ಬೆಳ್ತಂಗಡಿಯಲ್ಲಿ ನಾರಾಯಣ ಗುರುಗಳ 172ನೇ ಗುರುಜಯಂತಿ ಆಚರಣೆ ₹13 ಲಕ್ಷಕ್ಕೂ ಅಧಿಕ ವಿದ್ಯಾರ್ಥಿವೇತನ ವಿತರಣೆ; ಸಾಧಕರಿಗೆ ಸನ್ಮಾನ

 

 

 

 

ಬೆಳ್ತಂಗಡಿ: ನಾರಾಯಣ ಗುರುಗಳ ಸಂದೇಶಗಳು ಎಂದಿಗೂ ಪ್ರಸ್ತುತವಾಗಿದ್ದು, ಅವುಗಳ ಆಧಾರದಲ್ಲಿ ಸಮಾಜವನ್ನು ಮುನ್ನಡೆಸಬೇಕಾಗಿದೆ ಎಂದು ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಅಧ್ಯಕ್ಷ ರಕ್ಷಿತ್ ಶಿವರಾಮ್ ಹೇಳಿದರು.

ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾಭವನದಲ್ಲಿ ಶುಕ್ರವಾರ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ ಹಾಗೂ ಬಿಲ್ಲವ ಮಹಿಳಾ ವೇದಿಕೆಗಳ ಸಂಯುಕ್ತ ಆಶ್ರಯದಲ್ಲಿ ನಾರಾಯಣ ಗುರುಗಳ 172ನೇ ಗುರುಜಯಂತಿ, ಸಮಾಜದ ಸಾಧಕರಿಗೆ ಸನ್ಮಾನ, ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಹಾಗೂ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಕ್ಷಿತ್ ಶಿವರಾಮ್, ಬೆಳ್ತಂಗಡಿ–ಬಂಟ್ವಾಳ ಮಧ್ಯೆ ಸುಮಾರು 7 ಎಕರೆ ಪ್ರದೇಶದಲ್ಲಿ ಶಿವಗಿರಿ ಶಾಖಾ ಮಠ ಸ್ಥಾಪನೆಯಾಗಲಿದೆ ಎಂದು ತಿಳಿಸಿದರು. ಹಿರಿಯರು ನೀಡಿದ ಕೊಡುಗೆ ಮತ್ತು ಶ್ರಮದಿಂದ ಬೆಳ್ತಂಗಡಿಯ ಬಿಲ್ಲವ ಸಂಘ ದೇಶದಲ್ಲೇ ಶಕ್ತಿಶಾಲಿ ಸಂಘವಾಗಿ ಬೆಳೆದಿದೆ. ಧೈರ್ಯ, ತಾಳ್ಮೆ ಹಾಗೂ ಪರಸ್ಪರ ಸಹಕಾರದ ಗುಣಗಳನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ದೊರೆಯುವ ವಿದ್ಯಾರ್ಥಿವೇತನವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ವತಿಯಿಂದ ₹13 ಲಕ್ಷಕ್ಕೂ ಅಧಿಕ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಸಮಾಜವನ್ನು ಸದೃಢ ಶಕ್ತಿಯನ್ನಾಗಿ ರೂಪಿಸುವುದು ಸಂಘದ ಉದ್ದೇಶವಾಗಿದೆ. ಕುವೆಟ್ಟು ಗ್ರಾಮದಲ್ಲಿ ಸಂಘಕ್ಕೆ 3 ಎಕರೆ ಜಾಗ ಖರೀದಿಸುವ ಪ್ರಕ್ರಿಯೆ ಮಾತುಕತೆ ಹಂತದಲ್ಲಿದೆ ಎಂದು ಹೇಳಿದರು.

ಗುರು ಸಂದೇಶ ನೀಡಿದ ನಿತೇಶ್ ಪೂಜಾರಿ ಮಾರ್ನಾಡ್, ಸಮಾಜದಲ್ಲಿ ಉತ್ತಮ ಕಾರ್ಯ ಮಾಡುವವರಿಗೆ ಅವಕಾಶ ಕಲ್ಪಿಸಬೇಕು. ಸಮುದಾಯವನ್ನು ಬಲಪಡಿಸಿದಾಗ ಪ್ರತಿಯೊಬ್ಬರ ಭವಿಷ್ಯವೂ ಗಟ್ಟಿಯಾಗುತ್ತದೆ. ಹೆತ್ತವರನ್ನು ಗೌರವದಿಂದ ನೋಡಿಕೊಳ್ಳುವ ಮೂಲಕ ದೇಶವನ್ನು ವೃದ್ಧಾಶ್ರಮ ಮುಕ್ತಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಎಂದರು.

ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ದೀಕ್ಷಿತಾ ಹಾಗೂ ಸಂಘದ ಮಾಜಿ ಅಧ್ಯಕ್ಷ ಪೀತಾಂಬರ ಹೇರಾಜೆ ಶುಭ ಹಾರೈಸಿದರು.

ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಿದ ನಿಷ್ಮಾ ಪೂಜಾರಿ, ಮಂಗಳೂರು ವಿಶ್ವವಿದ್ಯಾಲಯದ ಬಿ.ಎಡ್. ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ಮಾನಸ, ವಿಶ್ಲೇಷಣಾತ್ಮಕ ರಸಾಯನಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ನಿರೀಕ್ಷಾ ಎಸ್. ಪೂಜಾರಿ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ದಿಶಾ ಪೂಜಾರಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.99 ಅಂಕ ಗಳಿಸಿದ ಸ್ವೀಕೃತಿ ಮತ್ತು ರಕ್ಷಾ, ಸ್ಯಾಕ್ಸೋಫೋನ್ ವಾದಕಿ ಸ್ನೇಹ ಬುಡೆಂಗೊಟ್ಟು ಹಾಗೂ ಗಿರೀಶ್ ಪೂಜಾರಿ ಸೌದಿ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.

ಕೊರಗಪ್ಪ ಅವರಿಗೆ ಸಾಂತ್ವನ ನಿಧಿ ವಿತರಿಸಲಾಯಿತು. ಬಿಲ್ಲವ ಮಹಿಳಾ ವೇದಿಕೆಯ ಮಾಜಿ ಅಧ್ಯಕ್ಷೆ ವಿನೋದಿನಿ ರಾಮಪ್ಪ ಅವರು ಇಬ್ಬರು ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಪ್ರೋತ್ಸಾಹಧನ ನೀಡಿದರು.

ವೇದಿಕೆಯಲ್ಲಿ ಹುಬ್ಬಳ್ಳಿ ಉದ್ಯಮಿ ವಿಜಯ್ ಪಿ. ಪೂಜಾರಿ, ಸಂಘದ ಮಾಜಿ ಅಧ್ಯಕ್ಷರಾದ ಗಂಗಾಧರ ಮಿತ್ತಮಾರ್, ಪಿ.ಕೆ. ರಾಜು ಪೂಜಾರಿ, ಜಯರಾಂ ಬಂಗೇರ ಹೇರಾಜೆ, ಪೀತಾಂಬರ ಹೇರಾಜೆ, ಭಗೀರಥ ಜಿ., ಚಿದಾನಂದ ಪೂಜಾರಿ ಎಲ್ದಕ್ಕ, ಉಪಾಧ್ಯಕ್ಷ ಸುಂದರ ಪೂಜಾರಿ ಬೆಳ್ತಂಗಡಿ, ಕೋಶಾಧಿಕಾರಿ ಪ್ರಶಾಂತ್ ಕುಮಾರ್ ಕೊಕ್ರಾಡಿ, ಜೊತೆ ಕಾರ್ಯದರ್ಶಿ ಸಂತೋಷ್ ಉಪ್ಪಾರ್, ಬಿಲ್ಲವ ಮಹಿಳಾ ವೇದಿಕೆ ಸ್ಥಾಪಕಾಧ್ಯಕ್ಷೆ ಸುಜಿತಾ ವಿ. ಬಂಗೇರ, ಅಧ್ಯಕ್ಷೆ ಸುಮತಿ ಪ್ರಮೋದ್ ಹಾಗೂ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ.ಕೆ. ಪ್ರಸಾದ್ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ನಿತೇಶ್ ಹೆಚ್. ಕೋಟ್ಯಾನ್ ಸ್ವಾಗತಿಸಿದರು. ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು. ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಪ್ರಸಾದ್ ಎಂ.ಕೆ. ವಂದಿಸಿದರು.

error: Content is protected !!