ಬಿ.ಜೆ.ಪಿ.ಯಿಂದ ಗ್ರಾ.ಪಂ. ಚುನಾವಣೆಯಲ್ಲಿ ಅಕ್ರಮ: ಮಾಜಿ‌ ಶಾಸಕ ವಸಂತ ಬಂಗೇರ ಆರೋಪ: ನ್ಯಾಯಕ್ಕಾಗಿ ಕಾನತ್ತೂರಿನಲ್ಲಿ‌ ಪ್ರಾರ್ಥನೆ

ಬೆಳ್ತಂಗಡಿ: ತಾಲೂಕಿನಲ್ಲಿ ಶಾಸಕರ ತಾಳಕ್ಕೆ ತಕ್ಕಂತೆ ಅಧಿಕಾರಿಗಳು ಕುಣಿಯುತ್ತಿದ್ದು ಜನ ಸಾಮಾನ್ಯರು ತೊಂದರೆ ಪಡುವಂತಾಗಿದೆ. ತಾಲೂಕಿಗೆ ತಾವೇ ಹೈಕಮಾಂಡ್ ಎಂಬಂತೆ ಶಾಸಕರು ವರ್ತಿಸುತ್ತಿದ್ದು, ಅಧಿಕಾರಿಗಳ ಮೂಲಕ ತನ್ನ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಇದನ್ನು ಸಹಿಸಿಕೊಳ್ಳುವುದಿಲ್ಲ ಎಂದು ಮಾಜಿ‌ ಶಾಸಕ ಕೆ. ವಸಂತ ಬಂಗೇರ ಹೇಳಿದರು.

ಅವರು ಕಾಂಗ್ರೆಸ್ ಹಾಗೂ ತಾಲೂಕಿನ ವಿವಿಧ ಸಂಘಟನೆಗಳಿಂದ ಬೆಳ್ತಂಗಡಿ ಮಿನಿ ವಿಧಾನ ಸೌಧ ವಠಾರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದರು.‌

ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ತಾಲೂಕಿನಲ್ಲಿ ‌ಅಕ್ರಮಗಳು ನಡೆದಿದೆ. ಮತ ಪೆಟ್ಟಿಗೆಗಳನ್ನು ಇಡುವ ಕೋಣೆಗಳಿಗೆ ಯಾರಿಗೂ ಪ್ರವೇಶ ಇರುವುದಿಲ್ಲ. ಆದರೂ ಕೆಲವರು ಬಿಜೆಪಿಗರು ಆ ಕೋಣೆಯೊಳಗೆ ಹೋಗಿದ್ದಾರೆ. ಮತ ಎಣಿಕೆ ಸಂದರ್ಭ ಗೊಂದಲದ ಬಗ್ಗೆ ಚುನಾವಣಾಧಿಕಾರಿಗಳಿಗೆ ವಿಚಾರ ತಿಳಿಸಿದಾಗ ಅವರು ಸರಿಯಾದ ಕ್ರಮಕೈಗೊಂಡಿಲ್ಲ.‌ ಇದು ಖಂಡನೀಯ. ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ಹಾಗೂ ತಹಶೀಲ್ದಾರ್ ಮೊದಲಾದವರು ಶಾಸಕರ ಭಂಟರಂತೆ ವರ್ತಿಸುತಿದ್ದಾರೆ. ಇವರೇ ಈ ಅಕ್ರಮಕ್ಕೆ ಕಾರಣ. ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ, ಸತ್ಯ ಪ್ರಮಾಣಕ್ಕೆ ಹೆಸರುವಾಸಿಯಾದ ಕೇರಳದ ಕಾನತ್ತೂರಿಗೆ ಹೋಗಿ ಪ್ರಾರ್ಥಿಸುತ್ತೇವೆ. ಅಕ್ರಮ ಎಸಗಿದವರ ವಿರುದ್ಧ ದೈವದ ಮೊರೆ ಹೋಗಲಾಗುವುದು ಎಂದರು.

ಬಳೆಂಜ ಗ್ರಾ.ಪಂ. ಮತಪೆಟ್ಟಿಗೆಯಲ್ಲಿ ಬೇರೆ ಪಂಚಾಯತ್ ಸಂಬಂಧ ಪಟ್ಟ ಮತಪತ್ರ ಪತ್ತೆಯಾಗಿದೆ. ಕೆಲವು ಭಾಗದ ಮತ ಪೆಟ್ಟಿಗೆಯಲ್ಲಿ ಐದಾರು ಮತ ಪತ್ರಗಳನ್ನು ಒಟ್ಟಿಗೆ ಮಡಚಿ ಹಾಕಿದ ರೀತಿಯಲ್ಲಿ ಪತ್ತೆಯಾಗಿದೆ. ಅದೂ ಕೂಡ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಚಲಾವಣೆಯಾದ ಮತ ಪತ್ರಗಳು. ಮತಪೆಟ್ಟಿಗೆಯನ್ನು ಕಟ್ಟಿದ ಹಗ್ಗವನ್ನೂ ಬದಲಾಯಿಸಲಾಗಿದೆ ಎಂದು ಆರೋಪಿಸಿದರು.

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಬಿಜೆಪಿ ಸರಕಾರ ರಾಮನ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದು, ಶ್ರೀ ರಾಮನನ್ನು ಬೀದಿಗೆ ತಂದಿದೆ. ಈ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ‌. ಜನತೆ ಈ ಬಗ್ಗೆ ಯೋಚಿಸಬೇಕು ಎಂದರು.

ಪ್ರತಿಭಟನೆ ಬಳಿಕ ಮತಪತ್ರ ಅಕ್ರಮದ ಬಗ್ಗೆ ಚುನಾವಣಾ ಆಯೋಗಕ್ಕೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಗಂಗಾಧರ ಗೌಡ, ಮುಖಂಡರಾದ ಬಿ.ಎಮ್ ಭಟ್, ರಂಜನ್ ಜಿ. ಗೌಡ, ಶೈಲೇಶ್ ಕುಮಾರ್ ಕುರ್ತೋಡಿ ಮೊದಲಾದವರು ಉಪಸ್ಥಿತರಿದ್ದರು.

error: Content is protected !!