ಬೆಳ್ತಂಗಡಿ: ಅನಾರೋಗ್ಯ ಪೀಡಿತ ಯುವತಿಯನ್ನು ಪುತ್ತೂರಿನಿಂದ ಬೆಂಗಳೂರಿನ ಆಸ್ಪತ್ರೆಗೆ ಸಾಗಿಸುವ ಸಂದರ್ಭ ಬೆಂಗಾವಲು ವಾಹನದ ಸೋಗಿನಲ್ಲಿ ಆಂಬ್ಯುಲೆನ್ಸ್ ಸೇರಿ ಸುಮಾರು 15ಕ್ಕೂ ಹೆಚ್ಚು ವಾಹನಗಳು ಸಾಗಿರುವುದು ಹಾಗೂ ಖಾಸಗಿ ವಾಹನವೊಂದು ಬೇಕಾಬಿಟ್ಟಿ ವಾಹನ ಚಾಲನೆ ಮಾಡಿ, ಬಾಲಕನೋರ್ವ ಕೂದಲೆಳೆ ಅಂತರದಲ್ಲಿ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆಗೆ ಕಾರಣವಾಗಿದೆ.
ಬುಧವಾರ ಬೆಳಗ್ಗೆ ಆಂಬ್ಯುಲೆನ್ಸ್ ನಲ್ಲಿ ಯುವತಿಯೊಬ್ಬರನ್ನು ಬೆಂಗಳೂರಿಗೆ ಕೊಂಡೊಯ್ಯಲಾಗಿದೆ, ಆದರೆ ಮೊದಲೇ ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅರಿವು ಮೂಡಿಸಲಾಗಿತ್ತು, ಆಂಬ್ಯುಲೆನ್ಸ್ ಗೆ ಸಾಮಾನ್ಯವಾಗಿ ಸಾರ್ವಜನಿಕರು ದಾರಿ ಬಿಟ್ಟು ಕೊಡುತ್ತಾರೆ. ಇಲ್ಲವಾದಲ್ಲಿ ಮುಂದಿನಿಂದ ದಾರಿ ಮಾಡಿಕೊಡಲು ಒಂದು ಆಂಬ್ಯುಲೆನ್ಸ್ ಇತ್ತು, ಆದರೂ ಕೆಲವು ಸಂಘ ಸಂಸ್ಥೆಗಳು ಕೇವಲ ಹೆಸರಿಗಾಗಿ, ಬಿಟ್ಟಿ ಪ್ರಚಾರಕ್ಕೆ ಇಂತಹಾ ಅತಿರೇಕದ ವರ್ತನೆ ಪ್ರದರ್ಶಿಸಿವೆ ಎಂಬ ಟೀಕೆಗಳು ವ್ಯಕ್ತವಾಗಿವೆ.
ತಪ್ಪಿದ ಜೀವಹಾನಿ!:
ಮಧ್ಯಾಹ್ನ 1.15ರ ಸುಮಾರಿಗೆ ಹಾಸನ ನಗರದ ತಣ್ಣಿರು ಹಳ್ಳ ತಲುಪಿ ಪಕ್ಕದ ಬೈಪಾಸ್ ರಸ್ತೆಗೆ ತಿರುವು ಪಡೆಯುವಾಗ ಬೆಂಗಾವಲು ವಾಹನವೊಂದರ ಚಾಲಕ ತಿರುವಿನಲ್ಲಿ ಬೇಜವಾಬ್ದಾರಿಯಾಗಿ, ಸಿನಿಮೀಯ ರೀತಿಯಲ್ಲಿ ಯಾವುದೇ ಮುಂಜಾಗ್ರತೆ ಕೈಗೊಳ್ಳದೆ ಬೇಕಾಬಿಟ್ಟಿ ವಾಹನ ಚಾಲನೆ ಮಾಡಿದ್ದಾನೆ. ಈ ಸಂದರ್ಭ ವಾಹನದಲ್ಲಿದ್ದವರು ಅನಗತ್ಯವಾಗಿ ಹೊರಗೆ ತಮ್ಮ ದೇಹವನ್ನ ಚಾಚಿದ್ದು ಸ್ಪಷ್ಟವಾಗಿ ಕಾಣುತ್ತದೆ. ಹೀಗೆ ಬೇಜವಾಬ್ದಾರಿಯಾಗಿ ಚಲಿಸಿದ್ದು, ಅಲ್ಲೆ ರಸ್ತೆ ಪಕ್ಕ ಸೈಕಲ್ ನಲ್ಲಿ ಇದ್ದ ಬಾಲಕನ ಸೈಕಲ್ ಗೆ ಕೂದಲೆಳೆ ಅಂತರದಲ್ಲಿ ತಗುಲಿದಂತೆ ಕಂಡುಬಂತು. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹೀಗೆ ಬೆಂಗಾವಲು ವಾಹನದ ನೆಪದಲ್ಲಿ ಸಾರ್ವಜನಿಕರಿಗೆ ಭೀತಿ ಹುಟ್ಟಿಸುವ ರೀತಿ, ನಡೆದುಕೊಂಡಿರುವುದಕ್ಕೂ ಟೀಕೆ ವ್ಯಕ್ತವಾಗಿದೆ.
15ಕ್ಕೂ ಹೆಚ್ಚು ವಾಹನಗಳು:
ಆಂಬ್ಯುಲೆನ್ಸ್ ಸಾಗಲು ಸಹಾಯ ಮಾಡಲು ಕನಿಷ್ಠ ದಾರಿ ಬಿಟ್ಟುಕೊಟ್ಟಿದ್ದರೆ, ಟ್ರಾಫಿಕ್ ನಿರ್ವಹಿಸಲು ಸಹಾಯ ಮಾಡಿದ್ದರೆ ದೊಡ್ಡ ಉಪಕಾರವಾಗುತ್ತಿತ್ತು. ಪುತ್ತೂರಿನ ಪಡೀಲು ಎ.ಪಿ.ಎಂ.ಸಿ. ಕ್ರಾಸ್ ಬಳಿ ಆಂಬ್ಯುಲೆನ್ಸ್ ಜೊತೆ ಕೇವಲ ನಾಲ್ಕು ವಾಹನಗಳು ಇದ್ದವು. ಒಂದು ಖಾಸಗಿ ವಾಹನ, ಎರಡು ಆಂಬ್ಯುಲೆನ್ಸ್, ಮುಂಭಾಗದಲ್ಲಿ ಒಂದು ಟ್ರಾಫಿಕ್ ಪೊಲೀಸ್ ಜೀಪ್ ಮಾತ್ರ ಬೆಂಗಾವಲಾಗಿ ಹೊರಟಿವೆ. ಉಪ್ಪಿನಂಗಡಿ ಬಳಿ ಇದರ ಸಂಖ್ಯೆ ರೋಗಿಯಿದ್ದ ಆಂಬ್ಯುಲೆನ್ಸ್ ಹೊರತುಪಡಿಸಿ ಏಳಕ್ಕೆ ಏರಿದೆ. ಇದರಲ್ಲಿ ನಾಲ್ಕು ಆಂಬ್ಯುಲೆನ್ಸ್, ಎರಡು ಖಾಸಗಿ ವಾಹನಗಳು, ಒಂದು ಪುತ್ತೂರಿನಿಂದ ಹೊರಟಿದ್ದ ಟ್ರಾಫಿಕ್ ಪೊಲೀಸ್ ಜೀಪ್ ಸೇರಿವೆ. ಗುರುವಾಯನಕೆರೆ- ಬೆಳ್ತಂಗಡಿ- ಉಜಿರೆ ತಲುಪುವ ಸಂದರ್ಭ ಮೂರು ಆಂಬ್ಯಲೆನ್ಸ್, ಎರಡು ಖಾಸಗಿ (ರಿಟ್ಸ್ ಹಾಗೂ ಇನ್ನೋವಾ) ವಾಹನ ಸೇರಿ 5 ವಾಹನಗಳು ತೆರಳಿವೆ. ಮೂಡಿಗೆರೆ ಬಳಿ ಮುಖ್ಯ ಆಂಬ್ಯುಲೆನ್ಸ್ ಹೊರತುಪಡಿಸಿ 7 ವಾಹನಗಳು ತೆರಳಿವೆ. ಬೇಲೂರು ಬಳಿ ಒಟ್ಟು 11 ವಾಹನಗಳು ತೆರಳಿವೆ. ಎರಡು ಪೊಲೀಸ್ ವಾಹನ, ಐದು ಖಾಸಗಿ ವಾಹನಗಳು, ನಾಲ್ಕು ಆಂಬ್ಯುಲೆನ್ಸ್ ಗಳು ಸೇರಿವೆ. ಹಾಸನ ಬಳಿ ಮುಖ್ಯ ರಸ್ತೆ ಸೇರುವ ಸಂದರ್ಭ 16 ವಾಹನಗಳು ಬೆಂಗಾವಲಾಗಿ ತೆರಳಿವೆ. ಇದರಲ್ಲಿ 9 ಖಾಸಗಿ ವಾಹನಗಳು, 7 ಆಂಬ್ಯುಲೆನ್ಸ್ ಸೇರಿವೆ ಎಂಬುದು ಸಾರ್ವಜನಿಕರ ಆಕ್ಷೇಪಣೆಗೆ ಕಾರಣವಾಗಿದೆ. ಮಂಗಳೂರು- ಬೆಂಗಳೂರು ಹೆದ್ದಾರಿಯ ಟೋಲ್ ಗೇಟ್ ಬಳಿ ಮುಖ್ಯ ಆಂಬ್ಯುಲೆನ್ಸ್ ಹೊರತುಪಡಿಸಿ 9 ವಾಹನಗಳು ಸಾಗಿದ ದೃಶ್ಯಗಳು ಲಭಿಸಿವೆ.
ಅಪಾಯಕಾರಿ ವರ್ತನೆ:
ಹಾಸನ ಬಳಿ ತಿರುವೊಂದರ ಬಳಿ ಖಾಸಗಿ ವಾಹನಗಳು ಅಪಾಯಕಾರಿಯಾಗಿ ಸಾಗಿವೆ, ಜೊತೆಗೆ ವಾಹನದಲ್ಲಿ ಸಾಗುತ್ತಿದ್ದವರು ಅಪಾಯಕಾರಿಯಾಗಿ ಹೊರಗೆ ದೇಹವನ್ನು ಚಾಚಿಕೊಂಡಿದ್ದ ದೃಶ್ಯಕ್ಕೆ ಸಾರ್ವಜನಿಕರು ಟೀಕೆಗಳ ಸುರಿಮಳೆಗರೆದಿದ್ದು, ಅತೀರೇಕವಾಗಿ ವರ್ತಿಸಲಾಗಿದೆ, ಯಾವುದು ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್, ಯಾವುದು ಎಂಬುದೇ ತಿಳಿಯುತ್ತಿರಲಿಲ್ಲ. ಬೆಂಗಾವಲು ವಾಹನಗಳಿಂದಾಗಿಯೇ ಮುಖ್ಯ ಆಂಬ್ಯಲೆನ್ಸ್ ಸುಮಾರು 10ರಿಂದ 15 ನಿಮಿಷಗಳಷ್ಟು ತಡವಾಗಿರಬಹುದು, ಇಲ್ಲವಾದಲ್ಲಿ ಇನ್ನೂ ಬೇಗ ಆಸ್ಪತ್ರೆ ತಲುಪಬಹುದಾಗಿತ್ತು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಸರಿದು ನಿಂತಿದ್ದ ಸಾರ್ವಜನಿಕರು:
ಆಂಬ್ಯುಲೆನ್ಸ್ ಸಾಗುವ ಸಂದರ್ಭ ಮೊದಲೇ ತಿಳಿಸಿದ್ದರಿಂದ ಸಾರ್ವಜನಿಕರು ದಾರಿ ಬಿಟ್ಟು ಕೊಡುತ್ತಿದ್ದರು. ಈ ಅನಗತ್ಯ ವಾಹನಗಳನ್ನು ಬೆಂಗಾವಲಾಗಿ ಬಳಸಬೇಕಾದ ಅವಶ್ಯಕತೆ ಇರಲಿಲ್ಲ. ಇತ್ತೀಚೆಗೆ ಚಿಕ್ಕಮಗಳೂರಿನ ಮೂಡಿಗೆರೆಯಿಂದ ತುರ್ತು ರೋಗಿಯನ್ನು ಸಾಗಿಸುತ್ತಿದ್ದ ಸಂದರ್ಭ ಸೈರನ್ ಕೆಟ್ಟು ಹೋಗಿದ್ದ ಸಂದರ್ಭ ಒಂದು ಅಥವಾ ಎರಡು ಆಂಬ್ಯುಲೆನ್ಸ್ ಗಳು ಮಾತ್ರ ಬೆಂಗಾವಲಾಗಿ ತೆರಳಿದ್ದರೂ, ಶೀಘ್ರವಾಗಿ ಆಸ್ಪತ್ರೆ ತಲುಪುವಂತಾಗಿತ್ತು. ಬೆಂಗಾವಲು ಹೆಸರಿನಲ್ಲಿ ಅನಗತ್ಯ ವಾಹನಗಳು ತೆರಳಿದ ಪರಿಣಾಮ ರೋಗಿಗೂ ಸಮಸ್ಯೆಯಾಗಿದೆ ಎಂಬುದು ಸಾರ್ವಜನಿಕರ ಕಾಳಜಿಯಾಗಿದೆ.
ತುರ್ತು ಆಂಬ್ಯುಲೆನ್ಸ್ ತೆರಳುವ ಸಂದರ್ಭ ಬೆಂಗಾವಲು ಹೆಸರಿನಲ್ಲಿ ರೋಗಿಗಳಿಗೆ ಸಮಸ್ಯೆ ಉಂಟಾಗದಿರಲಿ, ಅತೀ ಶೀಘ್ರವಾಗಿ ಆಸ್ಪತ್ರೆ ತಲುಪುವಂತಾಗಲಿ ಎಂಬುದು ‘ಪ್ರಜಾಪ್ರಕಾಶ’ ತಂಡದ ಆಶಯ.