ಉಜಿರೆ: “ಜೀವ ಮರಳಿ ಬಂದಂತಾಗಿದೆ. ಮಗು ಹಿಂತಿರುಗಿದ ಬಳಿಕ ಮನೆಯಲ್ಲಿ ಸಂಭ್ರಮವಿದೆ. ನೋವಿನ ಸಂದರ್ಭದಲ್ಲಿ ಪೋಲೀಸರು ಹಾಗೂ ಊರವರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಕಣ್ಣ ಮುಂದೆಯೇ ಮಗುವನ್ನು ಅಪಹರಣಕಾರರು ಎಳೆದೊಯ್ಯುವುದನ್ನು ನೋಡಿ ಭಯ, ನೋವು ಉಂಟಾಯಿತು. ಮೊಮ್ಮಗ ಮರಳಿ ಬರಲು ಸಹಾಯ ಮಾಡಿದ ಎಲ್ಲರಿಗೂ ಕೃತಜ್ಞತೆಗಳು. ಅದೇ ರೀತಿ ಮುಂದೆ ಈ ರೀತಿ ಎಲ್ಲಿಯೂ ಘಟನೆ ನಡೆಯದಂತೆ ಪೋಷಕರು ಎಚ್ಚರ ವಹಿಸಬೇಕು” ಎಂದು ಅಪಹರಣಗೊಂಡು ಸುರಕ್ಷಿತವಾಗಿ ಮನೆ ಸೇರಿದ ಬಾಲಕ ಅನುಭವ್ ಅಜ್ಜ ಎ.ಕೆ. ಶಿವನ್ ಅವರ ಭಾವನಾತ್ಮಕ ನುಡಿಗಳು.
ಉಜಿರೆಯ ಅನುಭವ್ ಮನೆಯಲ್ಲಿ ಸಂತಸದ ಹೊನಲು ಹರಿದಾಡುತ್ತಿದ್ದು, ಮನೆಗೆ ಆಗಮಿಸುವವರಿಗೆ ಸಿಹಿ ಹಂಚುವ ಜೊತೆಗೆ ತಮ್ಮ ಅನುಭವ ಹಂಚಿಕೊಂಡರು.
ಮೊದಲ ಯುದ್ದ ಗೆದ್ದಿದ್ದಾನೆ:
ತನ್ನಂತೆ ಮೊಮ್ಮಗ ಸೈನ್ಯಕ್ಕೆ ಸೇರಲಿದ್ದಾನೆ. “ನೇವಿ” ಪಡೆಯ ಆಡ್ಮಿರಲ್ ಆಗಬೇಕೆಂಬುದು ಆತನ ಕನಸಾಗಿದೆ. ಈಗಾಗಲೇ ಯಾವುದೇ ಅಳುಕಿಲ್ಲದೆ ಮೊದಲ ಯುದ್ಧ ಗೆದ್ದಿದ್ದಾನೆ. ಮುಂದೆಯೂ ಇಂತಹ ಸವಾಲುಗಳನ್ನು ಎದುರಿಸಿ ಯಶಸ್ವಿ ಜೀವನ ನಡೆಸಲಿದ್ದಾನೆ. ಮಕ್ಕಳ ಬಗ್ಗೆ ಪೋಷಕರು ಕಾಳಜಿ ವಹಿಸಬೇಕು ಎಂದರು.
ಆತ್ಮರಕ್ಷಣಾ ಕಲೆ ಕಲಿಸಿ:
ಅನುಭವ್ ತಾಯಿ ಸರಿತಾ ಹಾಗೂ ತಂದೆ ಬಿಜೋಯ್ ಮಾತನಾಡಿ “ಮಕ್ಕಳನ್ನು ಕರೆದೊಯ್ಯುವಾಗ ಪೋಷಕರು ಎಚ್ಚರ ವಹಿಸಬೇಕಿದೆ. ಯಾರಾದರೂ ನಮ್ಮ ಹಿಂದೆ ಬರುತ್ತಿದ್ದಾರೆಯೇ? ಅನುಮಾನಸ್ಪದ ರೀತಿಯಲ್ಲಿ ಹಿಂಬಾಲಿಸುತ್ತಿದ್ದಾರೆಯೇ ಎಂಬುದನ್ನು ಗಮನಿಸಬೇಕು. ಮುಖ್ಯವಾಗಿ ಮಕ್ಕಳಿಗೆ ತುರ್ತು ಸಂದರ್ಭದಲ್ಲಿ ಎದುರಿಸಲು ಸಾಧ್ಯವಾಗುವಂತೆ ಆತ್ಮರಕ್ಷಣಾ ಕಲೆಗಳನ್ನು ಕಲಿಸಿದಲ್ಲಿ ಮುಂದೆ ಸಹಾಯವಾಗಲಿದೆ. ಇದರಿಂದ ಸಣ್ಣ ಪುಟ್ಟ ಉಪಾಯ ಬಳಸಿ ತಪ್ಪಿಸಿಕೊಳ್ಳಬಹುದು. ಇದು ಪುಟ್ಟ ಮಕ್ಕಳಿಗೆ ಸಹಾಯವಾಗಲಿದೆ” ಎಂದರು.
ಅನುಭವ್ ಅಜ್ಜಿ ಒಮನ ಮಾತನಾಡಿ, ಸ್ಥಳೀಯರು ಹಾಗೂ ಎಲ್ಲರ ಹಾರೈಕೆಯಿಂದ ಮೊಮ್ಮಗ ವಾಪಸ್ ಬಂದಿದ್ದಾನೆ. ಪೊಲೀಸ್ ಇಲಾಖೆಯೂ ಉತ್ತಮ ಸಹಕಾರ ನೀಡಿದೆ. ಎಲ್ಲರ ಹಾರೈಕೆಯಿಂದ ಮೊಮ್ಮಗ ವಾಪಸ್ ಬಂದಿದ್ದಾನೆ. ಎಲ್ಲರ ಹರಕೆಯ ಫಲವಾಗಿ ಮೊಮ್ಮಗ ಸುರಕ್ಷಿತವಾಗಿ ವಾಪಸ್ ಬಂದಿದ್ದು ಎಲ್ಲರಿಗೂ ಧನ್ಯವಾದಗಳು ಎಂದರು.
ಮನೆಗೆ ಸ್ಥಳೀಯರು, ಸಂಬಂಧಿಕರ ದೌಡು:
ಮನೆಗೆ ಆಗಮಿಸಿದ ಸುದ್ದಿ ತಿಳಿದು, ಭಾನುವಾರ ಉಜಿರೆಯ ಅನುಭವ್ ಮನೆಗೆ ಸ್ಥಳೀಯರು, ಸಂಬಂಧಿಕರು ಹಾಗೂ ಎ.ಕೆ. ಶಿವನ್ ಅವರ ಸ್ನೇಹಿತರು ಆಗಮಿಸಿ ಅನುಭವ್ ಬಳಿ ಮಾತನಾಡಿ, ಧೈರ್ಯ ತುಂಬಿ ಶುಭ ಹಾರೈಸಿದರು.