ಬೆಳ್ತಂಗಡಿ: ನಮ್ಮ ಎಸ್.ಡಿ.ಪಿ.ಐ. ಪಕ್ಷದ ಅಭ್ಯರ್ಥಿಗಳು ಜಯಗಳಿಸುವ ವೇಳೆ ಸಹಜವಾಗಿಯೇ ನಮ್ಮ ಕಾರ್ಯಕರ್ತರು ಉತ್ಸಾಹದಿಂದ ಪಕ್ಷದ ಪರ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. ಆದರೆ ವೀಡಿಯೋದಲ್ಲಿರುವ ಘೋಷಣೆಗೂ, ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ಪಕ್ಷ ದೇಶದ್ರೋಹದ ಕೆಲಸ ಎಂದೂ ಮಾಡುವುದಿಲ್ಲ ಮತ್ತು ಅದನ್ನು ನಾವು ಕಲಿಸುವುದೂ ಇಲ್ಲ ಎಂದು ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹೈದರ್ ನೀರ್ಸಾಲ್ ಹೇಳಿದ್ದಾರೆ.
ಉಜಿರೆಯ ಮತ ಎಣಿಕೆ ಕೇಂದ್ರದ ಬಳಿ ಎಸ್.ಡಿ.ಪಿ.ಐ ಪರ ವ್ಯಕ್ತಿಗಳು ಪಾಕಿಸ್ತಾನಕ್ಕೆ ಜೈಕಾರ ಕೂಗಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಮಾಧ್ಯಮ ಜೊತೆ ಮಾತನಾಡಿದರು.
ಈ ಬಾರಿಯ ಚುನಾವಣೆಯಲ್ಲಿ ಎಸ್.ಡಿ.ಪಿ.ಐ, ತಾಲೂಕು ಮತ್ತು ಇತರೆಡೆಗಳಲ್ಲಿ ನಿರೀಕ್ಷೆಗಿಂತಲೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದ್ದು, ಈ ಬೆಳವಣಿಗೆ ಸಹಿಸದೆ ಕೆಲವರು ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. ವೀಡಿಯೋ ತಿರುಚಿದ ಮತ್ತು ಈ ಪ್ರಕರಣದ ಹಿಂದಿರುವವ ನಿಜವಾದ ಆರೋಪಿತರರನ್ನು ಪೊಲೀಸರು ಪತ್ತೆಹಚ್ಚಲಿ ಹಾಗೂ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಿ ಎಂದರು.
ಈ ಸಂದರ್ಭ ಅಕ್ಬರ್ ಬೆಳ್ತಂಗಡಿ, ಶಾಫಿ, ಅಶ್ರಫ್ ಕಟ್ಟೆ, ಫಝಲ್ ಉಜಿರೆ ಮೊದಲಾದವರು ಉಪಸ್ಥಿತರಿದ್ದರು.