ಪ್ರಜಾಪ್ರೀತಿಗೆ ಹೆಸರು ಪಡೆದಿದ್ದ ಅಜಿಲ ರಾಜಮನೆತನ: ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರಿಗೆ ಇಂದು ಪಟ್ಟಾಭಿಷೇಕ ರಜತ ಸಂಭ್ರಮ: ಅಜಿಲ ಸಂಸ್ಥಾನದ 21ನೇ ಅರಸರು

  • -ಬರಹ : ಚಂದ್ರಶೇಖರ್ ಎಸ್. ಅಂತರ

ಅಳದಂಗಡಿ: ತುಳುನಾಡಿನಲ್ಲಿ ಅನೇಕ ಅರಸು ಮನೆತನಗಳಲ್ಲಿ 1154ರಿಂದ 1550ರವರೆಗೆ ಸ್ವತಂತ್ರವಾಗಿ ತುಳುನಾಡಿನ 12 ಮಾಗನೆ ರಾಜ್ಯಭಾರ ನಡೆಸಿದ ಕೀರ್ತಿ ಅಜಿಲ ವಂಶಸ್ಥರದ್ದು. ಶಾಂತಿ, ಅಹಿಂಸೆ, ಸಹಬಾಳ್ವೆಗೆ ಪ್ರಖ್ಯಾತಿ ಪಡೆದಿದ್ದ ಅಜಿಲ ರಾಜಮನೆತನ ಪ್ರಜಾಪ್ರೀತಿಗೆ ಹೆಸರು ಪಡೆದಿತ್ತು. ತುಳುನಾಡಿನಲ್ಲಿ ಯಥೇಚ್ಛ ಭತ್ತ ಬೆಳೆಯುವ ಸಂಸ್ಥಾನ, ಅಕ್ಕಿಯ ಅಜಿಲರು, ಅನ್ನ ನೀಡೋ ಸಂಸ್ಥಾನ ಎಂದೇ ಈ ವಂಶದ ಖ್ಯಾತಿ.
ಅಜಿಲ ಸಂಸ್ಥಾನದ 21ನೇ ಅರಸರಾಗಿ 1995ರಲ್ಲಿ ಅಳದಂಗಡಿ ಅರಮನೆಯಲ್ಲಿ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಪಟ್ಟಾಭಿಷೇಕಗೊಂಡು ತಮ್ಮ ಸಂಸ್ಥಾನದ ಹಿರಿಮೆ-ಗರಿಮೆಯನ್ನು ಉಳಿಸಿ, ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಜನಾನುರಾಗಿಯಾಗಿ ಪ್ರಜಾಪ್ರೀತಿಯನ್ನು ಗಳಿಸಿಕೊಂಡಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲೂ ತಮ್ಮ ಚೌಕಟ್ಟಿನಲ್ಲಿ ಅನೇಕ ಜನೋಪಯೋಗಿ ಕಾರ್ಯಗಳನ್ನು ಮಾಡುತ್ತ ಅಳದಂಗಡಿ ಸೀಮೆಯ ಜನರಿಗೆ ಪ್ರೀತಿ ಅಭಿಮಾನದ ಅರಸರಾಗಿ ಕೀರ್ತಿಗಳಿಸಿದ್ದಾರೆ. ಇದೀಗ ಅವರಿಗೆ ಅರಸೊತ್ತಿಗೆಯ ಪಟ್ಟವೇರಿ 25 ವರ್ಷ ಸಂದಿದ್ದು ರಜತ ಸಂಭ್ರಮದಲ್ಲಿದ್ದಾರೆ.


ಸರಳತೆಯ ಹಿರಿತನ:
ಪದ್ಮಪ್ರಸಾದ ಅಜಿಲ ಅರಸರದ್ದು ಸರಳ ವ್ಯಕ್ತಿತ್ವ. ಸಂಯಮದ ನಡೆ, ಪ್ರೀತಿಯ ನುಡಿ. ಸೌಮ್ಯ ಸ್ವಭಾವ. ಕಷ್ಟ ಎಂದು ಬಂದವರಿಗಾಗಿ ಮಿಡಿವ ಹೃದಯ. ಕಟ್ಟುಪಾಡುಗಳಲ್ಲಿ ಶಿಸ್ತು ಸಂಪ್ರದಾಯವನ್ನು ಅನೂಚಾನವಾಗಿ ಪಾಲಿಸುವ ಬದ್ಧತೆ. ವೃತ್ತಿಯಲ್ಲಿ ವೈದ್ಯರು, ಸ್ಟೆತೋಸ್ಕೋಪ್ ಹಿಡಿದು ಜನರ ಕಾಯಿಲೆಯನ್ನು ಪರೀಕ್ಷಿಸುತ್ತಾರೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ತುಳುನಾಡಿನ ಅರಸು ಮನೆತನದ ಸಂಪ್ರದಾಯಕ್ಕೆ ಬದ್ಧರಾಗಿರುತ್ತಾರೆ. ಶ್ವೇತವರ್ಣದ ಕಚ್ಚೆ ಉಡುಗೆ, ಶಾಲು ತೊಟ್ಟು ಧಾರ್ಮಿಕ ಕಾರ್ಯಕ್ರಮಗಳಿಗೆ ತೆರಳುವ ಇವರ ನಡಿಗೆಯ ಗಾಂಭೀರ್ಯ ವರ್ಣಿಸಲಸದಳ. ಅಭಿಮಾನದಿಂದ ಜನರು ಕರಗಳನ್ನು ಜೋಡಿಸಿ ಕೈ ಮುಗಿಯುತ್ತಾರೆ. ಸರ್ವರೊಳಗೊಂದಾಗಿ ಜೀವಿಸುವ ಇವರ ಜನಪ್ರಿಯ ಧೋರಣೆ ಎಲ್ಲರಿಗೂ ಅಚ್ಚುಮೆಚ್ಚು.
ದಾನ-ಧರ್ಮದ ಸಿರಿತನ:
ಧರ್ಮದ ಚೌಕಟ್ಟನ್ನು ಚಾಚೂ ತಪ್ಪದೆ ಪಾಲಿಸುವ ವಂಶ ಅಜಿಲರದ್ದು. ಕಿಂಚಿತ್ತೂ ಲೋಪವಾಗಬಾರದು ಎನ್ನುವ ಎಚ್ಚರದ ಮನಸ್ಸು ಅವರದ್ದು. ಅರಮನೆಯ ಧಾರ್ಮಿಕ ಕಟ್ಟುಪಾಡುಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ದಾನ-ಧರ್ಮದ ಕೈಂಕರ್ಯದಲ್ಲಿ ಸದಾ ಮುಂದು. ವೇಣೂರು ಭಗವಾನ್ ಶ್ರೀ ಬಾಹುಬಲಿ ಮೂರ್ತಿಯ ಪ್ರತಿಷ್ಠಾಪನೆಯನ್ನು 1704ರಲ್ಲಿ ಮಾಡಿದ ವೀರ ತಿಮ್ಮಣ್ಣಾಜಿಲರು ಕರ್ನಾಟಕದ ಚರಿತ್ರೆಯಲ್ಲಿ 3ನೇ ಗೋಮಟೇಶ್ವರನ ಪ್ರತಿಷ್ಠಾಪಕರೆಂದು ಕೀರ್ತಿಗೆ ಭಾಜನರಾದರು. ಅದಲ್ಲದೆ ಸೀಮೆಯ ಪ್ರಮುಖ ಸ್ಥಳಗಳಾದ ಅಳದಂಗಡಿ, ಬರಾಯ, ಕೇಳ, ವೇಣೂರು ಮುಂತಾದ ಕಡೆಗಳಲ್ಲಿ ದೇವಾಲಯ ಹಾಗೂ ಜಿನ ಮಂದಿರಗಳನ್ನು ನಿರ್ಮಿಸಿ ಸರ್ವಧರ್ಮ ಸಮತಾಭಾವವನ್ನು ಮೆರೆದವರು. ಈ ಸತ್ ಸಂಪ್ರದಾಯವನ್ನು ಇಂದಿನ ಅರಸರೂ ಮುಂದುವರಿಸಿದ್ದು, ದೇವಾಲಯಗಳ ಜೀರ್ಣೋದ್ಧಾರ, ಜಿನಮಂದಿರಗಳ ನಿರ್ಮಾಣ, ದೈವಗಳ ಗುಡಿ ನಿರ್ಮಾಣ ಕಾರ್ಯಗಳಲ್ಲಿ ತಮ್ಮಿಂದಾದ ಸಹಾಯವನ್ನು ಮಾಡುತ್ತಾರೆ. ಮಾರ್ಗದರ್ಶನವನ್ನು ನೀಡುತ್ತಾರೆ. ಸೀಮೆಯ ಪ್ರಮುಖ ದೇವಾಲಯ, ಜಿನಮಂದಿರಗಳು, ಭೂತಾಲಯಗಳು, ಜೀರ್ಣೋದ್ಧಾರಗೊಂಡು ಬ್ರಹ್ಮಕಲಶ, ಪಂಚಕಲ್ಯಾಣ, ಪುನರ್‌ಪ್ರತಿಷ್ಠಾ ಕಾರ್ಯಗಳು ನೆರವೇರಿದ್ದು, ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಧಾರ್ಮಿಕ ನೇತೃತ್ವವನ್ನು ವಹಿಸಿದ್ದಾರೆ. ನೊಂದವರಿಗೆ ಸಾಂತ್ವನ, ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸಹಾಯಹಸ್ತ, ಪ್ರೋತ್ಸಾಹವನ್ನು ನಿರಂತರ ಮಾಡುತ್ತಿದ್ದಾರೆ ಅರಸರು ಮತ್ತು ಅವರ ಕುಟುಂಬದವರು.
ಸಂಸ್ಕೃತಿಯ ಸಂಗಮ:
ಸೀಮೆಯಲ್ಲಿ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೊಡುಗೆಯನ್ನಿತ್ತಿದ್ದಾರೆ. ನೇಮೋತ್ಸವ, ಕಂಬಳ, ಯಕ್ಷಗಾನ ಕಲೆ ಇನ್ನಿತರ ಆಚರಣೆಗಳು ಇವರ ನೇತೃತ್ವದಲ್ಲಿ ನಡೆಯುತ್ತಿದೆ. ತುಳುನಾಡಿನ ಭವ್ಯ ಪರಂಪರೆಯನ್ನು ಪೋಷಿಸಿಕೊಂಡು ಬಂದಿರುತ್ತಾರೆ. ಅರಸು ಮನೆತನ ಮತ್ತು ತುಳುನಾಡಿನ ಸಂಸ್ಕೃತಿಯ ರಾಯಭಾರಿಯಾಗಿ ಬೆಸೆದುಕೊಂಡಿದ್ದಾರೆ.


ಖಾಸಗಿ ಜೀವನ:
ಪದ್ಮಪ್ರಸಾದ ಅಜಿಲರ ತಾಯಿ ಸರಸ್ವತಿಯಮ್ಮ ಸೀಮೆಯಲ್ಲಿ ವಾತ್ಸಲ್ಯ ಸ್ವರೂಪಿಯಾಗಿದ್ದರು. ಪದ್ಮಪ್ರಸಾದ ಅಜಿಲರ ಧರ್ಮಪತ್ನಿ ಮಧುರ ಸತ್‌ಸಂಪ್ರದಾಯವನ್ನು ಮುನ್ನಡೆಸುತ್ತಿದ್ದಾರೆ. ಮಕ್ಕಳಾದ ಪ್ರತೀಕ್ ಇವರು ಎಂ.ಡಿ. ಮಾಡುತ್ತಿದ್ದರೆ. ಪ್ರೌಸ್ಟಿಲ್ ಎಂ.ಬಿ.ಬಿ.ಎಸ್. ವ್ಯಾಸಂಗ ಮಾಡುತ್ತಿದ್ದಾರೆ. ಅರಸರ ಪ್ರತಿ ಹೆಜ್ಜೆಗೂ ಅವರ ತಮ್ಮ ಶಿವಪ್ರಸಾದ್ ಅಜಿಲರು ಹಾಗೂ ಅಕ್ಕ ಪುಷ್ಪಲತಾ ಬೆಂಬಲವಾಗಿದ್ದಾರೆ.
ಇಂದಿನ ಕಾರ್ಯಕ್ರಮ:
ಮಂಗಳವಾರ ಪೂರ್ವಾಹ್ನ ಗಂಟೆ -6.45ಕ್ಕೆ ಅಳದಂಗಡಿ ಶ್ರೀ ಸೋಮನಾಥೇಶ್ವರ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ.
-7 ಗಂಟೆಗೆ ಬರಾಯ ಅರಮನೆಯಲ್ಲಿ ಹಿರಿಯರ ಸ್ಮೃತಿ ಹಾಗೂ ಧರ್ಮದೇವತೆಗಳ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ
-7.30ಕ್ಕೆ ಅಳದಂಗಡಿ ದೊಡ್ಡ ಬಸದಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ.
-8 ಗಂಟೆಗೆ ಪಟ್ಟದ ಉಯ್ಯಾಲೆಯಲ್ಲಿ ಆಸೀನರಾಗಿ ಸೀಮೆಯ ಪ್ರಮುಖರಿಂದ ಗೌರವ ಸ್ವೀಕಾರ.
-8.30ರಿಂದ ಸಾರ್ವಜನಿಕರಿಂದ ಗೌರವ ಸ್ವೀಕಾರ ನಡೆಯಲಿದೆ.

error: Content is protected !!