ಚಿಕ್ಕಮಗಳೂರು: ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಅವರು ಡಿ.28ರಂದು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ವಿಧಾನ ಪರಿಷತ್ ಅಧಿವೇಶನದಲ್ಲಿ ನಡೆದ ಪ್ರಕರಣದಿಂದ ಅವಮಾನಗೊಂಡು ಇಂತಹ ನಿರ್ಧಾರಕ್ಕೆ ಬಂದರೇ ಎಂಬ ಅನುಮಾನ ಮೂಡುತ್ತಿದೆ. ಇದನ್ನು ಸ್ಪಷ್ಟೀಕರಿಸುವಂತೆ, ಡೆತ್ ನೋಟ್ ನಲ್ಲೂ ಈ ವಿಚಾರ ಉಲ್ಲೇಖಿಸಲಾಗಿದೆ ಎಂಬ ವಿಚಾರ ಲಭಿಸಿದೆ.
ಸಂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು:
ರಾಜ್ಯವನ್ನೇ ತಲ್ಲಣಗೊಳಿಸಿರುವ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ವಿಧಾನ ಪರಿಷತ್ ಅವರ ಆತ್ಮಹತ್ಯೆ ಪ್ರಕರಣದಿಂದ ನೊಂದು ಇಂತಹಾ ನಿರ್ಧಾರಕ್ಕೆ ಬಂದರು ಎನ್ನಲಾಗುತ್ತಿದೆ. ಡಿ.28ರಂದು ಮಧ್ಯಾಹ್ನ ಚಿಕ್ಕಮಗಳೂರು ನಗರದಲ್ಲಿ ಹಮ್ಮಿಕೊಂಡಿದ್ದ ಯುವಜನೋತ್ಸವದಲ್ಲಿ ಧರ್ಮೇಗೌಡ ಅವರು ಲವಲವಿಕೆಯಿಂದ ಪಾಲ್ಗೊಂಡಿದ್ದರು. ಆದರೆ ಸಂಜೆ ಅಷ್ಟು ಉತ್ಸಾಹದಿಂದ ಇರಲಿಲ್ಲ. ಕಾರ್ಯಕ್ರಮದ ಸ್ಥಳದಿಂದ ಸಖರಾಯಪಟ್ಟಣದ ತಮ್ಮ ತೋಟದ ಮನೆಗೆ ತೆರಳಿದ್ದರು. ಬಳಿಕ ಅಲ್ಲಿಂದ ಬಾಣವಾರಕ್ಕೆ ತೆರಳಿ ಡೆತ್ ನೋಟ್ ಸಿದ್ದಪಡಿಸಿದ್ದರು ಎನ್ನಲಾಗುತ್ತಿದೆ.
ರೈಲ್ವೆ ಹಳಿ ಬಳಿ ಶವ ಪತ್ತೆ:
ಧರ್ಮೇ ಗೌಡ ಅವರು ಡಿ.28ರಂದು ಸಂಜೆ ರೈಲ್ವೆ ಟ್ರ್ಯಾಕ್ ಬಳಿ ಆಗಮಿಸಿ, ಸ್ಥಳೀಯರ ಜೊತೆ ಮಾತನಾಡಿ, ವಾಪಸಾಗಿದ್ದರು. ಆದರೆ ಸುಮಾರು ಎರಡು ತಾಸಿನ ಬಳಿಕ ತಮ್ಮ ಕಾರಿನಲ್ಲಿ ಕಡೂರಿನ ಗುಣಸಾಗರದ ಬಳಿ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿಗೆ ತಲೆ ಕೊಟ್ಟು ಸಾವನ್ನಪ್ಪಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಧರ್ಮೇ ಗೌಡ ಅವರು ರಾತ್ರಿಯಾದರೂ ವಾಪಸ್ ಬಾರದಿರುವುದರಿಂದ ಆತಂಕಗೊಂಡ ಸಿಬ್ಬಂದಿ, ಮೊಬೈಲ್ ಗೆ ಕರೆ ಮಾಡಿದ್ದಾರೆ. ಈ ಸಂದರ್ಭ ಸಂದರ್ಭ ಸ್ವಿಚ್ ಆಫ್ ಸಂದೇಶ ಬರುತ್ತಿತ್ತು. ಕೂಡಲೇ ಎಲ್ಲೆಡೆ ಹುಡುಕಾಟ ಆರಂಭಿಸಲಾಗಿದೆ. ಆದರೆ ರಾತ್ರಿ ಒಂದು ಗಂಟೆ ಸುಮಾರಿಗೆ ಗುಣಸಾಗರದ ಹತ್ತಿರದ ರೈಲ್ವೇ ಹಳಿ ಬಳಿ ಧರ್ಮೇ ಗೌಡ ಅವರ ದೇಹ ಮೂರು ಭಾಗವಾಗಿ ಛಿದ್ರವಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತ ದೇಹದ ಮರಣೋತ್ತರ ಪರೀಕ್ಷೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದು, ಅವರ ಹುಟ್ಟೂರು ಸಖರಾಯಪಟ್ಟಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿದೆ.
ಕ್ಷಮಿಸುವಂತೆ ಕೋರಿಕೆ:
ಪತ್ತೆಯಾದ ಪತ್ರದಲ್ಲಿ ವಿಧಾನ ಪರಿಷತ್ ನಲ್ಲಿ ನಡೆದ ಘಟನೆ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಅರ್ಧಕ್ಕೆ ನಿಂತಿರುವ ಮನೆ ಪೂರ್ಣಗೊಳಿಸಲು ಬೇಕಾದ ಹಣಕಾಸು ವ್ಯವಸ್ಥೆ ಮಾಹಿತಿಯನ್ನೂ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ನಿರ್ಧಾರವನ್ನು ಕ್ಷಮಿಸುವಂತೆ ಪತ್ನಿ ಹಾಗೂ ಮಕ್ಕಳಲ್ಲಿ ಕೋರಿದ್ದಾರೆ ಎಂದೂ ಹೇಳಲಾಗುತ್ತಿದೆ.
ಮುಜುಗರ ತಂದಿದ್ದ ಘಟನೆ:
ವಿಧಾನ ಪರಿಷತ್ ಅಧಿವೇಶನ ಸಂದರ್ಭ ಸಭಾಪತಿ ಪೀಠದಲ್ಲಿ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರು ಕುಳಿತುಕೊಳ್ಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ವಿರೋಧಿಸಿದ್ದರು. ಜೊತೆಗೆ ಧರ್ಮೇಗೌಡ ಅವರನ್ನೂ ಎಳೆದಾಡಿದ್ದರು. ಇದು ರಾಜ್ಯಾದ್ಯಂತ ಸುದ್ದಿಯಾಗುವ ಜೊತೆಗೆ ತೀವ್ರ ಮುಜುಗರವನ್ನು ಉಂಟು ಮಾಡಿತ್ತು, ಇದರಿಂದಲೇ ಆತ್ಮಹತ್ಯೆಗೆ ಶರಣಾದರೇ ಎಂಬ ಅನುಮಾನವನ್ನು ಧರ್ಮೇಗೌಡ ಅವರ ಆಪ್ತರು ತಿಳಿಸುತ್ತಿದ್ದಾರೆ.
ಮಾಜಿ ಶಾಸಕ ದಿವಂಗತ ಎಸ್.ಆರ್.ಲಕ್ಷ್ಮಯ್ಯ ಅವರ ಪುತ್ರರಾಗಿದ್ದ ಧರ್ಮೇಗೌಡ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಆಪ್ತರಾಗಿದ್ದರು. ಜಿ.ಪಂ.ಸದಸ್ಯರಾಗಿ, ಶಾಸಕರಾಗಿ , ಡಿ.ಸಿ.ಸಿ ಬ್ಯಾಂಕ್ ನ ನಿರ್ದೇಶಕ ರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ವಿಧಾನಪರಿಷತ್ ಉಪ ಸಭಾಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ಉಪಸಭಾಪತಿ ಧರ್ಮೇಗೌಡ ಅವರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಪ್ರಧಾನಿ ಹೆಚ್.ಡಿ. ದೇವೇ ಗೌಡ ಸೇರಿದಂತೆ ನಾಡಿನ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮೃತರು ಪತ್ನಿ ಮಮತಾ ಮಗ ಸೋನಾಲ್, ಮಗಳು ಸಾಲೋನಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಸೇರಿದಂತೆ ಬಂಧು- ಬಳಗವನ್ನು ಅಗಲಿದ್ದಾರೆ.