ಬೆಳ್ತಂಗಡಿ: ಹಾವನ್ನು ದೇವರೆಂದು ಪೂಜಿಸಲಾಗುತ್ತದೆ. ಆದರೆ ನಿಜವಾದ ಹಾವು ಕಂಡಾಗ ಮಾತ್ರ ಭಯಪಟ್ಟು ದೂರನಿಲ್ಲುತ್ತೇವೆ. ಆದರೆ ಗೋಕಾಕ್‍ನ ಯುವಕರು ಕ್ಯಾನ್ಸರ್‍ನಿಂದ ನರಳುತ್ತಿದ್ದ ನಾಗರಹಾವಿನ ಆರೈಕೆ ಮಾಡಿ, ಹಾವು ಆರೋಗ್ಯವಂತವಾದ ಬಳಿಕ ಮತ್ತೆ ಕಾಡಿಗೆ ಬಿಡುವ ಮೂಲಕ ಮಾನವೀಯತೆ ಮೆರೆದು ಜನಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಗೋಕಾಕ ತಾಲೂಕಿನ ಕೊಣ್ಣೂರ ದುಪದಾಳ ಗ್ರಾಮದಲ್ಲಿ ಸ್ಥಳೀಯರಿಗೆ ನಾಗರ ಹಾವು ಕಾಣಿಸಿದ್ದು, ಖಾಯಿಲೆಯಿಂದ ಬಳಲುತ್ತಿರುವಂತೆ ಕಂಡುಬಂದ ಪರಿಣಾಮ ಸ್ಥಳೀಯ ಉರಗ ಪ್ರೇಮಿಗಳಾದ ಲಕ್ಷ್ಮಣ ಮಿಶಾಲೆ, ಪವನ ರಜಪುತ, ಸುಭಾಶ್ ಮೈತ್ರಿ ಅವರಿಗೆ ತಿಳಿಸಲಾಗಿದೆ.
ಬಾಯಿ ಕ್ಯಾನ್ಸರ್:
ನಾಗರಹಾವನ್ನು ಗ್ರಾಮದ ಉರಗ ಪ್ರೇಮಿಗಳು ರಕ್ಷಿಸಿದ್ದು, ಗಮನಿಸಿದಾಗ ಹಾವಿನ ಬಾಯಿಯಲ್ಲಿ ಯಾವುದೋ ವಸ್ತು ಕಂಡುಬಂದಂತೆ ತೋರಿದ್ದು, ಕೂಡಲೇ ಸ್ಥಳೀಯ ಪಶುವೈದ್ಯ ಡಾ. ಮರಗಲ್ಲಿ ಅವರ ಬಳಿ ಹಾವನ್ನು ಪರೀಕ್ಷಿಸಿದ್ದಾರೆ. ಈ ಸಂದರ್ಭ ಹಾವಿನ ಬಾಯಲ್ಲಿ ಗೆಡ್ಡೆ ರೀತಿ ಕಂಡುಬಂದಿದ್ದು, ಬಾಯಿಯ ಕ್ಯಾನ್ಸರ್ ಎಂದು ವೈದ್ಯರು ತಿಳಿಸಿದ್ದಾರೆ. ಒಂದು ವೇಳೆ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಹಾವಿನ ಪ್ರಾಣಕ್ಕೆ ಎದುರಾಗಬಹುದಾದ ಅಪಾಯದ ಕುರಿತು ಮಾಹಿತಿ ನೀಡಿದ್ದಾರೆ.
ಚಿಕಿತ್ಸೆ:
ಉರಗ ಪ್ರೇಮಿಗಳಾದ ಲಕ್ಷ್ಮಣ ಮಿಶಾಲೆ, ಪವನ ರಜಪುತ, ಸುಭಾಶ್ ಮೈತ್ರಿ ಅವರು ಹಾವಿನ ಆರೈಕೆಗೆ ಸಮ್ಮತಿ ಸೂಚಿಸಿದರು. ಪಶುವೈದ್ಯರಾದ ಡಾ. ಮರಗಲ್ಲಿ ಅವರು ಚಿಕಿತ್ಸೆ ನೀಡಿ ಗೆಡ್ಡೆಯನ್ನು ಬೇರ್ಪಡಿಸಿ, ಚಿಕಿತ್ಸೆ ನೀಡಿದ್ದಾರೆ. ಬಳಿಕ ಹಾವಿನ ಆರೈಕೆ ಮಾಡಿ, ನಾಗರ ಹಾವು ಆರೋಗ್ಯವಾದ ಬಳಿಕ ಕಾಡಿಗೆ ಬಿಡಲಾಗಿದೆ. ಈ ಮೂಲಕ ಉರಗ ಪ್ರೇಮಿಗಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.
ಜನಪರ ಕಾರ್ಯ:
ಲಕ್ಷ್ಮಣ ಮಿಶಾಲೆ, ಪವನ ರಜಪುತ, ಸುಭಾಶ್ ಮೈತ್ರಿ ಅವರು ಕೇವಲ ಹಾವು ಮಾತ್ರವಲ್ಲದೆ ಗಾಯಗೊಂಡ ಅಥವಾ ಅನಾರೋಗ್ಯ ಪೀಡಿತ ಪ್ರಾಣಿ, ಪಕ್ಷಿಗಳಿಗೆ ಚಿಕಿತ್ಸೆ ಕೊಡಿಸಿ ಆರೈಕೆ ಮಾಡುವ ಕಾರ್ಯವನ್ನು ಹಲವು ವರ್ಷಗಳಿಂದ ನಿಸ್ವಾರ್ಥವಾಗಿ ಮಾಡುತ್ತಿದ್ದಾರೆ. ಇವರ ಈ ಕಾರ್ಯ ಇಂತಹಾ ಮುಗ್ದ ಜೀವಿಗಳ ಆರೈಕೆಯ ವಿಚಾರ ಜಗತ್ತಿಗೆ ತಿಳಿಯಲಿ ಹಾಗೂ ಸಾರ್ವಜನಿಕರೂ ಅವರಿಗೆ ಬೆಂಬಲ ನೀಡುವ ಮೂಲಕ ಪ್ರೋತ್ಸಾಹ ನೀಡಲಿ ಎಂಬುದು ‘ಪ್ರಜಾಪ್ರಕಾಶ’ ತಂಡದ ಆಶಯ.