ವಿವಾಹವಾದ ಉದಾಹರಣೆ, ಮಕ್ಕಳಿಲ್ಲದವರು ತೊಟ್ಟಿಲು ಸೇವೆಯ ಹರಕೆ, ವ್ಯವಹಾರದ ತೊಡಕು ಪರಿಹಾರಕ್ಕೆ ತುಲಾಭಾರದ ಹರಕೆಯಿಂದ ಪರಿಹಾರ ಪಡೆಯುತ್ತಾರೆ ಎನ್ನುತ್ತಾರೆ ಊರಿನ ಹಿರಿಯರು.

ಶುಕ್ರವಾರ, ಸಂಕ್ರಮಣ ಮತ್ತು ಉತ್ಸವದ ಸಂದರ್ಭದಲ್ಲಿ ದೇವಿಯ ಮುಂದೆ ಪ್ರಾರ್ಥಿಸಿದರೆ ಬಹು ಬೇಗನೆ ಎಲ್ಲ ವಿಧದ ಸಮಸ್ಯೆಗಳಿಗೂ ಪರಿಹಾರ ಸಿಗುವುದೆಂಬ ನಂಬಿಕೆ ಭಕ್ತವರ್ಗದಲ್ಲಿದೆ.

ಈ ಕ್ಷೇತ್ರ ಜೀರ್ಣೋದ್ದಾರಗೊಂಡು 2002ರಲ್ಲಿ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶದೊಂದಿಗೆ ನವೀಕರಣಗೊಂಡಿತ್ತು. ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳು ವಿಗ್ರಹ ಪ್ರತಿಷ್ಠಾಪನೆ ನೆರವೇರಿಸಿದ್ದರು. ಬ್ರಹ್ಮಶ್ರೀ ದೇರೆಬೈಲು ಹರಿಕೃಷ್ಣ ತಂತ್ರಿಗಳು ಮಾರ್ಗದರ್ಶನ ನೀಡಿದ್ದರು. ಕೇತ್ರದ ಅಭಿವೃದ್ಧಿಯ ಮುಂದಿನ ಹಂತವಾಗಿ ಕ್ಷೇತ್ರದ ದೈವ ಹಾಗೂ ದೈವಗಳ ಚಕ್ರವರ್ತಿಯೆನಿಸಿಕೊಂಡ ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಗಳಿಗೆ ಮಾಡ್ತಾರು ಗುಡ್ಡೆಯಲ್ಲಿ ದೈವಸ್ಥಾನ ಅಥವಾ ಭಂಡಾರದ ಮನೆ ನಿರ್ಮಿಸಿ ಪ್ರತಿಷ್ಠೆ ಮಾಡಲಾಗಿದೆ. ನಾಗ ದೇವರಿಗೂ ಆರಾಧನೆ ನಡೆಯುತ್ತದೆ. ಗಣಪತಿಗೂ ಚಿಕ್ಕ ಗುಡಿ ನಿರ್ಮಿಸಿ ಪೂಜಿಸಲಾಗುತ್ತಿದೆ. ಎರಡು ವರ್ಷಗಳಿಗೊಮ್ಮೆ ಕ್ಷೇತ್ರದಿಂದ ಭಂಡಾರ ಹೋಗಿ ದೈವಗಳಿಗೆ ಕೋಲ ನಡೆಯುತ್ತದೆ. ಪ್ರತಿ ವರ್ಷ ಜಾತ್ರೆ ಸಂದರ್ಭ ದೇವರ ರಥದ ಮುಂದೆ ದೈವಗಳಿಗೆ ನೇಮೋತ್ಸವ ನಡೆಸುವ ಸಂಪ್ರದಾಯವಿದೆ.

ಕಲಾಪ್ರದರ್ಶನ:
ವರ್ಷವೂ ಜನವರಿ ತಿಂಗಳ ಕೊನೆಗೆ ಇಲ್ಲಿ ವೈಭವದ ರಥೋತ್ಸವ ನಡೆಯುತ್ತದೆ. ಸಂಗೀತ ಪ್ರಿಯಳಾದ ದೇವಿಯ ಸಂಪ್ರೀತಿಗಾಗಿ ಭಜನೆ, ಯಕ್ಷಗಾನ ಬಯಲಾಟ, ನಾಟಕ ಮುಂತಾದ ಕಲಾ ಪ್ರದರ್ಶನಗಳು ಸಂಪನ್ನಗೊಳ್ಳುತ್ತದೆ. ದೇವಿಯ ಮುಂದೆ ಗೆಜ್ಜೆ ಕಟ್ಟಿ ಯಕ್ಷಗಾನ ಪ್ರದರ್ಶಿಸುವ ಕಲಾವಿದರು ಗೆಜ್ಜೆಯನ್ನು ಬಿಚ್ಚುವುದು ಕೂಡ ದೇವಿಯ ಮುಂದೆಯೇ. ನವರಾತ್ರಿ ಸಂದರ್ಭ ಒಂಭತ್ತು ದಿನಗಳ ಕಾಲ ತಾಳಮದ್ದಳೆ, ಶುಕ್ರವಾರ ಭಜನೆ ನಡೆಸಲಾಗುತ್ತದೆ‌. ಹಿಂದೆ ಗ್ರಾಮಸ್ಥರು ಮನೆ ಮನೆಗೂ ತೆರಳಿ ಭಜನೆ ಮಾಡುವ ಸಂಪ್ರದಾಯವನ್ನೂ ಪಾಲಿಸಲಾಗುತ್ತಿತ್ತು.

ಭಕ್ತರಿಂದ ವಿವಿಧ ಸೇವೆ:
ದೇವಿಗೆ ಸಲ್ಲಿಸುವ ಹಲವು ಸೇವೆಗಳಲ್ಲಿ ಮಹಾ ರಂಗಪೂಜೆ ತುಂಬ ವಿಶೇಷವೆನಿಸಿದೆ. ಗರ್ಭಗುಡಿಯ ದ್ವಾರದಿಂದ ಧ್ವಜಸ್ಥಂಭದ ವರೆಗೆ ಅಗೇಲು ಬಡಿಸುವ ವಿಶಿಷ್ಟ ಸೇವೆ ಇದು. ಚಿಕ್ಕ ರಂಗಪೂಜೆ, ಹೂವಿನ ಪೂಜೆ, ಕುಂಕುಮಾರ್ಚನೆ, ಅಪ್ಪದ ಪೂಜೆ, ದುರ್ಗಾ ಪೂಜೆ, ದುರ್ಗಾ ನಮಸ್ಕಾರ, ಕರ್ಪೂರಾರತಿ ಹೀಗೆ ಭಕ್ತರಿಗೆ ಇಷ್ಟವಾದ ಅರ್ಚನೆಗಳಿಗೆ ಅವಕಾಶವಿದೆ. ಊರಿನ ರೈತರು ಹೊಸ ಅಕ್ಕಿಯನ್ನು ಬೆಳೆದಾಗ ದೇವಿಯ ಗುಡಾನ್ನ ಸಮರ್ಪಣೆಗೆ ತಂದುಕೊಡುತ್ತಾರೆ.

2010ರಲ್ಲಿ ಕೇತ್ರದ ಇತಿಹಾಸದಲೇ ಸುವರ್ಣಾಕ್ಷರದಲ್ಲಿ ಬರೆದಿಡುವಂತ ದಾಖಲೆ ಅವಧಿಯಲ್ಲಿ ನೂತನ ರಥ ಸಮರ್ಪಣೆ ಹಾಗೂ ಧ್ವಜಸ್ತಂಭದ ಪ್ರತಿಷ್ಠೆ ನಡೆದಿದೆ. ಸುತ್ತು ಪೌಳಿ ನಿರ್ಮಾಣವಾಗಿದೆ. ಅಭಿವೃದ್ಧಿಯ ಹೊಸ ಶಕೆಯೇ ಮೇಳವಿಸಿದೆ. ಈ ಎಲ್ಲಾ ಕಾರ್ಯಗಳಿಂದ ನಾಳ ಕೇತ್ರವು ಅಭಿವೃದ್ಧಿ ಹೊಂದಿ, ಕ್ಷೇತ್ರದ ಸಾನಿಧ್ಯವು ವೃದ್ಧಿಯಾಗಿ ಹೆಚ್ಚಿನ ಭಕ್ತವೃಂದವನ್ನು ತನ್ನತ್ತ ಸೆಳೆಯುತ್ತಿದೆ.

error: Content is protected !!