ಬೆಳ್ಳಿ ಪರದೆಯಲ್ಲಿ ‘ತುಳುನಾಡು ರಾಣಿ’ಯ ಸಾಹಸ: ‘ಅಬ್ಬಕ್ಕ’ ಅರಬ್ಬೀ ಸಮುದ್ರದ ಅಭಯರಾಣಿ ಸಿನಿಮಾ ಪೋಸ್ಟರ್ ಬಿಡುಗಡೆ: ‘ಆಕ್ಟ್ 1978’ ನಿರ್ದೇಶಕ ಮಂಸೋರೆ ನಿರ್ದೇಶನ: 6 ಭಾಷೆಗಳಲ್ಲಿ ಬಿಡುಗಡೆ!

ಬೆಂಗಳೂರು: “ಮೋಡಗಳೆಲ್ಲಾ ರಕ್ತವರ್ಣ… ಸಮುದ್ರವೆಲ್ಲ ಅಗ್ನಿಕುಂಡ… ಭೂಭಾಗದ ತುಂಬೆಲ್ಲಾ ಅಧಿಕಾರದ ದಾಹ, ಸ್ವಾರ್ಥದ ವಿಷದುಸಿರು… ಬೆನ್ನ ಹಿಂದೆ ಇರಿಯುವ, ಕಣ್ಣ ಮುಂದೆಯೂ ಗುಂಡಿಕ್ಕುವ ಶತ್ರುಗಳು…! ತಾಯಿನಾಡು, ತಮ್ಮತನ, ತನ್ನವರಿಗಾಗಿ ಉಪ್ಪಿನ ಹಬೆಯಲ್ಲಿ ಬಿಸಿನೆತ್ತರ ಹರಿಸಿ ಹೋರಾಡಿ ಇತಿಹಾಸದ ಪುಟಗಳಲ್ಲಿ ಕಂಡು ಕಾಣದಂತೆ ಉಳಿದುಹೋದ ವೀರಚರಿತ್ರೆ- ಅರಬ್ಬೀ ಸಮುದ್ರದ ಅಭಯರಾಣಿ ಅಬ್ಬಕ್ಕ..!!” ಹೀಗೆ ಪವರ್ ಫುಲ್ ಸಾಲುಗಳೊಂದಿಗೆ ತಮ್ಮ ಮುಂದಿನ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ ‘ಆಕ್ಟ್- 1978’ ನಿರ್ದೇಶಕ ಮಂಸೋರೆ ಮತ್ತು ತಂಡ.

6 ಭಾಷೆಗಳಲ್ಲಿ ಬಿಡುಗಡೆ:
ತುಳು, ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ 6 ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಲಿದ್ದು, ಸತ್ಯಾ ಹೆಗಡೆ ಛಾಯಾಗ್ರಹಣ ಇರಲಿದೆ.‌ ಈಗಾಗಲೇ ಮಂಸೋರೆ ನಿರ್ದೇಶನದ ಹರಿವು, ನಾತಿಚರಾಮಿ, ಆಕ್ಟ್- 1978 ಸಿನಿಪ್ರಿಯರ ಮನಗೆಲ್ಲುವ ಜೊತೆಗೆ ವಿಮರ್ಶಕರ ಮನಗೆಲ್ಲುವಲ್ಲಿಯೂ ಯಶಸ್ವಿಯಾಗಿತ್ತು. ಇದೀಗ ಕರಾವಳಿಯ ಇತಿಹಾಸವನ್ನು ‌ಮತ್ತೆ ತೆರೆಯಮೇಲೆ ಸೃಷ್ಟಿಸಲು ಮಂಸೋರೆ ಸಿದ್ಧವಾಗಿದ್ದಾರೆ. ಪೋಸ್ಟರ್ ಗಮನಿಸಿದರೆ ಇದೊಂದು ಬಿಗ್ ಬಜೆಟ್ ಸಿನಿಮಾದಂತೆ ಕಾಣುತ್ತಿದೆ. ಚಿತ್ರದ ತಾರಾಗಣದ ಕುರಿತು ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

ಭರ್ಜರಿ ತಯಾರಿ:
ಅಬ್ಬಕ್ಕ ಐತಿಹಾಸಿಕ ‌ಸಿನಿಮವಾದ ಕಾರಣ ‌ರಾಣಿ ಅಬ್ಬಕ್ಕ ಚೌಟ ಅವರ ಇತಿಹಾಸ ಅಧ್ಯಯನಕ್ಕೆ ದೊಡ್ಡ ತಂಡ ರಚಿಸಲಾಗಿದೆ. ಪಾತ್ರವರ್ಗ ಹಾಗೂ‌ ನಿರ್ಮಾಣ ಸಂಸ್ಥೆಯ ಬಗ್ಗೆ ಕುತೂಹಲ ‌ಮೂಡಿದ್ದು, ಸಂಕ್ರಾಂತಿಗೆ ಈ ಚಿತ್ರದ ನಿರ್ಮಾಣ ಸಂಸ್ಥೆ, ಅಬ್ಬಕ್ಕನ ಪಾತ್ರದಾರಿಯ ಪರಿಚಯ ಮಾಡಲಾಗುವುದು ಎಂಬ ಮಾಹಿತಿ ‌ಲಭಿಸಿದೆ. ಒಟ್ಟು 200 ದಿನಗಳ ಕಾಲ ಕರ್ನಾಟಕ, ಕೇರಳ, ರಾಜಸ್ಥಾನ, ಹೈದಾರಬಾದ್‌ನಲ್ಲಿ ಶೂಟಿಂಗ್‌ ನಡೆಸಲು‌ ಯೋಜನೆ‌ ರೂಪಿಸಲಾಗಿದೆ.

ತುಳು ಕಲಾವಿದರ ಅಭಿನಯ:
ಯುದ್ಧದ ‌ನೈಜತೆ‌ ಹಾಗೂ ಹಳೆ ಕಾಲದ ವೈಭವ ನೆನಪಿಸಲು‌ ವಿವಿಧ 20 ರಿಂದ 25 ಸೆಟ್‌ಗಳ ನಿರ್ಮಾಣ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ.‌ ಮುಖ್ಯವಾಗಿ ಸಮುದ್ರದ ಸೆಟ್‌ಗಳು ಹಾಗೂ ವಾರ್‌ ಫೀಲ್ಡ್‌ ಸೆಟ್‌ಗಳು ಪ್ರಮುಖವಾಗಲಿದೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ 15 ಮಂದಿ ಪ್ರಮುಖ ಪಾತ್ರಧಾರಿಗಳು, 200 ರಿಂದ 250 ಇತರ ಕಲಾವಿದರು ಬಣ್ಣ ಹಚ್ಚಲಿದ್ದಾರೆ. ಮಲಯಾಳಂ, ಪೋರ್ಚುಗೀಸ್‌ ಕಲಾವಿದರು, ತುಳು ಹಾಗೂ ರಂಗಭೂಮಿ ನಟರು ನಟಿಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ರಾಣಿ ಅಬ್ಬಕ್ಕ:
ಅಬ್ಬಕ್ಕ ರಾಣಿ ಅಥವಾ ‘ಅಬ್ಬಕ್ಕ ಮಹಾದೇವಿ’ ತುಳುನಾಡಿನ ರಾಣಿಯಾಗಿದ್ದಳು. ಇವರು 17ನೇ ಶತಮಾನದ ದ್ವಿತೀಯಾರ್ಧದಲ್ಲಿ ಪೋರ್ಚುಗೀಸರೊಡನೆ ಹೋರಾಡಿದಳು. ರಾಣಿಯು ದೇವಾಲಯಗಳ ನಗರಿ ಮೂಡುಬಿದಿರೆಯ ಪ್ರದೇಶ ವನ್ನಾಳಿದ ಚೌಟ ವಂಶಕ್ಕೆ ಸೇರಿದವರಾಗಿದ್ದಾರೆ. ಬಂದರು ಇವರ ನಗರಿ ಉಳ್ಳಾಲವು ರಾಜಧಾನಿಯಾಗಿದ್ದಿತು. ಆಯಕಟ್ಟಿನ ಪ್ರದೇಶವಾದ ಉಳ್ಳಾಲವನ್ನು ವಶಪಡಿಸಿಕೊಳ್ಳಲು ಪೋರ್ಚುಗೀಸರು ಯತ್ನಿಸಿದಾಗ ರಾಣಿಯು ನಾಲ್ಕು ದಶಕಗಳಕಾಲ ಹಿಮ್ಮೆಟ್ಟಿಸಿದ್ದಾರೆ. ಅವಳ ಧೈರ್ಯದಿಂದಾಗಿ ‘ಅಭಯ ರಾಣಿ’ಎಂದು ಹೆಸರಾಗಿದ್ದಳು. ವಸಾಹಶಾಷಿಗಳ ವಿರುದ್ಧ ಹೋರಾಡಿದ ಮೊದಲ ಭಾರತೀಯೆ ಹಾಗೂ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಎಂಬ ಖ್ಯಾತಿಗೂ‌ ಪಾತ್ರವಾಗಿದ್ದಾರೆ.

ಇದೀಗ ತುಳುನಾಡಿನ ವೀರ ನಾರಿಯ ಸಾಹಸ ಕಥೆಗಳು ತೆರೆಯ ಮೇಲೆ ಯಾವ ರೀತಿ ಮೂಡಲಿದೆ ಎಂಬ ಕುತೂಹಲ ‌ಮೂಡಿದೆ.

error: Content is protected !!