ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಅನೇಕ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅದರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಶಾಲೆಗಳಿಗೆ ಪೀಠೋಪಕರಣ ನೀಡುವ ಕಾರ್ಯಕ್ರಮ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ನಿರತರಾಗಲು, ಕುಳಿತುಕೊಳ್ಳಲು ಅನುಕೂಲವಾಗುವಂತೆ ಪರಿಸರಕ್ಕೆ ಹಾನಿಯಾಗದೇ ಅದರ ಉಳಿವಿಗಾಗಿ ಪೈಬರ್‌ನಿಂದ ನಿರ್ಮಾಣ ಮಾಡಿದ ಬೆಂಚ್-ಡೆಸ್ಕ್‌ಗಳನ್ನು ಕೊಪ್ಪಳ ಪ್ರಾದೇಶಕ ವ್ಯಾಪ್ತಿಯ 6 ಜಿಲ್ಲೆಗಳ 287 ಶಾಲೆಗಳಿಗೆ 2,550 ಜೊತೆ ಕಳುಹಿಸಿಕೊಡಲಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕೊಪ್ಪಳ ಪ್ರಾದೇಶಿಕ ವ್ಯಾಪ್ತಿಯ 6 ಜಿಲ್ಲೆಗಳ 287 ಶಾಲೆಗಳಿಗೆ 2,550 ಜೊತೆ ಬೆಂಚ್ ಡೆಸ್ಕ್ ಪೀಠೋಪಕರಣ ಹಸ್ತಾಂತರ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ, ಬಳಿಕ ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ ವಿಭಾಗದಿಂದ ಶಾಲೆಗಳಿಗೆ ಪೀಠೋಪಕರಣ ಕೊಡುವ ಕಾರ್ಯಕ್ರಮವೂ ಒಂದು. ಕೆಲವೊಂದು ಶಾಲೆಗಳಲ್ಲಿ ವಿದ್ಯಾರ್ಥಿಗಳು ನೆಲದಲ್ಲಿಯೋ, ಹಳೆಯ ಪೀಠೋಪಕರಣದಲ್ಲಿ ಕುಳಿತುಕೊಂಡು ವ್ಯಾಸಂಗ ಮಾಡುವ ಬದಲು ಒಳ್ಳೆಯ ಬೆಂಚ್, ಡೆಸ್ಕ್‌ಗಳಲ್ಲಿ ಕುಳಿತು ಚೆನ್ನಾಗಿ ಅಧ್ಯಯನ ಮಾಡಬೇಕು. ಈ ನಿಟ್ಟಿನಲ್ಲಿ ಧ.ಗ್ರಾ ಯೋಜನೆಯು ವತಿಯಿಂದ ಶಾಲೆಗಳಿಗೆ ಪೀಠೋಪಕರಣ ಒದಗಿಸಲಾಗುತ್ತಿದೆ. ಅದಕ್ಕಾಗಿ ಯೋಜನೆಯಿಂದ ಪೀಠೋಪಕರಣವನ್ನು ಒದಗಿಸಲಾಗುತ್ತಿದೆ. ಇದನ್ನು ಮರಕ್ಕೆ ಪರ್ಯಾಯವಾಗಿ ಪೈಬರ್‌ನಿಂದ ನಿರ್ಮಿಸಲಾಗಿದ್ದು, ದೀರ್ಘಕಾಲ ಬಾಳಿಕೆ ಬರುತ್ತದೆ. ಮರ ಉಳಿಸಿ, ದೇಶ ಉಳಿಸಿ ಅಂತ ಹೇಳುತ್ತೇವೆ. ಕಾಡಿನಲ್ಲಿರುವ ಮರಗಳನ್ನು ಬಳಸಿಕೊಂಡು ಪೀಠೋಪಕರಣ ಮಾಡುವ ಬದಲು ಪರಿಸರ ಉಳಿಸಿ ಎಂಬ ಧ್ಯೇಯದೊಂದಿಗೆ ಪೈಬರಿನಿಂದ ಮಾಡಲಾಗುತ್ತದೆ. ಇನ್ನು ಮುಂದಕ್ಕೂ ಈ ಕಾರ್ಯಕ್ರಮ ಮಂದುವರಿಸಿಕೊಂಡು ಹೋಗುತ್ತೇವೆ ಎಂದರು.
ಜ್ಞಾನವಿಕಾಸ ಕಾರ್ಯಕ್ರಮ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಅದರಲ್ಲೂ ವಿಧ್ಯಾರ್ಥಿನಿಯರಿಗೆ ಪ್ರೋತ್ಸಾಹ ನಿಟ್ಟಿನಲ್ಲಿ ಜ್ಞಾನವಿಕಾಸ ಕಾರ್ಯಕ್ರಮ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದಕ್ಕೆ ಪೂರಕವಾಗಿ ಇಂದು ನಡೆದ ಕಾರ್ಯಕ್ರಮದಲ್ಲೂ ಕೈ ಜೋಡಿಸಿದೆ.
ಪ್ರಸ್ತುತ ವರ್ಷ ಬಾಗಲಕೋಟೆ ೩೫ ಶಾಲೆಗಳಿಗೆ 315 ಜೊತೆ, ರಾಯಚೂರು 41 ಶಾಲೆಗಳಿಗೆ 364, ಕೊಪ್ಪಳ 58 ಶಾಲೆಗಳಿಗೆ 549, ಗದಗ 44 ಶಾಲೆಗಳಿಗೆ 377, ಬಳ್ಳಾರಿ 54 ಶಾಲೆಗಳಿಗೆ 469 ಹಾಗೂ ಹೊಸಪೇಟೆ 55 ಶಾಲೆಗಳಿಗೆ 476 ಜೊತೆ ಒಟ್ಟು 287 ಶಾಲೆಗಳಿಗೆ 2550 ಜೊತೆ ಬೆಂಚ್-ಡೆಸ್ಕ್‌ಗಳನ್ನು ಪೂರೈಕೆ ಮಾಡಲಾಗಿದೆ. 1.78 (1,78,50,000) ಕೋ.ರೂ. ವಿನಿಯೋಗಿಸಲಾಗಿದೆ. ಸುಮಾರು 10,200 ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಕಳೆದ 10 ವರ್ಷದಿಂದ ಇದುವರೆಗೆ 29 ಜಿಲ್ಲೆಗಳ 9,213 ಶಾಲೆಗಳಿಗೆ 58,915 ಜೊತೆ ಬೆಂಚ್-ಡೆಸ್ಕ್ ಪೂರೈಕೆ ಮಾಡಿದ್ದು, 15.92 (15,92,26,000) ಕೋಟಿ ರೂ. ವಿನಿಯೋಗಿಸಲಾಗಿದೆ. 2,35,660 ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಒದಗಿಸಿದಂತಾಗಿದೆ.
ಈ ಸಂದರ್ಭದಲ್ಲಿ ಹೇಮಾವತಿ ವೀ.ಹೆಗ್ಗಡೆ, ಧರ್ಮಸ್ಥಳ ಗ್ರಾ. ಯೋಜನೆಯ ಮುಖ್ಯ ನಿರ್ವಾಹಣಾಧಿಕಾರಿ ಅನಿಲ್ ಕುಮಾರ್, ಡಾ. ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ, ಶ್ರೀಧ. ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಜನಾರ್ಧನ್, ಉಜಿರೆ ಲಕ್ಷ್ಮೀ ಗ್ರೂಪ್ ಮಾಲಕ ಮೋಹನ್ ಕುಮಾರ್, ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಯೋಜನಾಧಿಕಾರಿ ಪುಷ್ಪರಾಜ್, ಪ್ರಬಂಧಕರಾದ ವಿಘ್ನೇಶ್ ಕಾಮತ್ ಮತ್ತು ಜಗದೀಶ್ ಪೂಜಾರಿ, ಮೇಲ್ವಿಚಾರಕ ಮಹಾಬಲ ಇದ್ದರು.