
ಬೆಳ್ತಂಗಡಿ: ತಾಲೂಕಿನ ಬಂದಾರು ಗ್ರಾಮದ ಬೈಪಾಡಿ ಸಮೀಪದ ಕುರಿಯಾಳ ನಿವಾಸಿ, 9ನೇ ತರಗತಿ ವಿದ್ಯಾರ್ಥಿ ಶ್ರವಣ್ ಬಿ.ಕೆ. (14) ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಆ.30ರಂದು ಬೆಳಗ್ಗೆ ನಡೆದಿದೆ.
ಭರತ್ ಗೌಡ ಅವರ ಪುತ್ರನಾದ ಶ್ರವಣ್, ಬೆಳ್ತಂಗಡಿ ನಗರದ ಹಳೆಕೋಟೆಯಲ್ಲಿರುವ ವಾಣಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಆ.29ರಂದು ಸಂಜೆ ಕುಟುಂಬದವರು ಬಾಲಕನ ಹುಟ್ಟುಹಬ್ಬವನ್ನು ಆಚರಿಸಿದ್ದರು. ಮರುದಿನ ಬೆಳಗ್ಗೆ ಮನೆಯ ಮೇಲ್ಚಾವಣಿಯ ಕೊಠಡಿಯಲ್ಲಿ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಆ.29ರಂದು ಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಬಾಲಕ ಕಡಿಮೆ ಅಂಕ ಗಳಿಸಿರುವ ಕುರಿತು ಶಿಕ್ಷಕರು ಪೋಷಕರಿಗೆ ಮಾಹಿತಿ ನೀಡಿದ್ದರು. ಇದರಿಂದ ಬಾಲಕ ನೊಂದುಕೊಂಡಿದ್ದ ಎನ್ನಲಾಗಿದೆ. ಘಟನೆಗೆ ನಿಖರ ಕಾರಣ ತನಿಖೆಯಿಂದ ತಿಳಿದುಬರಬೇಕಿದೆ.
ಮೃತ ಬಾಲಕ ತಂದೆ, ತಾಯಿ, ಸಹೋದರಿ ಹಾಗೂ ಬಂಧು-ಬಳಗವನ್ನು ಅಗಲಿದ್ದಾನೆ.
ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.