ರಾಜ್ಯ ಮೆಚ್ಚುವಂತೆ ಪೊಲೀಸ್ ತಂಡ ಕಾರ್ಯನಿರ್ವಹಿಸಿದೆ: ಕೋಟಾ ಶ್ರೀನಿವಾಸ ಪೂಜಾರಿ: ಅನುಭವ್ ಅಪಹರಣ ಪ್ರಕರಣ, ಕಾರ್ಯಾಚರಣೆ ನಡೆಸಿದ ತಂಡಕ್ಕೆ ಅಭಿನಂದನೆ

ಮಂಗಳೂರು: ಬೆಳ್ತಂಗಡಿಯಲ್ಲಿ ನಡೆದ ಘಟನೆಯಿಂದ ಜಿಲ್ಲೆ ‌ತಲ್ಲಣಗೊಂಡಿತ್ತು. ಆದರೆ ಜಿಲ್ಲಾ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ನೇತೃತ್ವದಲ್ಲಿ ತಂಡ ರಚಿಸಿಕೊಂಡು, ಮಗು ಸುರಕ್ಷಿತವಾಗಿ ಲಭಿಸುವವರೆಗೆ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದಾರೆ. ಆರೋಪಿಗಳನ್ನು ಪತ್ತೆ ಮಾಡುವಲ್ಲಿಯೂ ಪರಿಶ್ರಮಪಟ್ಟಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ‌
ಅವರು ಮಂಗಳೂರಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ, ಉಜಿರೆ ನಿವಾಸಿ, ಉದ್ಯಮಿ, ನಿವೃತ್ತ ಸೈನಿಕ ಎ.ಕೆ.ಶಿವನ್ ಮೊಮ್ಮಗ ಅನುಭವ್ ಅಪಹರಣ 36 ಗಂಟೆಯೊಳಗೆ ಸುಖಾಂತ್ಯಗೊಳಿಸಿದ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಮತ್ತು ಅವರ ತಂಡವನ್ನು ಅಭಿನಂದಿಸಿ ಮಾತನಾಡಿದರು. ‌


ಪೊಲೀಸರು ಯೋಜನಾ ಬದ್ಧವಾಗಿ ಕಾರ್ಯನಿರ್ವಹಿಸುವ ಜೊತೆಗೆ ರಾಜ್ಯ ಮೆಚ್ಚುವ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮಗುವನ್ನು ಸುರಕ್ಷಿತವಾಗಿ ಕರೆತಂದಿರುವುದೇ ದೊಡ್ಡ ಸಾಧನೆಯಾಗಿದೆ ಎಂದರು.
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಮಾತನಾಡಿ, ಎಲ್ಲ ಶ್ರಮ ಹಾಗೂ ಪೊಲೀಸರು ತಂಡವಾಗಿ ಕಾರ್ಯನಿರ್ವಹಿಸಿದ್ದರಿಂದ ಬೇಗನೆ ಫಲ ಸಿಕ್ಕಿತು. ಎಲ್ಲರ ಸಹಕಾರದಿಂದ ಪ್ರಕರಣ ಬೇಧಿಸಲು ಸಾಧ್ಯವಾಯಿತು. ಮುಖ್ಯವಾಗಿ ಸಾರ್ವಜನಿಕರು ತಮಗೆ ತಿಳಿದ ಮಾಹಿತಿಯನ್ನು ನೀಡುವ ಮೂಲಕ ಪ್ರಮುಖ ಸುಳಿವುಗಳನ್ನು ‌ನೀಡಿ ಸಹಕರಿಸಿದರು. ‌ಮುಖ್ಯವಾಗಿ ಸಬ್ ಇನ್ಸ್ ಪೆಕ್ಟರ್ ನಂದಕುಮಾರ್ ನೇತೃತ್ವದ ತಂಡ ನಿದ್ದೆಗೆಟ್ಟು, ಉಜಿರೆಯ ಅನುಭವ್ ಮನೆ ಹಾಗೂ ಕೋಲಾರಕ್ಕೆ ತೆರಳಿ ಕಾರ್ಯಚರಣೆ ನಡೆಸಿತು. ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಿದ ಪರಿಣಾಮ ಆರೋಪಿಗಳನ್ನು ಬಂಧಿಸುವಂತಾಯಿತು.‌ ನಮ್ಮ ಶ್ರಮವನ್ನು ಗುರುತಿಸಿದ್ದಕ್ಕಾಗಿ ಸಚಿವರು ಹಾಗೂ ಸಂಸದರಿಗೆ ಧನ್ಯವಾದಗಳು ಎಂದರು.
ಸಂಸದ ನಳಿನ್ ಕುಮಾರ್ ಅವರು ಅಧಿಕಾರಿಗಳನ್ನು ಅಭಿನಂದಿಸಿ, ಶುಭ ಹಾರೈಸಿದರು‌.
ಕಾರ್ಯಾಚರಣೆ ಸಂದರ್ಭ ನೇತೃತ್ವ ವಹಿಸಿದ ಬಂಟ್ವಾಳ ಡಿ.ವೈ.ಎಸ್.ಪಿ ವೆಲೈಂಟೇನ್ ಡಿಸೋಜ, ಡಿಸಿಬಿಐ ನಿರೀಕ್ಷಕ ಚೆಲುವರಾಜು, ಡಿಎಸ್ ಬಿ‌ ನಿರೀಕ್ಷಕ‌ ರವಿ. ಬಿ.ಎಸ್.,
ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ.,
ಬೆಳ್ತಂಗಡಿ ಎಸ್‌ಐ ನಂದಕುಮಾರ್, ಧರ್ಮಸ್ಥಳ ಎಸ್‌ಐ ಪವನ್ ಕುಮಾರ್, ಉಪ್ಪಿನಂಗಡಿ ಎಸ್‌ಐ ಈರಯ್ಯ, ಸಂಚಾರಿ‌ ಎಸ್ಐ ಕುಮಾರ್ ಕಾಂಬ್ಳೆ ಹಾಗೂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ವಿಶೇಷ ತಂಡದ ಸಿಬ್ಬಂದಿಗಳನ್ನು ಅಭಿನಂದಿಸಿದರು.
ಈ ಸಂದರ್ಭ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ್ ಮೊದಲಾದವರು ಇದ್ದರು.

error: Content is protected !!