ಬೆಳ್ತಂಗಡಿ: ತಾಲೂಕಿನ 46 ಗ್ರಾ.ಪಂ.ಗಳ 624 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಡಿ.30ರಂದು ಮತ ಎಣಿಕೆ ನಡೆದು ಆಯ್ಕೆಯಾದ ಜನಪ್ರತಿನಿಧಿಗಳ ವಿವರ ಹೊರಬೀಳಲಿದೆ.
ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ. ಈಗಾಗಲೇ ಮತ ಪಟ್ಟಿಗೆಗಳನ್ನು ಮಸ್ಟರಿಂಗ್ ಕೇಂದ್ರವಾದ ಎಸ್.ಡಿ.ಎಂ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಇಡಲಾಗಿದೆ. ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳು ಮತ ಎಣಿಕೆ ಪ್ರಕ್ರಿಯೆಗೆ ಪೂರ್ವ ತಯಾರಿ ನಡೆಸಿದ್ದಾರೆ. ಈಗಾಗಲೇ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿ ಅಥವಾ ಅಭ್ಯರ್ಥಿಯ ಏಜೆಂಟ್ ಗೆ ಮತಎಣಿಕೆ ಸಂದರ್ಭದಲ್ಲಿ ಹಾಜರಾಗಲು ಪಾಸ್ ನೀಡಲಾಗಿದೆ.
ಬೆಳ್ತಂಗಡಿ ತಾಲೂಕಿನ 46 ಗ್ರಾ.ಪಂ.ಗಳ 624 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಒಟ್ಟು 1,439 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅಂತಿಮವಾಗಿ ಡಿ.30ರಂದು ಮಧ್ಯಾಹ್ನದ ಬಳಿಕ ಆಯ್ಕೆಯಾದವರ ಸ್ಪಷ್ಟ ಮಾಹಿತಿ ಲಭಿಸಲಿದೆ.
ರಾಜ್ಯದಲ್ಲಿ 5,728 ಗ್ರಾಮಪಂಚಾಯಿತಿಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆದಿದೆ. ಎರಡು ಹಂತಗಳಲ್ಲಿ ಒಟ್ಟು 226 ತಾಲೂಕುಗಳ 5,728 ಗ್ರಾಮಪಂಚಾಯಿತಿಗಳ 82,616 ಸ್ಥಾನಗಳಿಗೆ ನಡೆದ ಚುನಾವಣೆ ನಡೆದಿದ್ದು, ಮತ ಎಣಿಕೆ ನಾಳೆ ನಡೆಯಲಿದೆ.