ರಾಜ್ಯ ಸರಕಾರದಿಂದ ಮಲತಾಯಿ ಧೋರಣೆ: ತಾಲೂಕು‌ ವರ್ತಕರ ಆರೋಪ: ಸೆಸ್ ಏರಿಕೆ ಕಡಿತಗೊಳಿಸಲು ಮನವಿ: ಪ್ರತಿಭಟನೆ ಅಂಗವಾಗಿ ಇಂದು ತಾಲೂಕಿನ 140ಕ್ಕೂ ಹೆಚ್ಚು ಖರೀದಿ ಕೇಂದ್ರಗಳು ಬಂದ್

 

ಬೆಳ್ತಂಗಡಿ: ರಾಜ್ಯ ಸರಕಾರ‌ ಕೃಷಿ ಉತ್ಪನ್ನ ‌ಮಾರುಕಟ್ಟೆ ಶುಲ್ಕವನ್ನು ಶೇ.‌0.35ರಿಂದ ಶೇ.1ಕ್ಕೆ ಏರಿಸಿದೆ.‌ ಈಗಾಗಲೇ ಮಾರುಕಟ್ಟೆ ಏರಿಳಿತ, ಸಾರಿಗೆ ಸಾಗಾಣಿಕಾ ವೆಚ್ಚಗಳಿಂದ ನಷ್ಟ ಎದುರಿಸುತ್ತಿದ್ದೇವೆ. ಜಿಲ್ಲೆಯ ವರ್ತಕರು ಪ್ರಾಮಾಣಿಕವಾಗಿ ಶುಲ್ಕ ಪಾವತಿಸಿದರೂ ಶುಲ್ಕ ಹೆಚ್ಚಿಸಲಾಗಿದೆ. ಆದರೆ ಉತ್ತರ ಕರ್ನಾಟಕದ ವರ್ತಕರು ಶುಲ್ಕ ಪಾವತಿಸದೆ ಸರಕಾರಕ್ಕೆ ವಂಚಿಸುತ್ತಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಸರಕಾರ ಈ ಮೂಲಕ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ವರ್ತಕರು ಬೆಳ್ತಂಗಡಿ ಎಪಿಎಂಸಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಹಾಗೂ ಬೆಳ್ತಂಗಡಿ ತಹಸೀಲ್ದಾರ್ ಅವರ ಮೂಲಕ ಸಚಿವ ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಿದರು.

ವರ್ತಕರ ವರ್ಗದ ಹಿತದೃಷ್ಟಿಯಿಂದ ಎರಿಸಿರುವ ಸೆಸ್ ಕಡಿತಗೊಳಿಸಬೇಕು ಹಾಗೂ ಹಿಂದಿನಂತೆ ‌ಯಥಾಸ್ಥಿತಿಗೆ ತರಬೇಕು. ರಾಜ್ಯದೆಲ್ಲೆಡೆ ಏಕರೂಪ ಕಾನೂನು ಅನುಷ್ಠಾನಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಡಿ.22 ಮಂಗಳವಾರ ತಾಲೂಕಿನ ‌140ಕ್ಕೂ‌ ಹೆಚ್ಚು ವರ್ತಕರು ತಮ್ಮ ಅಡಿಕೆ ಖರೀದಿ ಕೇಂದ್ರ ಬಂದ್ ಮಾಡಿ‌ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ವರ್ತಕರ ಸಂಘದ ಪ್ರತಿನಿಧಿ ಪುಷ್ಪರಾಜ ಹೆಗ್ಡೆ, ವರ್ತಕರ ಸಂಘದ ಬಾಲಕೃಷ್ಣ ‌ಶೆಟ್ಟಿ, ಸತೀಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಪದ್ಮರಾಜ್, ಸತ್ಯೇಂದ್ರ ಜೈನ್, ದರ್ಶನ್, ಸದಾನಂದ ಶೆಟ್ಟಿ, ಇಸ್ಮಾಯಿಲ್, ವಿ.ಕೆ. ಫಾರುಕ್, ಉಮ್ಮರ್ ಕುಂಞ, ಹೈದರ್, ಸಂಶುದ್ದೀನ್ ಜಾರಿಗೆಬೈಲು ಮೊದಲಾದವರು ಉಪಸ್ಥಿತರಿದ್ದರು.

error: Content is protected !!