ಅಡಕೆ ಕದ್ದು ಸಾರ್ವಜನಿಕ ಸ್ಥಳದಲ್ಲಿ ಸುಲಿಯುತ್ತಿದ್ದ ಖದೀಮರನ್ನು ಹಿಡಿದ ಸ್ಥಳೀಯರು: ಬೃಹತ್ ಜಾಲದ ಶಂಕೆ: ಪೊಲೀಸರ ಭಯವೇ ಇಲ್ಲದೆ ಬಯಲಲ್ಲಿ ಕದ್ದ ಅಡಕೆ ಸಂಗ್ರಹ: ಪೊಲೀಸರಿಂದ ತನಿಖೆ

ಮಚ್ಚಿನ: ಪೊಲೀಸರ ಭಯವೇ ಇಲ್ಲದಂತೆ ಕದ್ದು ತಂದ ಅಡಕೆಯನ್ನು ಸಾರ್ವಜನಿಕರು ಓಡಾಡುವ ಗುಡ್ಡದಲ್ಲಿ ರಾತ್ರಿ ಸುಲಿದು ಸಾಗಿಸುತ್ತಿದ್ದ ಇಬ್ಬರು ಖತರ್‍ನಾಕ್ ಕಳ್ಳರನ್ನು ಹಿಡಿದು ಸಾರ್ವಜನಿಕರು ಪೊಲೀಸರಿಗೊಪ್ಪಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಸಾಧ್ಯತೆಯಿದ್ದು, ಸಮಗ್ರ ತನಿಖೆ ನಡೆಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಚ್ಚಿನ ಗ್ರಾಮದ ಪುಂಚಪಾದೆ ಎಂಬಲ್ಲಿ ಇಬ್ಬರು ಕಳ್ಳರು ಪಾದೆಯ ಮೇಲೆ ಸುಮಾರು 50 ಕೆ.ಜಿ.ಗೂ ಹೆಚ್ಚು ಒಣ ಅಡಿಕೆ ಶೇಖರಿಸಿ ಇಟ್ಟಿದ್ದು, ರಾತ್ರಿ ವೇಳೆ ಸುಲಿಯುತ್ತಿದ್ದರು. ಹಗಲಲ್ಲಿ ಈ ಜಾಗ ಸಾರ್ವಜನಿಕರು ಭೇಟಿ ನೀಡುವ ಸ್ಥಳವಾಗಿದ್ದು, ಪೊಲೀಸರ ಭಯವೇ ಇಲ್ಲದೆ ಕಳ್ಳರು ಕೃತ್ಯ ಎಸಗಿದ್ದಾರೆ. ಮುಂದೆ ಇಂತಹಾ ಘಟನೆ ನಡೆಯದಂತೆ ತಕ್ಕ ಪಾಠ ಕಲಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.

ಇಬ್ಬರು ಯುವಕರನ್ನು ಹಿಡಿದ ಸ್ಥಳೀಯರು:
ಘಟನೆಯಲ್ಲಿ ಮುಂಜಾನೆ 7 ಗಂಟೆ ಸುಮಾರಿಗೆ ಇಬ್ಬರು ಯುವಕರನ್ನು ಸ್ಥಳೀಯರು ಹಿಡಿದ್ದು ಬೆಳ್ತಂಗಡಿ ತಾಲೂಕು ತೆಕ್ಕಾರಿನ ಹಾಗೂ ಪಾಂಡವರಕಲ್ಲಿನ ಇಬ್ಬರು ಯುವಕರನ್ನು ಪುಂಜಾಲಕಟ್ಟೆ ಪೊಲೀಸರು ವಶಕ್ಕೆ ಪಡೆದ್ದಾರೆ. ಒಬ್ಬಾತ ಸ್ಥಳದಿಂದ ಓಡಿ ತಪ್ಪಿಸಿಕೊಂಡು ಓಡಿದ್ದು, ಸಾರ್ವಜನಿಕರು ಕಾರ್ಯಾಚರಣೆ ನಡೆಸಿ ಕುದ್ರಡ್ಕ ಬಳಿ ಹಿಡಿದಿದ್ದಾರೆ. ಆದರೆ ಅಡಕೆ ಸುಲಿದ ಸ್ಥಳದ ಬಳಿ ಸಿಪ್ಪೆಗಳ ಮೂರು ರಾಶಿಗಳಿದ್ದು, ಇನ್ನೂ ಓರ್ವ ಸುಲಿದ ಅಡಕೆ ಸಾಗಾಟ ಮಾಡಲು ತೆರಳಿದ್ದನೇ ಎಂಬ ಅನುಮಾನ ಸ್ಥಳೀಯರಲ್ಲಿ ಮೂಡಿದೆ.

ದೊಡ್ಡ ಜಾಲದ ಶಂಕೆ:
ಪುಂಚಪಾದೆಯಲ್ಲಿ ಅಡಕೆ ಗೋಣಿ ಲಭಿಸಿದ ಸ್ಥಳದಿಂದ ರಸ್ತೆ ಸುಮಾರು 500 ಮೀ. ದೂರದಲ್ಲಿದ್ದು, ಅಡಕೆ ಚೀಲಗಳನ್ನು ಸುಲಿಯುತ್ತಿದ್ದ ಸ್ಥಳಕ್ಕೆ ಹೊತ್ತು ತರುತ್ತಿದ್ದರೇ? ಇಬ್ಬರಿಂದ ಈ ಕೃತ್ಯ ಎಸಗಲು ಸಾಧ್ಯವೇ,,? ಆರೋಪಿಗಳು ಪತ್ತೆಯಾದ ಜಾಗದಲ್ಲಿ ಯಾವುದೇ ದ್ವಿಚಕ್ರ ಅಥವಾ ಇತರ ಯಾವುದೇ ವಾಹನಗಳು ಕಂಡುಬಂದಿಲ್ಲ. ಆದ್ದರಿಂದ ಯಾವುದೋ ವಾಹನದಲ್ಲಿ ಆರೋಪಿಗಳನ್ನು ಇಳಿಸಿ, ಮೂಟೆಗಳನ್ನು ಹೊತ್ತೊಯ್ದು ವ್ಯವಸ್ಥಿತವಾಗಿ ಕಳ್ಳತನ ಮಾಡುತ್ತಿದ್ದರೇ..? ಇದರ ಹಿಂದೆ ದೊಡ್ಡ ಜಾಲ ಇರುವ ಶಂಕೆ ಇದ್ದು, ಪೊಲೀಸರು ಪ್ರಕರಣ ಬೇಧಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವ್ಯವಸ್ಥಿತ ಅಡಗುದಾಣ:
ಇಬ್ಬರು ಸಿಕ್ಕಿದ ಪ್ರದೇಶ ನಿರ್ಜನ ಪ್ರದೇಶವಾಗಿದ್ದು, ಸಂಜೆಯ ವೇಳೆಗೆ ಕೆಲವರು ಪ್ರಕೃತಿ ಸೌಂದರ್ಯ ಆಸ್ವಾದಿಸುವ ದೃಷ್ಠಿಯಿಂದ ಪಾದೆ ಹತ್ತಿ ಇಳಿಯುತ್ತಾರೆ. ರಾತ್ರಿ ಸಂದರ್ಭ ಕೆಲ ಕಿಡಿಗೇಡಿಗಳು ಮಧ್ಯ ಸೇವನೆ ಮೊದಲಾದ ಕಾರ್ಯಗಳಿಗಾಗಿ ಮಾತ್ರ ಈ ಸ್ಥಳಕ್ಕೆ ಬರುತ್ತಾರೆ. ಉಳಿದಂತೆ ಈ ಪ್ರದೇಶದಲ್ಲಿ ಜನ ಓಡಾಟ ಇರುವುದಿಲ್ಲ. ಆದ್ದರಿಂದ ಪಾದೆಯ ಮೇಲಿರುವ ಪೊದರುಗಳನ್ನು ಕಡಿದು, ಅಲ್ಲಿಯೇ ವ್ಯವಸ್ಥಿತವಾದ ಅಡಗುದಾಣ ನಿರ್ಮಿಸಿ, ಸುಮಾರು 8 ಗೋಣಿ ಅಡಕೆ ಶೇಖರಿಸಿ ಇಡಲಾಗಿತ್ತು. ಆದ್ದರಿಂದ ಇಲ್ಲಿ ಕಳ್ಳರಿಂದ ಸಕಲ ಸಿದ್ಧತೆ ಮಾಡಲಾಗಿತ್ತು. ರಾತ್ರಿ ಆಹಾರನ್ನು ತಂದೂ ಸೇವಿಸಿರುವ ಕುರುಹುಗಳಿವೆ.

ಸುಲಿದ ಅಡಕೆ ನಾಪತ್ತೆ:
ಸ್ಥಳದಲ್ಲಿ ಗೋಣಿಯಲ್ಲಿ ಅಡಕೆ ಪತ್ತೆಯಾಗಿದ್ದು, ಈಗಾಗಲೇ 6ಕ್ಕೂ ಹೆಚ್ಚು ಗೋಣಿ ಅಡಕೆ ಸ್ಥಳದಲ್ಲಿ ಸುಲಿದಿರುವಂತೆ ಕಂಡು ಬರುತ್ತಿದೆ. ಆದರೆ ಸುಲಿದ ಅಡಕೆ ಸ್ಥಳದಲ್ಲಿಲ್ಲ. ಹಾಗಾದಲ್ಲಿ ಸುಲಿದ ಅಡಕೆಯನ್ನು ಎಲ್ಲಿಗೆ ಸಾಗಿಸಿದರು. ಎಷ್ಟು ದಿನಗಳಿಂದ ಈ ವ್ಯವಸ್ಥಿತ ಕೃತ್ಯ ನಡೆಯುತ್ತಿತ್ತು ಎಂಬ ಪ್ರಶ್ನೆ ಮೂಡಿದೆ.

ಸ್ಥಳೀಯವಾಗಿ ಕಳ್ಳತನ:
ಸ್ಥಳೀಯವಾಗಿ ಪಿಲಿಗೂಡು, ದೇವರಪಲ್ಕೆ ಮೊದಲಾದ ಸ್ಥಳಗಳಿಂದ ಅಡಕೆ ನಾಪತ್ತೆಯಾಗುತ್ತಿತ್ತು, ಸಣ್ಣ ಪ್ರಮಾಣದ ಅಡಕೆಯಾದ್ದರಿಂದ ದೂರು ದಾಖಲಿಸುವ ಪ್ರಮೇಯ ಇರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಇಬ್ಬರು ಕಳ್ಳರು ಎಲ್ಲಿಂದ ಅಡಕೆ ತಂದರು, ಈ ಹಿಂದೆ ಯಾವೆಲ್ಲಾ ಪ್ರದೇಶಗಳಲ್ಲಿ ಕಳ್ಳತನ ನಡೆಸಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

ಕಳ್ಳನ ಹಿಡಿದ ಸ್ಥಳೀಯರು:
ಸ್ಥಳೀಯವಾಗಿ ಕಳ್ಳತನ ನಡೆಯುತ್ತಿದ್ದ ಮಾಹಿತಿಯನ್ನು ಸಾರ್ವಜನಿಕರು ಮೊದಲೇ ಅರಿತಿದ್ದರು. ಆದರೆ ಸ್ಥಳೀಯವಾಗಿ ಮುಂಜಾನೆ ಅನುಮಾನಾಸ್ಪದವಾಗಿ ಇಬ್ಬರು ಪಾದೆ ಮೇಲೆ ಮಲಗಿದ್ದನ್ನು ಗಮನಿಸಿ ಸ್ಥಳೀಯರು ಕಾರ್ಯಾಚರಣೆ ನಡೆದಿದ್ದು, ಪ್ರಕರಣ ಬೆಳಕಿಗೆ ಬಂದಿದೆ. ಈ ಸಂದರ್ಭ ಸ್ಥಳೀಯರಾದ ಕರಾಟೆ ಕಿಟ್ಟ ಎಂಬವರು ಪೊಲೀಸರಿಗೆ ಹಿಡಿದೊಪ್ಪಿಸಲು ಸಹಾಯ ಮಾಡಿದ್ದಾರೆ ಎನ್ನಲಾಗಿದೆ.

ಕಳ್ಳರ ರಕ್ಷಿಸಿದ ಪೊಲೀಸರು:
ಸ್ಥಳೀಯವಾಗಿ ಅಡಕೆ ಕಳ್ಳತನವಾಗುತ್ತಿದ್ದ ಆಕ್ರೋಷ ಸಾರ್ವಜನಿಕರಲ್ಲಿತ್ತು. ಅಡಕೆ ಕಳ್ಳರು ಸಿಕ್ಕಿದ್ದಾರೆ ಎಂಬ ಮಾಹಿತಿ ಅರಿತ ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿದ್ದು ಗೂಸಾ ನೀಡಲು ಮುಂದಾದಾಗ ಪೊಲೀಸ್ ಸಿಬ್ಬಂದಿ, ತಡೆದು ರಕ್ಷಿಸಿದ್ದಾರೆ. ಇನ್ನು ಓರ್ವ ಸ್ಥಳದಿಂದ ಪರಾರಿಯಾಗಿ, ಸಮೀಪದ ಕುದ್ರಡ್ಕ ಎಂಬಲ್ಲಿ ಸಾರ್ವಜನಿಕರಿಗೆ ಸಿಕ್ಕಿಬಿದ್ದಿದ್ದಾನೆ. ಅಲ್ಲಿಯೂ ಆಕ್ರೋಷದಿಂದ ಸಾರ್ವಜನಿಕರು ಹೊಡೆಯಲು ಮುಂದಾಗಿದ್ದು, ಪೊಲೀಸರು ರಕ್ಷಿಸಿದ್ದಾರೆ.

ಕಳ್ಳರಿಂದ ರಕ್ಷಿಸಲು ಸಾರ್ವಜನಿಕರ ಮನವಿ:
ದಿನೇ ದಿನೇ ಅಡಕೆ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಕಳ್ಳರಿಂದ ರಕ್ಷಿಸಬೇಕು, ಇಂತಹಾ ಕಳ್ಳರನ್ನು ಸರಿಯಾದ ತನಿಖೆ ನಡೆಸಿ ರಕ್ಷಣೆ ನೀಡಬೇಕು. ಆಗ ಕಳ್ಳತನ ಅಥವಾ ಅಪರಾಧ ಕೃತ್ಯ ಮಾಡಲು ಹೆದರುತ್ತಾರೆ. ಆದ್ದರಿಂದ ಸೂಕ್ತ ರಕ್ಷಣೆ ನೀಡಿ ಎಂದು ಅಡಕೆ ಬೆಳೆಗಾರರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿದಲ್ಲಿ, ದೊಡ್ಡ ಮಟ್ಟದ ಕಳ್ಳತನ, ಅನಾಹುತಗಳನ್ನು ತಪ್ಪಿಸಬಹುದಾಗಿದೆ.

error: Content is protected !!