
ಮಂಗಳೂರು: ಸುಮಾರು 31 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಅಂಗನವಾಡಿ ಸಹಾಯಕಿ ಶ್ರೀಮತಿ ವನಿತಾ ರೈ ಅವರು ಸೇವೆಯಿಂದ ಗೌರವಪೂರ್ವಕವಾಗಿ ನಿವೃತ್ತರಾಗಿದ್ದಾರೆ.
ಬಾಳಿಲ, ಸುಳ್ಯ ನಿವಾಸಿ ದಿವಂಗತ ಶೀನಪ್ಪ ರೈ ಅವರ ಪತ್ನಿಯಾದ ವನಿತಾ ರೈ ಅವರು ತಮ್ಮ ಸೇವಾ ಅವಧಿಯ ಸುಮಾರು 26 ವರ್ಷಗಳನ್ನು ಬಾಳಿಲ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಸಹಾಯಕಿಯಾಗಿ ಕಳೆದಿದ್ದರು. ಬಳಿಕ ವರ್ಗಾವಣೆಯಾಗಿ ಮಂಗಳೂರಿನ ಅಡ್ಯಾರ್ ಪದವು ಸಂತ ಲಿಗೋರಿಸ್ ಅಂಗನವಾಡಿ ಕೇಂದ್ರಕ್ಕೆ ನಿಯೋಜನೆಗೊಂಡ ಅವರು, ಕಳೆದ ಐದು ವರ್ಷಗಳಿಂದ ಅಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಸೇವಾ ಅವಧಿಯಲ್ಲಿ ಮಕ್ಕಳ ಆರೈಕೆ, ಪೋಷಣಾ ಕಾರ್ಯಕ್ರಮಗಳು ಹಾಗೂ ಅಂಗನವಾಡಿ ಕೇಂದ್ರದ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ಮಕ್ಕಳು ಮತ್ತು ಪೋಷಕರೊಂದಿಗೆ ಆತ್ಮೀಯ ಬಾಂಧವ್ಯ ಬೆಳೆಸಿಕೊಂಡಿದ್ದರು.
ಒಟ್ಟು 31 ವರ್ಷಗಳ ನಿಸ್ವಾರ್ಥ ಹಾಗೂ ಶ್ಲಾಘನೀಯ ಸೇವೆಯನ್ನು ಪೂರ್ಣಗೊಳಿಸಿ ನಿವೃತ್ತರಾಗಿರುವ ವನಿತಾ ರೈ ಅವರ ನಿವೃತ್ತಿ ಜೀವನವು ಸುಖ, ಶಾಂತಿ, ಉತ್ತಮ ಆರೋಗ್ಯ ಹಾಗೂ ಸಂತೋಷದಿಂದ ಕೂಡಿರಲಿ ಎಂದು ಕುಟುಂಬಸ್ಥರು, ಸಹೋದ್ಯೋಗಿಗಳು ಹಾಗೂ ಹಿತೈಷಿಗಳು ಶುಭ ಹಾರೈಸಿದ್ದಾರೆ.