
ಬೆಳ್ತಂಗಡಿ: ತೀವ್ರ ಸಂಚಲನ ಮೂಡಿಸಿದ್ದ ಕಾಲೇಜು ವಿದ್ಯಾರ್ಥಿನಿ ಅಪಹರಣ ಯತ್ನ ಪ್ರಕರಣ ಇದೀಗ ತಿರುವು ಪಡೆದುಕೊಂಡಿದೆ. ಬೆಳ್ತಂಗಡಿ ಜ್ಯೂನಿಯರ್ ಕಾಲೇಜು ಬಳಿಯ ಸುದೆಮುಗೇರು ರಸ್ತೆಯಲ್ಲಿ ಕಾಲೇಜು ವಿದ್ಯಾರ್ಥಿನಿ ಎಂದಿನಂತೆ ಸೋಮವಾರ ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿ ತೆರಳುತಿದ್ದ ವೇಳೆ ಒಮ್ನಿ ಕಾರಿನಲ್ಲಿ ಮೂವರು ಮುಸುಕುಧಾರಿಗಳು ಆಕೆಯನ್ನು ಅಡ್ಡಗಟ್ಟಿ ಕಾರಿನೊಳಗೆ ಎಳೆಯಲು ಪ್ರಯತ್ನಿಸಿದ್ದು ಈ ವೇಳೆ ದ್ವಿಚಕ್ರ ವಾಹನವೊಂದು ಬರುತ್ತಿರುವುದನ್ನು ಕಂಡ ಮುಸುಕುಧಾರಿಗಳು ಅವಳಿಗೆ ಮೂರು ಕಡೆ ಚೂರಿಯಿಂದ ಹಲ್ಲೆ ಗೈದು ಪರಾರಿಯಾಗಿದ್ದಾರೆ ಎಂಬ ದೂರು ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿತ್ತು. ಈ ಪ್ರಕರಣದ ಗಂಭೀರತೆಯನ್ನು ಅರಿತ ಶಾಸಕ ಹರೀಶ್ ಪೂಂಜ ಆಸ್ಪತ್ರೆಗೆ ತೆರಳಿ ವಿದ್ಯಾರ್ಥಿನಿಯ ಆರೋಗ್ಯ ವಿಚಾರಿಸಿದರಲ್ಲದೇ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸೂಚಿಸಿದ್ದರು. ಅದಾಗಲೇ ಬೆಳ್ತಂಗಡಿ ಪೊಲೀಸರು ಕಾರ್ಯಪ್ರವೃತ್ತರಾಗಿ ಎಲ್ಲೆಡೆ ಇರುವ ಸಿ.ಸಿ ಕ್ಯಾಮಾರಗಳು ಹಾಗೂ ವಾಹನಗಳನ್ನು ತಪಾಸಣೆಗೊಳಪಡಿಸಿದರು. ಅದರೆ ಇದೀಗ ಈ ಪ್ರಕರಣ ತಿರುವು ಪಡೆದುಕೊಂಡಿದ್ದು ಇದೊಂದು ಪೂರ್ವ ಯೋಚಿತ ಕೃತ್ಯ ಎಂಬ ವಿಚಾರ ವಿಚಾರಣೆ ವೇಳೆ ತಿಳಿದು ಬಂದಿದೆ. ವಿದ್ಯಾರ್ಥಿನಿಗೆ ಮಂಗಳೂರಿನ ಕಾಲೇಜಿಗೆ ತೆರಳಲು ಮನಸ್ಸಿದ್ದು ಮನೆಯವರು ಸ್ಥಳೀಯ ಕಾಲೇಜಿಗೆ ಸೇರಿಸಿರುವ ಕಾರಣದಿಂದಾಗಿ ಈ ರೀತಿ ಮಾಡಿಕೊಂಡಿರುವ ಮಾಹಿತಿ ಲಭ್ಯವಾಗಿದೆ.