ಬೆಳ್ತಂಗಡಿ: ಉಜಿರೆಯಲ್ಲಿ ದೇಶದ್ರೋಹಿ ಘೋಷಣೆ ಕೂಗಿದ ಎಸ್.ಡಿ.ಪಿ.ಐ. ವಿರುದ್ಧ ವಿಶ್ವ ಹಿಂದೂ ಪರಿಷತ್, ಬಜರಂಗದಳ ಬೆಳ್ತಂಗಡಿ ಪ್ರಖಂಡದಿಂದ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಯಿತು. ದೂರು ದಾಖಲಿಸಿ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವಂತೆ ಆಗ್ರಹಿಸಲಾಯಿತು. ಬಂಧಿಸದಿದ್ದಲ್ಲಿ ತಾಲೂಕಿನಲ್ಲಿ ಸಂಘಟನೆ, ಹಿಂದೂ ಸಮಾಜ, ದೇಶಪ್ರೇಮಿಗಳೊಂದಿಗೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ವಿ.ಹಿಂ.ಪ ತಾ. ಅಧ್ಯಕ್ಷ, ನ್ಯಾಯವಾದಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ಪತ್ರಿಕಾ ಹೇಳಿಕೆ ನೀಡಿ, ಮತ ಎಣಿಕೆ ಕೇಂದ್ರದ ಎದುರೇ ಎಸ್.ಡಿ.ಪಿ.ಐ ಪರ ವ್ಯಕ್ತಿಗಳು ವೈರಿ ದೇಶ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು, ಈ ರಾಷ್ಟ್ರದ್ರೋಹದ ಕೃತ್ಯವೆಸಗಿರುವ ಅವರು ಗೆಲ್ಲಿಸಿದ ಅಭ್ಯರ್ಥಿಗಳ ಮನಸ್ಥಿತಿ ಹೇಗಿರಬಹುದೆಂದು ಊಹಿಸಬಹುದು. ಆದುದರಿಂದ ವಿಜೇತರಾಗಿರುವ ಎಲ್ಲ ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿಗಳ ಸದಸ್ಯತ್ವವನ್ನು ಪ್ರಜಾಸತ್ತಾತ್ಮಕ ಕಾಯ್ದೆಯಡಿ ರದ್ದುಪಡಿಸಬೇಕು. ಈ ಬಗ್ಗೆ ಭಜರಂಗದಳ ಮತ್ತು ವಿ.ಹಿಂ.ಪ ವತಿಯಿಂದ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ವಿವರ ನೀಡಿದರು.
ಆರೋಪಿಗಳು ಮಾಡಿದ ದೇಶದ್ರೋಹದ ಕೃತ್ಯ ಜನಸಾಮಾನ್ಯರಲ್ಲಿ ರಾಷ್ಟ್ರದ ಗೌರವಕ್ಕೆ ಕುಂದುಂಟಾಗುವ ಸಾಧ್ಯತೆ ಹೇರಳವಾಗಿದೆ. ಇದನ್ನು ಸಂಘಟನೆ ಉಗ್ರವಾಗಿ ಖಂಡಿಸುತ್ತದೆ ಎಂದರು.
ವಿಹಿಂಪ ಪುತ್ತೂರು ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ಆರೋಪಿಗಳ ವಿರುದ್ಧ 24 ಗಂಟೆಯೊಳಗೆ ಕ್ರಮ ಜರುಗದೇ ಇದ್ದಲ್ಲಿ ಜಿಲ್ಲೆಯಾಧ್ಯಂತ ಹೋರಾಟ ಸಂಘಟಿಸಲಾಗುವುದು ಎಂದರು. ಈ ವೇಳೆ ಠಾಣೆಗೆ ದೂರು ನೀಡಿದ ಮೋಹನ್ ಬೆಳ್ತಂಗಡಿ, ಜಿಲ್ಲಾ ಸಹ ಕಾರ್ಯದರ್ಶಿ ನವೀನ್ ನೆರಿಯ, ಪ್ರಮುಖರಾದ ರಮೇಶ್, ದಿನೇಶ್, ಸಂತೋಷ್, ಶ್ರೀಧರ ಗುಡಿಗಾರ್ ಮೊದಲಾದವರು ಉಪಸ್ಥಿತರಿದ್ದರು.
ತಾಲೂಕು ಕಾರ್ಯದರ್ಶಿ ಮೋಹನ ಬೆಳ್ತಂಗಡಿ, ತಾಲೂಕು ಬಜರಂಗದಳ ಸಹ ಸಂಯೋಜಕ ರಮೇಶ್ ಧರ್ಮಸ್ಥಳ, ತಾಲೂಕು ಗೋ ರಕ್ಷಾ ಪ್ರಮುಖ್ ದಿನೇಶ್ ಚಾರ್ಮಾಡಿ, ವಿಶ್ವ ಹಿಂದೂ ಪರಿಷತ್ ತಾಲೂಕು ಉಪಧ್ಯಕ್ಷ ಶ್ರೀಧರ ಗುಡಿಗಾರ್ ಉಪಸ್ಥಿತರಿದ್ದರು.